ಕಾಡಾನೆ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸದ ಸರ್ಕಾರ: ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ

HDK
Published on

ಸಕಲೇಶಪುರ: ಯಾವ ಪಕ್ಷದಲ್ಲಿ ಯಾರನ್ನು ನಾಯಕನನ್ನಾಗಿ ಮಾಡಿ ಕೊಂಡರೇನು? ಯಾರನ್ನು ತೆಗೆದರೇನು? ಅದು ಈ ರಾಜ್ಯಕ್ಕೆ ಬೇಕಾಗಿಲ್ಲ ಎಂದು ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಹೇಳಿದರು.

ಪಟ್ಟಣದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಾಸನ ಜಿಲ್ಲೆಯಲ್ಲಿ ಎಷ್ಟು ಜನ ಕಾಡಾನೆ ತುಳಿತದಿಂದ ಸತ್ತಿದ್ದಾರೆ? ಸರ್ಕಾರ ಇದನ್ನು ಗಂಭೀರವಾಗಿ ತೆಗೆದುಕೊಂಡಿದೆಯಾ? ಅರಣ್ಯ ಇಲಾಖೆ ಮಂತ್ರಿಗಳು ಶೇ.65ರಷ್ಟು ರೈಲ್ವೆ ಬ್ಯಾರಿಕೇಡ್ ಹಾಕಿದ್ದೇವೆ ಅಂತಾರೆ. ಅದು ನಾನು 2018 ರಲ್ಲಿ ಕೊಟ್ಟ ದುಡ್ಡು. ಅದಾದ ಬಳಿಕ ಎಲ್ಲಿ ದುಡ್ಡು ಕೊಟ್ಟರು. ಯಾವುದೇ ಕೆಲಸ ಆಗಿಲ್ಲ ಎಂದು ದೂರಿದರು.

ಬೆಂಗಳೂರು ಮೆಟ್ರೋ ದರ ಏರಿಕೆಯಿಂದ ಜನಸಾಮಾನ್ಯರ ಮೇಲೆ ಹೊರೆಯಾಗಿದ. ಪ್ರತಿದಿನ ಐದು ಗ್ಯಾರಂಟಿಗಳಿಗೆ ಹಣ ತುಂಬಿಸಲು ಪ್ರಯತ್ನ ಪಡುತ್ತಿದ್ದಾರೆ. ಅಭಿವೃದ್ಧಿ ಇಲ್ಲವೇ ಇಲ್ಲ. ಸರ್ಕಾರ ಸತ್ತು ಹೋಗಿದೆ. ರಾಜ್ಯದಲ್ಲಿ ಸರ್ಕಾರ ಇದೆ ಎಂಬುದನ್ನು ಜನ ಮರೆಯುತ್ತಿದ್ದಾರೆ. ಆ ಪರಿಸ್ಥಿತಿಯಲ್ಲಿದ್ದೇವೆ. ಈ ಬಗ್ಗೆ ಎಲ್ಲರೂ ಗಮನ ಹರಿಸಬೇಕು ಎಂದರು.

2014ರ ಕೆಪಿಎಸ್‌ಸಿ ನೇಮಕಾತಿ ವಿಷಯದಲ್ಲಿ ದೊಡ್ಡಮಟ್ಟದಲ್ಲಿ ಚರ್ಚೆ ಆಯ್ತು. ಮೈತ್ರಿ ಎಂಬ ಒಬ್ಬ ಹೆಣ್ಣು ಮಗಳಿಗಾಗಿ 370 ಜನರ ಜತೆ ಚೆಲ್ಲಾಟ ಆಡಿದರು. ಇವತ್ತು 2025ಕ್ಕೆ ಬಂದಿದ್ದೇವೆ. ಕೆಪಿಎಸ್‌ಸಿ ಪರಿಸ್ಥಿತಿ ಏನಾಗಿದೆ? ಒಂದೇ ಒಂದು ಉದ್ಯೋಗ ಕೆಪಿಎಸ್‌ಸಿಯಲ್ಲಿ ಸೃಷ್ಟಿ ಆಗಿಲ್ಲ. 15 ಜನ ಮೆಂಬರ್‌ಗಳನ್ನು ಮಾಡಿಕೊಂಡು ಏನು ಸುಧಾರಣೆ ತಂದ್ರಿ. ಕೆಪಿಎಸ್‌ಸಿ ಪರೀಕ್ಷೆ ಮಾಡಲು ಆಗುತ್ತಿಲ್ಲ. ಯುವಕರ ಜತೆ ಚೆಲ್ಲಾಟ ಆಡುತ್ತಿದ್ದೀರಿ. ಮೊದಲು ಇದರ ಬಗ್ಗೆ ಗಮನ ಕೊಡಿ ಎಂದು ಒತ್ತಾಯಿಸಿದರು.

