

ಹಾಸನ: ಕಾಡಾನೆ - ಮಾನವರ ಸಂಘರ್ಷ ಹಲವು ವರ್ಷಗಳಿಂದ ನಡೆಯುತ್ತಾ ಬಂದಿದ್ದು ಇದರಿಂದ ಸಾಕಷ್ಟು ಪ್ರಾಣ ಹಾನಿ ಮತ್ತು ಬೆಳೆ ಹಾನಿ ಆಗುತ್ತಿದ್ದು, ಇದಕ್ಕೆ ಶಾಶ್ವತ ಪರಿಹಾರ ಕಲ್ಪಿಸಲು ನಮ್ಮ ಸರ್ಕಾರ ಸಂಕಲ್ಪ ಮಾಡಿದೆ ಎಂದು ಅರಣ್ಯ ಸಚಿವ ಈಶ್ವರ್ ಖಂಡ್ರೆ ಭರವಸೆ ನೀಡಿದರು.
ನಗರದ ಅರಣ್ಯ ಭವನದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಾನು ಅರಣ್ಯ ಇಲಾಖೆಯ ಸಚಿವನಾದ ಮೇಲೆ ಕೊಡಗು ಜಿಲ್ಲೆಗೆ ಭೇಟಿ ನೀಡಿ ಕಾಡಾನೆ ಸಮಸ್ಯೆ ಬಗ್ಗೆ ಪರಿಶೀಲನೆ ನಡೆಸಿ ಮಾಹಿತಿ ಕಲೆ ಹಾಕಿದ್ದೇನೆ. ಅದೇ ರೀತಿ ಹಾಸನಕ್ಕೂ ಕೂಡ ಆಗಮಿಸಿ ಅಧಿಕಾರಿಗಳೊಂದಿಗೆ ಚರ್ಚಿಸಿ ಇಲ್ಲಿಯ ಸಮಸ್ಯೆಗಳು ಮತ್ತು ಅದಕ್ಕೆ ಪರಿಹಾರ ಕಲ್ಪಿಸುವ ನಿಟ್ಟಿನಲ್ಲಿ ಶಾಶ್ವತ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.
ಈಗಾಗಲೇ ಆನೆಗಳನ್ನು ನಿಯಂತ್ರಣ ಮಾಡುವ ನಿಟ್ಟಿನಲ್ಲಿ ನಮ್ಮ ಇಲಾಖೆ ರೈಲ್ವೆ ಬ್ಯಾರಿಕೆಡ್ ನಿರ್ಮಾಣ ಕಾರ್ಯ ನಡೆಯುತ್ತಿದೆ. ರಾಜ್ಯದಲ್ಲಿ ಒಟ್ಟು 640 ಕಿಲೋ ಮೀಟರ್ ಬ್ಯಾರಿಕೆಡ್ ಅಗತ್ಯವಿದ್ದು ಈಗ 312 ಕಿ.ಮೀ. ನಿರ್ಮಾಣವಾಗಿದೆ. ಇನ್ನೂ 330 ಕಿ.ಮೀ ವ್ಯಾಪ್ತಿಯಲ್ಲಿ ನಿರ್ಮಾಣವಾಗಬೇಕಿದೆ. ಈ ವರ್ಷ 200 ಕಿ.ಮೀ. ಗುರಿಯನ್ನು ಹೊಂದಿದ್ದು, ಬಜೆಟ್‌ನಲ್ಲಿ 100 ಕೋಟಿ ರೂ. ಅನುದಾನ ಮೀಸಲಿಟ್ಟಿದ್ದು, ಕಳೆದ ಬಾರಿ ಬಜೆಟ್‌ನಲ್ಲಿ 50 ಕೋಟಿ ಹಣ ಉಳಿದಿದ್ದು ಹೆಚ್ಚುವರಿಯಾಗಿ ಮುಖ್ಯಮಂತ್ರಿಗೆ 100 ಕೋಟಿ ರೂ.ಗೆ ಮನವಿ ಸಲ್ಲಿಸಲಾಗಿತ್ತು. ಅವರು ಅನುಮೋದನೆ ನೀಡಿದ್ದಾರೆ ಎಂದರು.
