

ಶೃಂಗೇರಿ: ತಾಲೂಕಿಗೆ ಬಂದ ಆನೆಯನ್ನು ಓಡಿಸಿದರೆ ಅದು ಮತ್ತೊಂದು ಗ್ರಾಮಕ್ಕೆ ತೆರಳಿ ಮತ್ತೆ ಬರುತ್ತದೆ. ಅದನ್ನು ಹಿಡಿದು ಸ್ಥಳಾಂತರಿಸಬೇಕು ಎಂದು ಶೃಂಗೇರಿ ಮಲೆನಾಡು ನಾಗರಿಕ ಹಕ್ಕುಗಳ ಹೋರಾಟ ಸಮಿತಿ ಅಧ್ಯಕ್ಷ ಅಂಬ್ಲೂರು ರಾಮಕೃಷ್ಣ ಒತ್ತಾಯಿಸಿದರು.
ಕಾಡಾನೆ ಹಾವಳಿ ತಡೆಗೆ ಬುಧವಾರ ಅರಣ್ಯ ಇಲಾಖೆಯಲ್ಲಿ ಮಲೆನಾಡು ನಾಗರಿಕ ಹಕ್ಕುಗಳ ಹೋರಾಟ ಸಮಿತಿಯಿಂದ ಆಯೋಜಿಸಿದ್ದ ಪ್ರತಿಭಟನಾ ಸಭೆಯಲ್ಲಿ ಮಾತನಾಡಿದರು. ಒಂದು ಕಡೆಯಿಂದ ಮತ್ತೊಂದು ಕಡೆ ತೆರಳುವ ಕಾಡಾನೆಯಿಂದ ತಾಲೂಕಿನ ರೈತರು ಹಾಗೂ ಜನಸಾಮಾನ್ಯರು ಭಯದ ವಾತಾವರಣದಲ್ಲಿ ಬದುಕುವಂತಾಗಿದೆ. ಅತಿವೃಷ್ಟಿಯಿಂದ ಉಳಿದ ಬೆಳೆ ಉಳಿಸಲು ರೈತರ ಬೆಳೆ ಶ್ರಮಪಡುತ್ತಿದ್ದರೆ ಆನೆಗಳು ಬೆಳೆಗಳನ್ನು ನಾಶಪಡಿಸುತ್ತಿವೆ. ಅರಣ್ಯ ಇಲಾಖೆ ಜನರಲ್ಲಿ ವಿಶ್ವಾಸ ಮೂಡಿಸುವ ಕಾರ್ಯ ಮಾಡಬೇಕು ಎಂದರು.
ಗೌರವಾಧ್ಯಕ್ಷ ಕಚ್ಚೋಡಿ ಶ್ರೀನಿವಾಸ್ ಮಾತನಾಡಿ, ಅರಣ್ಯ ಹಕ್ಕು ಕಾಯ್ದೆಗಳಿಂದ ರೈತರು ಹೈರಾಣವಾಗಿದ್ದು, ಪ್ರಸ್ತುತ ಕಾಡುಪ್ರಾಣಿಗಳ ಹಾವಳಿಯಿಂದ ಧೃತಿಗೆಟ್ಟಿದ್ದಾರೆ. ಆನೆಗಳು ಬಂದಾಗ ಪಟಾಕಿ ಹೊಡೆದರೆ ಮತ್ತೊಂದು ಕಡೆ ತೆರಳುತ್ತವೆ. ತಾಲೂಕಿನಲ್ಲಿ ಕಾಡಾನೆಯಿಂದ ಆದ ಬೆಳೆ ನಷ್ಟಕ್ಕೆ ಸೂಕ್ತ ಪರಿಹಾರ ನೀಡಬೇಕು ಎಂದು ಒತ್ತಾಯಿಸಿದರು.
