ಕಾಡಾನೆ ಸಮಸ್ಯೆ ಶಾಶ್ವತ ಪರಿಹಾರಕ್ಕೆ ಚಿಂತನೆ:ಸಚಿವ ಕೆ.ಎನ್.ರಾಜಣ್ಣ ಹೇಳಿಕೆ

ಕಾಡಾನೆ ಸಮಸ್ಯೆ ಶಾಶ್ವತ ಪರಿಹಾರಕ್ಕೆ ಚಿಂತನೆ:ಸಚಿವ ಕೆ.ಎನ್.ರಾಜಣ್ಣ ಹೇಳಿಕೆ
Published on

ಹಾಸನ: ಜಿಲ್ಲೆ ಸೇರಿದಂತೆ ಚಿಕ್ಕಮಂಗಳೂರು ಮತ್ತು ಮೂಡುಗೆರೆಯಲ್ಲಿ ಕಾಡಾನೆಗಳ ಹಾವಳಿ ಹೆಚ್ಚಾಗಿದ್ದು ಪ್ರತಿನಿತ್ಯ ಸಾವು-ನೋವುಗಳು ಸಂಭವಿಸುತ್ತಿವೆ. ಈ ಸಂಬಂಧ ಶೀಘ್ರದಲ್ಲೇ ಬೆಂಗಳೂರಿನಲ್ಲಿ ಸಭೆ ಕರೆದು ಚರ್ಚೆ ನಡೆಸಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಎನ್. ರಾಜಣ್ಣ ತಿಳಿಸಿದರು.
ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇತ್ತೀಚಿನ ದಿನಗಳಲ್ಲಿ ಕಾಡು ಪ್ರಾಣಿಗಳು ಮತ್ತು ಮಾನವ ಸಂಘರ್ಷ ಹೆಚ್ಚಾಗುತ್ತಿದೆ. ಇದಕ್ಕೆ ಪ್ರಮುಖ ಕಾರಣ ಅರಣ್ಯ ಒತ್ತುವರಿಯಾಗಿರುವುದರಿಂದ ಪ್ರಾಣಿಗಳು ನಾಡಿಗೆ ಬರುತ್ತಿವೆ. ಅಲ್ಲದೆ ಕಾಡಿನಲ್ಲಿ ಆಹಾರ ಸಿಗದೆ ಅವುಗಳು ಊರಿಗೆ ಆಗಮಿಸುತ್ತಿದ್ದು, ಇದನ್ನು ತಡೆಗಟ್ಟಲು ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಲಾಗುವುದು. ಕಾಡಾನೆ ದಾಳಿಯಿಂದ ಕೂಲಿ ಕಾರ್ಮಿಕರೇ ಹೆಚ್ಚಾಗಿ ಸಾವನ್ನಪ್ಪುತ್ತಿದ್ದಾರೆ. ಈ ಸಂಬಂಧ ಈಗಾಗಲೇ ಮುಖ್ಯಮಂತ್ರಿಗಳೊಂದಿಗೆ ಚರ್ಚೆ ನಡೆಸಲಾಗುವುದು. ಶ್ರೀಲಂಕಾ ಮಾದರಿಯಲ್ಲಿ ಕಾಡಾನೆಗಳನ್ನು ಹಿಡಿದು ಕಾಡಾನೆ ಕ್ಯಾಂಪ್ ನಿರ್ಮಾಣದ ಬಗ್ಗೆಯೂ ಕೂಡ ಚರ್ಚೆ ನಡೆಯುತ್ತಿದೆ ಎಂದು ಹೇಳಿದರು.
