

ನಾಪೋಕ್ಲು: ಮರಂದೋಡ ಗ್ರಾಮದ ಹಲವು ತೋಟಗಳಿಗೆ ನುಗ್ಗಿರುವ ಕಾಡಾನೆಗಳು ಕಾಫಿ, ಬಾಳೆ ಗಿಡಗಳನ್ನು ಧ್ವ್ವಂಸಗೊಳಿಸಿವೆ.
ಬಾಳೆ ಗಿಡಗಳನ್ನು ತಿಂದು, ತುಳಿದು ನಾಶಪಡಿಸಿದ್ದಲ್ಲದೆ ಎಳೆದುಕೊಂಡು ರಸ್ತೆಯಲ್ಲಿ ಬಿಟ್ಟು ಹೋಗಿವೆ. ಇಷ್ಟಕ್ಕೆ ತೃಪ್ತಿಯಾಗದ ಕಾಡಾನೆಗಳು ಗ್ರಾಮದ ನಿವಾಸಿ ಚೋಯಮಾಡಂಡ ಪೂರ್ಣಚ್ಚ ಅವರ ಮನೆ ಬಳಿ ಅಡ್ಡಾಡಿ ಕಿಟಕಿ ಒಳಗಿನಿಂದ ಮನೆಯೊಳಗಿದ್ದ ಮಕ್ಕಳ ಸಮವಸ್ತ್ರವನ್ನು ಸೊಂಡಿಲಿನಲ್ಲಿ ತೆಗೆದುಕೊಂಡು ಕಿತ್ತು, ಎಸೆದು ತುಳಿದಿರುವುದಾಗಿ ಅವರು ತಿಳಿಸಿದ್ದಾರೆ. ಕತ್ತಲಾಗುತ್ತಿದ್ದಂತೆ ರಸ್ತೆ ಹಾಗೂ ಗ್ರಾಮದ ದಾರಿಗಳಲ್ಲಿ ಅಡ್ಡಾಡುವ ಕಾಡಾನೆಗಳಿಂದ ಕಾರ್ಮಿಕರು, ವಿದ್ಯಾರ್ಥಿಗಳಿಗೆ ತೊಂದರೆಯಾಗಿದೆ. ಗ್ರಾಮಸ್ಥರು ಮನೆಗಳಿಂದ ಹೊರಗೆ ಬರಲು ಜೀವಭಯದಿಂದ ತತ್ತರಿಸಿ ಕಂಗಲಾಗಿದ್ದಾರೆ.
ಭತ್ತದ ಬಿತ್ತನೆಗಾಗಿ ಗದ್ದೆಗಳನ್ನು ಸಿದ್ಧಪಡಿಸಲಾಗಿದ್ದು ಬಿತ್ತನೆಗೂ ಮುನ್ನವೇ ಆನೆಗಳು ಗದ್ದೆಗಳಲ್ಲಿ ಅಡ್ಡಾಡಿವೆ. ಬಿತ್ತನೆ ಮುಗಿದ ನಂತರ ಮತ್ತೆ ಕಾಡಾನೆಗಳು ಪೈರುಗಳನ್ನು ಧ್ವಂಸ ಮಾಡುವ ಆತಂಕವಿದ್ದು ಭತ್ತದ ಕೃಷಿ ಮಾಡುವುದು ಅಸಾಧ್ಯವಾಗಿದೆ ಎಂದು ಚೋಯಮಾಡಂಡ ಹರೀಶ್ ಹಾಗೂ ಗ್ರಾಮಸ್ಥರು ಬೇಸರ ವ್ಯಕ್ತಪಡಿಸಿದ್ದಾರೆ. ಕೂಡಲೇ ಅಧಿಕಾರಿಗಳು ಕ್ರಮ ಕೈಗೊಂಡು ರೈತರಿಗೆ ಬೆಳೆ ನಷ್ಟಕ್ಕೆ ಪರಿಹಾರ ನೀಡಬೇಕೆಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.