

ಬೇಲೂರು: ತಾಲೂಕಿನ ನಿಡುಮನಹಳ್ಳಿ ಗ್ರಾಮದಲ್ಲಿ ಕಾಫಿ ತೋಟಕ್ಕೆ ಗುರುವಾರ ರಾತ್ರಿ ಕಾಡಾನೆಗಳು ನುಗ್ಗಿ ತೆಂಗು, ಅಡಿಕೆ, ಕಾಫಿ ಹಾಗೂ ಬಾಳೆ ಬೆಳೆ ನಾಶ ಪಡಿಸಿವೆ.
ಬಿಕ್ಕೋಡು ಹೋಬಳಿಯಲ್ಲಿ ಬೀಡುಬಿಟ್ಟಿರುವ ಕಾಡಾನೆಗಳು ನಿಡುಮನಹಳ್ಳಿ ಗ್ರಾಮದ ಲೋಕೇಶ್ ಎಂಬುವರ ಕಾಫಿ ತೋಟಕ್ಕೆ ನುಗ್ಗಿವೆ. ತೋಟದಲ್ಲಿದ್ದ ಬೆಳೆ, ಕಬ್ಬಿಣದ ಗೇಟ್, ನೀರಿನ ಪೈಪ್‌ಗಳನ್ನು ಹಾನಿ ಮಾಡಿವೆ.
ಎರಡು ವರ್ಷಗಳಿಂದ ಕೈಗೆ ಬಂದ ತುತ್ತು ಬಾಯಿಗೆ ಬಾರದಂತಾಗಿದೆ. ಬೆಳೆ ಕೊಯ್ಲು ಮಾಡಬೇಕೆನ್ನುವಷ್ಟರಲ್ಲಿ ಕಾಡಾನೆಗಳ ಹಿಂಡು ತೋಟಕ್ಕೆ ದಾಳಿ ನಡೆಸಿ ಹಾಳು ಮಾಡುತ್ತಿವೆ. ಕಾಡಾನೆಗಳ ಸಮಸ್ಯೆಯನ್ನು ಶಾಶ್ವತವಾಗಿ ಪರಿಹರಿಸುವಂತೆ ಸಂಬಂಧಿಸಿದ ಅಧಿಕಾರಿಗಳು ಮತ್ತು ಸರ್ಕಾರಕ್ಕೆ ಮನವಿ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ. ತಕ್ಷಣವೇ ನಮ್ಮ ಸಮಸ್ಯೆಗಳ ನಿವಾರಣೆಗೆ ಸರ್ಕಾರ ಮುಂದಾಗಬೇಕು. ಇಲ್ಲವೇ ನಮ್ಮ ಜಮೀನು, ಆಸ್ತಿಗಳನ್ನು ಸರ್ಕಾರವೇ ಪಡೆದು ಪರ್ಯಾಯ ವ್ಯವಸ್ಥೆ ಕಲ್ಪಿಸಿದರೆ ನಾವೇ ಬೇರೆಡೆ ತೆರಳುತ್ತೇವೆ ತೋಟದ ಮಾಲೀಕ ಲೋಕೇಶ್ ಅಳಲು ತೋಡಿಕೊಂಡಿದ್ದಾರೆ.