ಮಲೆನಾಡು ಭಾಗದಲ್ಲಿ ಕಾಡಾನೆಗಳ ಸಂತತಿಯು ಹೆಚ್ಚಾಗಿದೆ. ಶಾಶ್ವತವಾಗಿ ಪರಿಹಾರಕ್ಕೆ 350 ಕೋಟಿ ರೂ. ವೆಚ್ಚದಲ್ಲಿ ರೈಲ್ವೆ ಬ್ಯಾರಿಕೇಡ್ ತಡೆಗೋಡೆ ನಿರ್ಮಾಣಕ್ಕೆ ಹೈ ಪವರ್ ಕಮಿಟಿ ವರದಿ ನೀಡಿದೆ. ಆದರೆ ಅಷ್ಟೊಂದು ಹಣವನ್ನು ಒಂದೇ ಹಂತದಲ್ಲಿ ಬಿಡುಗಡೆ ಮಾಡಲು ಸಾಧ್ಯವಿಲ್ಲ. ಆದ್ದರಿಂದ ಹಂತ ಹಂತವಾಗಿ ರೈಲ್ವೆ ಬ್ಯಾರಿಕೆಡ್‌ಗಳ ನಿರ್ಮಾಣ ಕಾರ್ಯ ನಡೆಯುತ್ತಿದೆ ಎಂದು ಹೇಳಿದರು.
15 ಲಕ್ಷ ರೂ. ಪರಿಹಾರ
ಸೋಮವಾರ ಹೊಳೆನರಸಿಪುರ ತಾಲೂಕಿನಲ್ಲಿ ಕಾಡು ಹಂದಿ ದಾಳಿಯಿಂದ ವ್ಯಕ್ತಿಯೊಬ್ಬರು ಮೃತಪಟ್ಟಿದ್ದು, ಮೃತರ ಕುಟುಂಬ ಸದಸ್ಯರಿಗೆ 15 ಲಕ್ಷ ರೂ. ಪರಿಹಾರವನ್ನು ನೀಡಲಾಗುವುದು. ಅಲ್ಲದೆ ಇದರ ಸಂಪೂರ್ಣ ವೆಚ್ಚವನ್ನು ಇಲಾಖೆಯೇ ಭರಿಸಲಿದೆ. ಜತೆಗೆ ಅವರ ಆದಾಯದ ಅನುಗುಣವಾಗಿ ಮಾಸಿಕವಾಗಿ ಸಾವಿರದಿಂದ ನಾಲ್ಕು ಸಾವಿರ ರೂ. ನೀಡಲಾಗುವುದು ಎಂದು ಭರವಸೆ ನೀಡಿದರು.
ಜಿಲ್ಲೆಯಲ್ಲಿ ಅಪರೂಪದ ಘಟನೆಗಳು ನಡೆಯುತ್ತಿವೆ. ಮೃತರ ಕುಟುಂಬಕ್ಕೆ ಸಾಂತ್ವನ ಹೇಳಲಾಗುವುದು ಬೇಸಾಯ ಮಾಡಿ ಜೀವನ ನಡೆಸುವ ಸಂದರ್ಭದಲ್ಲಿ ಇಂತಹ ಅವಘಡಗಳು ಸಂಭವಿಸುತ್ತಿರುವುದು ನಿಜಕ್ಕೂ ಬೇಸರದ ಸಂಗತಿ ಎಂದ ಅವರು, ಅರ್ಜುನ ಆನೆ ಸಾವಿನ ಬಗ್ಗೆ ಈಗಾಗಲೇ ತನಿಖೆ ನಡೆಸಲಾಗುತ್ತಿದ್ದು ಯಾರೇ ತಪ್ಪಿತಸ್ಥರಿದ್ದರೂ ಕೂಡ ಅವರ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು
ಮತ್ತೆ ರಾಜ್ಯದಲ್ಲಿ ಕೊರೋನಾ ಭೀತಿಯಿಂದಾಗಿ ಈಗಾಗಲೇ ರಾಜ್ಯ ಸರ್ಕಾರ ಮಾರ್ಗಸೂಚಿ ಬಿಡುಗಡೆ ಮಾಡಲು ಚಿಂತನೆ ನಡೆಸಿದೆ ಮತ್ತು ಕೇರಳದ ಶಬರಿಮಲೆಯಿಂದ ಬರುವಂತಹ ಭಕ್ತಾದಿಗಳನ್ನು ಪರೀಕ್ಷೆ ನಡೆಸಬೇಕು ಎಂದು ಈಗಾಗಲೇ ಆರೋಗ್ಯ ಇಲಾಖೆ ಕಟ್ಟುನಿಟ್ಟಿನ ಸೂಚನೆ ನೀಡಿದೆ ಎಂದು ಹೇಳಿದರು.