ತಾಲೂಕು ಜೆಡಿಎಸ್ ಅಧ್ಯಕ್ಷ ಭರತ್ ಗಿಣಿಕಲ್ ಮಾತನಾಡಿ, ತಾಲೂಕು ಸಮಸ್ಯೆಗಳ ಆಗರವಾಗಿದೆ. ಕಾಡಾನೆಗಳ ಹಾವಳಿ ತಡೆಗೆ ಅಧಿಕಾರಿಗಳು ರೈಲ್ಯೆ ಬ್ಯಾರಿಕೇಡ್ ಅಳವಡಿಸಿ ಶಾಶ್ವತ ಪರಿಹಾರ ಕಂಡುಕೊಳ್ಳಬೇಕಿದೆ. ರೈತರನ್ನು ಸಕಾರ ದುರ್ಬಲ ವರ್ಗದವರು ಎಂದು ಕಡೆಗಣಿಸಬಾರದು. ರೈತರು ಕಾಡಿನಿಂದ ಸೌದೆ ತಂದರೆ ಅಧಿಕಾರಿಗಳು ದಂಡ ವಿಧಿಸುತ್ತಾರೆ. ಕಾಡುಪ್ರಾಣಿಗಳಿಂದ ಬೆಳೆ ಹಾನಿಯಾದರೆ ಅಧಿಕಾರಿಗಳು ದಂಡ ವಿಧಿಸಲು ಸಾಧ್ಯವೇ? ತಾಲೂಕಿನಲ್ಲಿ ದೊಡ್ಡ ಅನಾಹುತ ಆಗುವ ಮೊದಲು ಅಧಿಕಾರಿಗಳು ಎಚ್ಚೆತ್ತುಕೊಳ್ಳಬೇಕು ಎಂದು ಹೇಳಿದರು.
ರೈತ ಕೆಲವಳ್ಳಿ ಕಳಸಪ್ಪ ಮಾತನಾಡಿ, ರಾಷ್ಟ್ರೀಯ ಉದ್ಯಾನವನ ಪ್ರಾರಂಭಿಸುವಾಗ ಜನರು ಸಮಸ್ಯೆ ಎಂದು ಹೇಳುತ್ತಿದ್ದರು. ಆದರೆ ಈಗ ಅದರ ಸಮಸ್ಯೆ ಮನೆಬಾಗಿಲಿಗೆ ಬಂದಿದೆ. ಬೀದಿನಾಯಿ ಕೊಲ್ಲಬಾರದು ಎಂಬ ಕಾನೂನು ಇದೆ. ಆದರೆ ಕಾಡುಪ್ರಾಣಿಗಳಿಂದ ಜನರು ಮರಣ ಹೊಂದಿದ್ದಾರೆ. ಕಾನೂನಿಗಿಂತ ಜನರ ಜೀವಕ್ಕೆ ಬೆಲೆ ಜಾಸ್ತಿ ಎಂಬುದನ್ನು ಸರ್ಕಾರ ಮನಗಾಣಬೇಕು. ಅರಣ್ಯ ಹಕ್ಕುಗಳ ಕಾಯ್ದೆ ಇಂದಿಗೂ ಜೀವಂತವಾಗಿದೆ. ಈ ಸಮಸ್ಯೆಗಳು ಹಾಗೇ ಉಳಿಯಲು ಹಲವು ರಾಜಕಾರಣಿಗಳು ಮತ್ತು ಅಧಿಕಾರಿಗಳ ಬೇಜವಾಬ್ದಾರಿ ಮುಖ್ಯ ಕಾರಣ ಎಂದರು.
ಸಮಿತಿ ಪದಾಧಿಕಾರಿಗಳಾದ ಗೋಳ್ಗೋಡು ಚಂದ್ರಶೇಖರ್, ನೂತನ್‌ಕುಮಾರ್, ಕೆ.ಎಸ್.ರಮೇಶ್, ಡಿಸಿಸಿ ಬ್ಯಾಂಕ್ ಜಿಲ್ಲಾ ನಿರ್ದೇಶಕ ಗೇರುಬೈಲು ಶಂಕರಪ್ಪ, ಪಪಂ ಅಧ್ಯಕ್ಷ ಎಚ್.ಎಸ್.ವೇಣುಗೋಪಾಲ್, ಎಸಿಎ್ ಮೋಹನ್‌ಕುಮಾರ್, ಆರ್‌ಎ್ಒ ಮಧುಕುಮಾರ್ ಇದ್ದರು.