

ಹಾಸನ: ಜನಸಂಕಲ್ಪ ಯಾತ್ರೆ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮತ್ತು ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಡಿ.13 ರಂದು ಸಕಲೇಶಪುರ ಮತ್ತು ಬೇಲೂರಿಗೆ ಭೇಟಿ ನೀಡಲಿದ್ದಾರೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ. ಗೋಪಾಲಯ್ಯ ತಿಳಿಸಿದರು.
ಸಕಲೇಶಪುರ ಮತ್ತು ಬೇಲೂರಿನಲ್ಲಿ ನಡೆಯುವ ಜನಸಂಕಲ್ಪ ಯಾತ್ರೆ ಸಮಾವೇಶಗಳಲ್ಲಿ ರಾಜ್ಯ ಮತ್ತು ಕೇಂದ್ರ ಸರ್ಕಾರದ ಅನುದಾನದಿಂದ ಆಗಿರುವ ಅಭಿವೃದ್ಧಿ ಕಾರ್ಯಗಳ ಕುರಿತು ಜನರಿಗೆ ತಿಳಿಸಲಾಗುವುದು ಎಂದ ಶನಿವಾರ ನಗರದ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಅಲ್ಲದೆ, ಜಿಲ್ಲೆಯ ಮಲೆನಾಡು ಪ್ರದೇಶದಲ್ಲಿ ಇರುವ ಕಾಡಾನೆ ಹಾವಳಿ, ಎತ್ತಿನಹೊಳೆ ಯೋಜನೆ ಕಾಮಗಾರಿ, ಅತಿವೃಷ್ಟಿ ಸೇರಿದಂತೆ ವಿವಿಧ ಸಮಸ್ಯೆಗಳನ್ನು ಸಹ ಆಲಿಸಿ ಪರಿಹಾರ ಸೂಚಿಸುವ ಕೆಲಸವನ್ನು ಮುಖ್ಯಮಂತ್ರಿ ಮಾಡಲಿದ್ದಾರೆ. ಜಿಲ್ಲೆಯಲ್ಲಿ ಪ್ರಮುಖವಾಗಿ ಆಗಬೇಕಾಗಿರುವ ಆನೆ ಕಾರಿಡಾರ್ ಮತ್ತು ಎತ್ತಿನಹೊಳೆ ಯೋಜನೆ ಸಮರ್ಪಕ ಅನುಷ್ಠಾನ ಕುರಿತು ಅಧಿಕಾರಿಗಳೊಂದಿಗೆ ಮಹತ್ವದ ಸಭೆಯನು ಸಹ ನಡೆಸುವರು ಎಂದು ಮಾಹಿತಿ ನೀಡಿದರು.
ಜಿಲ್ಲೆಯ ಮಲೆನಾಡು ಭಾಗದ ಜನ ದೇಶಕ್ಕೆ ಸ್ವಾತಂತ್ರೃ ಬಂದಾಗಿನಿಂದಲೂ ಅರಣ್ಯ ಇಲಾಖೆಯಿಂದ ಅನುಭವಿಸುತ್ತಿರುವ ಸಮಸ್ಯೆ ಪರಿಹರಿಸುವ ಹಾಗೂ ಒತ್ತುವರಿ ಭೂವಿ ವಿಚಾರದಲ್ಲಿ ರೈತರಿಗೆ ನ್ಯಾಯ ಒದಗಿಸುವ ನಿಟ್ಟಿನಲ್ಲಿ ಮುಂದಿನ ವಿಧಾನಸಭೆ ಅಧಿವೇಶನದಲ್ಲಿ ಮಸೂದೆ ಮಂಡಿಸುವ ಕುರಿತು ಮಹತ್ವದ ನಿರ್ಧಾರವನ್ನು ಮುಖ್ಯಮಂತ್ರಿ ಕೈಗೊಳ್ಳಲಿದ್ದಾರೆ ಎಂದರು.
ಹೊಸ ವರ್ಷದ ಉಡುಗೊರೆ:
ಮುಖ್ಯಮಂತ್ರಿಗಳ ಈ ಭೇಟಿಯು ಸಕಲೇಶಪುರ ಮತ್ತು ಬೇಲೂರು ಭಾಗದ ರೈತರು ಹಾಗೂ ಕಾಫಿ ಬೆಳೆಗಾರರಿಗೆ ಹೊಸ ವರ್ಷದ ಉಡುಗೊರೆ ಆಗಲಿದೆ. ಅಂದು ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ಸಿಎಂ ಬಸವರಾಜ ಬೊಮ್ಮಾಯಿ ಪ್ರಕಟಿಸಲಿದ್ದಾರೆ ಎಂದು ತಿಳಿಸಿದರು.