ಜಾತಿ ಜನಗಣತಿ ಬಿಡುಗಡೆಗೂ ಮೊದಲೇ ಪರ ಮತ್ತು ವಿರೋಧ ಚರ್ಚೆಗಳು ನಡೆಯುತ್ತಿವೆ. ಆದರೆ ಕೋಟ್ಯಂತರ ರೂ. ಖರ್ಚು ಮಾಡಿ ಕಾಂತರಾಜ್ ಅವರ ನೇತೃತ್ವದಲ್ಲಿ ವರದಿ ತಯಾರಿಸಲಾಗಿದೆ. ವರದಿ ಅನುಷ್ಠಾನ ಮಾಡುವ ಮೊದಲು ಸಾರ್ವಜನಿಕರ ಅಭಿಪ್ರಾಯ ಪಡೆದು ವಿಶ್ಲೇಷಣೆ ಮಾಡಿ ಎಲ್ಲರ ಒಮ್ಮತದಿಂದ ಅದನ್ನು ಜಾರಿಗೊಳಿಸಲಾಗುವುದು. ಜನರ ತೆರಿಗೆ ಹಣದಿಂದ 250 ಕೋಟಿ ರೂ. ವೆಚ್ಚದಲ್ಲಿ ಗಣತಿ ನಡೆಸಲಾಗಿದೆ. ಹಾಗಾದರೆ ಈ ವರದಿಯನ್ನು ಏನು ಮಾಡಬೇಕು? ವಿನಾಃಕಾರಣ ಗೊಂದಲ ಸೃಷ್ಟಿಸುವುದು ಸರಿಯಲ್ಲ ಎಂದು ಪರೋಕ್ಷವಾಗಿ ವಿರೋಧ ಪಕ್ಷಗಳಿಗೆ ಟಾಂಗ್ ನೀಡಿದರು.
ಕಾಯ್ದೆ ಮತ್ತು ಕಾನೂನುಗಳನ್ನು ಜಾರಿಗೆ ತರುವಂತಹ ಜನಪ್ರತಿನಿಧಿಗಳನ್ನು ಸಂಸತ್ತಿನಿಂದ ಅಮಾನತ್ತು ಮಾಡಿರುವುದು ನಿಜಕ್ಕೂ ಪ್ರಜಾಪ್ರಭುತ್ವಕ್ಕೆ ಮಾಡಿದ ದೊಡ್ಡ ಅಪಮಾನವಾಗಿದೆ ಎಂದು ಹೇಳಿದ ಅವರು ಶೀಘ್ರದಲ್ಲೇ ನಿಗಮ ಮಂಡಳಿಗಳ ನೇಮಕ ನಡೆಯಲಿದೆ. ಹಾಲಿ 20ರಿಂದ 25 ಜನ ಶಾಸಕರಿಗೆ ಸ್ಥಾನವನ್ನು ನೀಡಲಾಗುವುದು ಎಂದು ಹೇಳಿದರು.
ಮುಂಬರುವ ಲೋಕಸಭಾ ಚುನಾವಣೆಗೆ ಅಭ್ಯರ್ಥಿಗಳನ್ನು ರಾಜ್ಯ ಮತ್ತು ರಾಷ್ಟ್ರಮಟ್ಟದ ನಾಯಕರು ಚರ್ಚೆ ನಡೆಸಿ ಸೂಕ್ತ ತೀರ್ಮಾನ ಕೈಗೊಳ್ಳಲಿದ್ದಾರೆ. ಸ್ಥಳೀಯ ಮುಖಂಡರು ಹಾಗೂ ಕಾರ್ಯಕರ್ತರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಜಿಲ್ಲೆಗೆ ಸೂಕ್ತ ಅಭ್ಯರ್ಥಿಯನ್ನು ಪ್ರಕಟ ಮಾಡಲಿದ್ದಾರೆ ಎಂದು ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net