

ಹಾಸನ: ಬೇಲೂರು ಹಾಗೂ ಜಿಲ್ಲೆಯಲ್ಲಿ ಕಾಡಾನೆ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸುವಂತೆ ಆಗ್ರಹಿಸಿ ಡಿ.10ರಂದು ಬೈಕ್ ಮತ್ತು ಆಟೋ ರ‌್ಯಾಲಿ ನಡೆಸಿ ಮುಂದಿನ ಐದು ದಿನಗಳ ಕಾಲ ನಿರಂತರ ಪ್ರತಿಭಟನೆ ನಡೆಸಲು ನಿರ್ಧರಿಸಲಾಗಿದೆ ಎಂದು ಜಯ ಕರ್ನಾಟಕ ಸಂಘಟನೆ ಜಿಲ್ಲಾಧ್ಯಕ್ಷ ಎಂ.ಕೆ.ಆರ್. ಸೋಮೇಶ್ ತಿಳಿಸಿದರು.
ಡಿ.10ರಂದು ಬೆಳಗ್ಗೆ ಬೇಲೂರು ತಾಲೂಕು ಬಿಕ್ಕೋಡಿನಿಂದ ಹೊರಡುವ ರ‌್ಯಾಲಿ ಆಲೂರು ಮೂಲಕ ಹಾಸನದ ಹೇಮಾವತಿ ಪ್ರತಿಮೆ ಬಳಿಗೆ ಬರಲಿದೆ. ಅಲ್ಲಿಂದ ಐದು ದಿನಗಳ ಕಾಲ ಹಗಲು ವೇಳೆ ನಿರಂತರ ಧರಣಿ ನಡೆಸಲಾಗುವುದು. ರ‌್ಯಾಲಿ ಮತ್ತು ಪ್ರತಿಭಟನೆಯಲ್ಲಿ ದಲಿತ, ಕಾರ್ಮಿಕ ಸೇರಿ ವಿವಿಧ ಪ್ರಗತಿಪರ ಸಂಘಟನೆಗಳ ಮುಖಂಡರು, ಕಾಫಿ ಬೆಳೆಗಾರರು, ರೈತರು ಭಾಗಿಯಾಗಲಿದ್ದಾರೆ. ಉಳಿದವರೂ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾಡಾನೆ ಸಮಸ್ಯೆ ಬಗೆಹರಿಸಲು ಕೈ ಜೋಡಿಸಿ ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ಮನವಿ ಮಾಡಿದರು.
ಸಮಸ್ಯೆ ಬಗೆಹರಿಸಿ ಎಂದು ಈವರೆಗೂ ಅನೇಕರಿಗೆ ಮನವಿ ಮಾಡಿದ್ದರೂ, ಕಾಡಾನೆ ಕಾಟಕ್ಕೆ ಕಡಿವಾಣ ಬಿದ್ದಿಲ್ಲ. ಸರ್ಕಾರ, ಸಚಿವರು, ಅಧಿಕಾರಿಗಳು ಅಥವಾ ಜನಪ್ರತಿನಿಧಿಗಳಿಂದ ಪರಿಹಾರ ಸಿಕ್ಕಿಲ್ಲ. ಅದಕ್ಕಾಗಿ ಆನೆ ಕಾರಿಡಾರ್ ನಿರ್ಮಾಣದ ಜತೆಗೆ ಉಪಟಳ ನೀಡುತ್ತಿರುವ ಕಾಡಾನೆ ಪಡೆಯನ್ನು ಸೆರೆ ಹಿಡಿದು ಸ್ಥಳಾಂತರ ಮಾಡಬೇಕು ಎಂದು ಒತ್ತಾಯಿಸಿದರು.
ಬೇಲೂರು ತಾಲೂಕೊಂದರಲ್ಲೇ ಸುಮಾರು 60 ಆನೆಗಳಿದ್ದು, ಸಾಕಷ್ಟು ತೊಂದರೆ ಕೊಡುತ್ತಿವೆ. ಡಿ.9 ರಿಂದ ಬೆಳಗಾವಿ ಅಧಿವೇಶನ ಆರಂಭ ಆಗುವುದರಿಂದ ಜನರು ಸರ್ಕಾರದ ವಿರುದ್ಧ ಮಾತನಾಡದಿರಲಿನ ಎಂದು ಪುಂಡಾನೆಗಳಿಗೆ ರೇಡಿಯೊ ಕಾಲರ್ ಅಳವಡಿಕೆ ಕಾರ್ಯ ಆರಂಭಿಸಲಾಗಿದೆ. ಇದರಿಂದ ಆನೆಗಳು ಎಲ್ಲಿವೆ ಎಂದು ಅವುಗಳ ಚಲನ ವಲನ ತಿಳಿಯಬಹುದೇ ಹೊರತು, ಬೆಳೆ ನಾಶ, ಜೀವ ಹಾನಿ ತಪ್ಪಿಸಲು ಆಗಲ್ಲ. ಮುಂದೆಯಾದರೂ ಕಾಡಾನೆ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡು ಹಿಡಿಯಬೇಕು ಎಂದು ಆಗ್ರಹಿಸಿದರು.
ಸುದ್ದಿಗೋಷ್ಠಿಯಲ್ಲಿ ದಸಂಸ ರಾಜ್ಯ ಸಮಿತಿ ಸದಸ್ಯ ಮಲ್ಲೆಶ್ ಅಂಬುಗ, ಜಯ ಕರ್ನಾಟಕ ತಾಲೂಕು ಅಧ್ಯಕ್ಷ ಎಸ್.ಎಂ.ರಾಜು, ರಾಜ್ಯ ಸಮಿತಿ ಸದಸ್ಯ ವಾಸು ಇದ್ದರು.