ವಿಳಂಬದಿಂದ ಹೆಚ್ಚಿದ ವೆಚ್ಚ:
ಎತ್ತಿನಹೊಳೆ ಯೋಜನೆ ಕಾಮಗಾರಿ ನಿಧಾನಗತಿಯಲ್ಲಿ ನಡೆಯುತ್ತಿರುವುದರಿಂದ ವೆಚ್ಚ ಹೆಚ್ಚಾಗುತ್ತಿದೆ. ಮುಂದಿನ ಮೇ ಅಥವಾ ಜೂನ್ ವೇಳೆಗೆ ಕಾಮಗಾರಿ ಪೂರ್ಣಗೊಂಡು ಎತ್ತಿನಹೊಳೆಯಿಂದ ಕೋಲಾರಕ್ಕೆ ನೀರು ಹರಿಯಲಿದೆ ಎಂದು ಸಚಿವರು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ರಾಷ್ಟ್ರೀಯ ಹೆದ್ದಾರಿ 75ರ ಹಾಸನ-ಸಕಲೇಶಪುರ-ಮಂಗಳೂರು ಮಾರ್ಗದ ಚತುಷ್ಪಥ ಹೆದ್ದಾರಿ ನಿರ್ಮಾಣ ಕಾಮಗಾರಿ ಚುರುಕುಗೊಳಿಸುವ ಕುರಿತು ಕೇಂದ್ರ ಸಾರಿಗೆ ಸಚಿವರೊಂದಿಗೆ ಮಾತುಕತೆ ನಡೆಸಲಾಗುವುದು. ಮಂಗಳೂರು ಸಂಸದ ನಳಿನ್ ಕುಮಾರ್ ಕಟೀಲ್ ಅವರೊಂದಿಗೂ ಚರ್ಚಿಸಿ, ಸಮರ್ಪಕ ಅನುದಾನ ಬಿಡುಗಡೆ ಮಾಡಿ ಆದಷ್ಟು ಬೇಗ ಕಾಮಗಾರಿ ಪೂರ್ಣಗೊಳಿಸುವಂತೆ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಲು ತಿಳಿಸಲಾಗುವುದು ಎಂದರು.
ರಾಷ್ಟ್ರೀಯ ಹೆದ್ದಾರಿ 75ರ ಕಾಮಗಾರಿ ತ್ವರಿತಗತಿಯಲ್ಲಿ ನಡೆಸುವ ಹಿನ್ನೆಲೆಯಲ್ಲಿ ಜಲ್ಲಿ ಹಾಗೂ ಮರಳು ಸರಬರಾಜಿಗೆ ರಿಯಾಯಿತಿ ನೀಡಲಾಗಿದೆ. ಆದರೆ ಇದನ್ನು ಗುತ್ತಿಗೆದಾರರು ದುರುಪಯೋಗ ಪಡಿಸಿಕೊಳ್ಳುತ್ತಿರುವ ಬಗ್ಗೆ ದೂರುಗಳು ಕೇಳಿ ಬಂದಿದೆ. ರಸ್ತೆ ಕಾಮಗಾರಿಗೆ ಮೀಸಲಿಟ್ಟಿರುವ ಮರಳು ಮತ್ತು ಜಲ್ಲಿಯನ್ನು ಬೇರೆ ಕಾಮಗಾರಿಗೆ ಸರಬರಾಜು ಮಾಡುತ್ತಿದ್ದ 200 ಲಾರಿಗಳ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಸಚಿವರು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾಜಿ ಶಾಸಕರಾದ ಎಚ್.ಎಂ. ವಿಶ್ವನಾಥ್ ಮತ್ತು ಬಿ.ಆರ್. ಗುರುದೇವ್, ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಎಚ್.ಕೆ. ಸುರೇಶ್, ಪ್ರವೀಣ್ ಕುಮಾರ್, ಲೋಹಿತ್ ಇತರರು ಹಾಜರಿದ್ದರು.