ಮೈಸೂರು ಗಲಭೆ ಪ್ರಕರಣದ ಬಗ್ಗೆ ಪ್ರತಿಕ್ರಿಯಿಸಿದ ಎಚ್‌ಡಿಕೆ, ಆ ಗಲಭೆ ಬಗ್ಗೆ ದೊಡ್ಡಮಟ್ಟದಲ್ಲಿ ಪ್ರಚಾರ ಕೊಡುವುದು ಬೇಡ. ರಾಜ್ಯದಲ್ಲಿ ಹಲವಾರು ಸಮಸ್ಯೆಗಳಿವೆ. ಒಂದು ಸಮಾಜದವರು ಸೋಶಿಯಲ್ ಮಿಡೀಯಾದಲ್ಲಿ ಪೋಸ್ಟ್ ಮಾಡಿದ್ದರಿಂದ ಇನ್ನೊಂದು ಸಮಾಜದವರು ಸರ್ಕಾರಿ ವಾಹನಗಳ ಮೇಲೆ, ಪೊಲೀಸ್ ಠಾಣೆ ಮೇಲೆ ಕಲ್ಲು ತೂರಾಟ ಮಾಡಲು ಹೊರಟಿದ್ದರು. ಅಶಾಂತಿ ವಾತಾವರಣ ನಿರ್ಮಾಣ ಮಾಡಲು ಮುಂದಾಗಿದ್ದರು. ಅದರ ಹಿನ್ನೆಲೆಯಲ್ಲಿ ಈಗ ರಾಜಕೀಯ ಪ್ರಾರಂಭವಾಗಿದೆ. ರಾಜ್ಯದಲ್ಲಿ ಯಾವ ಪರಿಸ್ಥಿತಿಗೆ ಹೋಗುತ್ತಿದ್ದೇವೆ. ಅದರ ಬಗ್ಗೆ ಗಮನ ಕೊಡುವುದು ಸೂಕ್ತ ಎಂದು ಸಲಹೆ ನೀಡಿದರು.

ಕಷ್ಟಪಟ್ಟು ಸಂಪಾದಿಸಿದ ಭೂಮಿ

ಬೆನ್ನಿಗಾನಹಳ್ಳಿ ಭೂಮಿ ಅಕ್ರಮ ಒತ್ತುವರಿ ಪ್ರತಿಕ್ರಿಯಿಸಿದ ಕುಮಾರಸ್ವಾಮಿ, ರಾಮನಗರದಲ್ಲಿ ಅವನ್ಯಾರೋ ಸಾಮಾಜಿಕ ಪರಿವರ್ತನೆಕಾರ ಎಸ್.ಆರ್.ಹಿರೇಮಠ ರಿಪೋರ್ಟ್ ಮೇಲೆ ಆಗಿರುವ ಕೇಸ್ ಅದು. ಸಿದ್ದಪ್ಪ ಅವತ್ತು ರಾಮನಗರದಲ್ಲಿ ಅಸಿಸ್ಟೆಂಟ್ ಕಮಿಷನರ್. ಅವನು ಒಂದು ವರದಿ ಕೊಟ್ಟ. ಅದನ್ನು ಇಟ್ಟುಕೊಂಡು ಈ ಆಟ ಆಡುತ್ತಿದ್ದಾರೆ. ಯಡಿಯೂರಪ್ಪ ಕಾಲದಲ್ಲೂ ತನಿಖೆ ಮಾಡಿದರು. ಏನು ಸಿಗಲಿಲ್ಲ. ಎಲ್ಲರ ಕಾಲದಲ್ಲೂ ನಡೆಯುತ್ತಲೇ ಇದೆ. ನಡೆಯಲಿ, ನಾನು ಕಷ್ಟಪಟ್ಟು ಸಂಪಾದನೆ ಮಾಡಿದ್ದಕ್ಕೆ ಈ ಸ್ಥಿತಿ. ಲೂಟಿ ಹೊಡೆದು ಇವರೆಲ್ಲ ಮಾಡಿಕೊಂಡಿದ್ದಾರಲ್ಲಾ ಅದನ್ನು ಕೇಳೋರೇ ಇಲ್ಲ. ಇದಕ್ಕೆಲ್ಲಾ ನಾನು ಹೆದರಲ್ಲ ಎಂದು ತಿರುಗೇಟು ನೀಡಿದರು.

ಹಣ ಹೊಂದಿಸಲು ಬಾರ್‌ಗಳಿಗೆ ಅನುಮತಿ

ರಾಜ್ಯ ಸರ್ಕಾರದವರು 1 ಲಕ್ಷದ 89 ಸಾವಿರ ಕೋಟಿ ರೂ. ತೆರಿಗೆ ಸಂಗ್ರಹ ನಿರೀಕ್ಷೆ ಇಟ್ಟಿದ್ದರು. ಇನ್ನೂ 15 ಸಾವಿರ ಕೊರತೆ ಆಗಬಹುದು. ಆ ಹಣ ತುಂಬಿಸಲು ಸಿಎಲ್-2, ಸಿಎಲ್-7, ಸಿಲ್-9 ಸೇರಿ ಐನೂರು ಮದ್ಯದಂಗಡಿಗಳಿಗೆ ಅನುಮತಿ ಕೊಡಲು ಮುಂದಾಗಿದ್ದಾರೆ. 1992 ರಿಂದ ಇಲ್ಲಿಯವರೆಗೆ ಕೊಟ್ಟಿಲ್ಲ. ಈ ಬಗ್ಗೆ ಸಿಎಂ ಅಧಿಕಾರಿಗಳ ಜತೆ ಚರ್ಚೆ ಮಾಡಿದ್ದಾರೆ. ಎಲ್ಲ ರೀತಿಯ ದರ ಏರಿಕೆ ಮಾಡಿದ್ದಾರೆ. ಸಂಗ್ರಹದಲ್ಲಿ ಯಶಸ್ಸು ಕಂಡಿಲ್ಲ ಎಂದು ಕುಮಾರಸ್ವಾಮಿ ಕುಟುಕಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net