ಆನೆಗಳನ್ನು ನಿಯಂತ್ರಣ ಮಾಡಲು ಕಂದಕ, ಸೋಲಾರ್ ಪೆನ್ಸಿಂಗ್, ರೇಡಿಯೋ ಕಾಲರ್ ಅಳವಡಿಕೆ ಕಾರ್ಯ ಕೂಡ ನಡೆಯುತ್ತಿದೆ. ಅಲ್ಲದೆ ಕಾಡಿನಲ್ಲಿ ಆನೆಗಳಿಗೆ ಆಹಾರ, ಕುಡಿಯುವ ನೀರು ಸೇರಿದಂತೆ ಇನ್ನಿತರ ಮೂಲಭೂತ ಸೌಕರ್ಯಗಳನ್ನು ಕಲ್ಪಿಸುವ ನಿಟ್ಟಿನಲ್ಲಿ ತಜ್ಞರ ಸಮಿತಿ ರಚನೆ ಮಾಡಿ ಅಲ್ಲಿಯ ವಸ್ತು ಸ್ಥಿತಿ ಅಧ್ಯಯನ ನಡೆಸಿ ವರದಿ ನೀಡಿದ ನಂತರ ಅರಣ್ಯ ಪ್ರದೇಶದ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ ನೀಡಲಾಗುವುದು ಎಂದು ತಿಳಿಸಿದರು.
ಆನೆ ಮತ್ತು ಮಾನವ ಸಂಘರ್ಷವನ್ನು ತಪ್ಪಿಸುವ ನಿಟ್ಟಿನಲ್ಲಿ ಈಗಾಗಲೇ ಟಾಸ್ಕ್ ಫೋರ್ಸ್ ಸಮಿತಿ ರಚನೆ ಮಾಡಿದ್ದು ಇದಕ್ಕೆ ಮೂಲಭೂತ ಸೌಕರ್ಯಗಳು ಮತ್ತು ಹುದ್ದೆಗಳು ಖಾಲಿ ಇದ್ದರೆ ಅವುಗಳನ್ನು ಶೀಘ್ರದಲ್ಲಿ ಭರ್ತಿ ಮಾಡಲು ಸೂಚನೆ ನೀಡಲಾಗಿದೆ. ಈ ವರ್ಷ ನಮ್ಮ ರಾಜ್ಯದಲ್ಲಿ ವನ್ಯಜೀವಿಗಳಿಂದ ಮೃತಪಟ್ಟವರ ಸಂಖ್ಯೆ 28 ಇದ್ದರೆ ಕಳೆದ ವರ್ಷ 53 ಜನ ಸಾವನ್ನಪ್ಪಿದ್ದರು ಎಂದು ಹೇಳಿದರು.
ಕಾಡಂಚಿನಲ್ಲಿ ಕಲ್ಲು ಗಣಿಗಾರಿಕೆ ಹಾಗೂ ಇನ್ನಿತರೆ ಯೋಜನೆಗಳು ಅಕ್ರಮವಾಗಿ ನಡೆಯುತ್ತಿದ್ದರೆ ಜನರ ಹಿತದೃಷ್ಟಿಯಿಂದ ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿಗೆ ಸೂಚನೆ ನೀಡಲಾಗಿದೆ. ಅಲ್ಲದೆ ಜುಲೈ ತಿಂಗಳಲ್ಲಿ ನಮ್ಮ ಇಲಾಖೆಯಿಂದ ಅರಣ್ಯ ಮಹೋತ್ಸವ ಕಾರ್ಯಕ್ರಮದ ಅಂಗವಾಗಿ ಐದು ಕೋಟಿ ಸಸಿ ನೆಡುವ ಗುರಿ ಹೊಂದಿದ್ದು ಈಗಾಗಲೇ ಮೂರು ಕೋಟಿ ನೆಡಲಾಗಿದೆ. ಬಾಕಿ ಎರಡು ಕೋಟಿ ಸಸಿ ನೆಡುವ ಕಾರ್ಯಕ್ರಮವನ್ನು ಎರಡು ತಿಂಗಳಲ್ಲಿ ಪೂರ್ಣಗೊಳಿಸಲಾಗುವುದು ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಆನೆ ಸಮಸ್ಯೆಗೆ ಕೇಂದ್ರದಿಂದ ಯಾವುದೇ ಹಣದ ಅವಶ್ಯಕತೆ ಇಲ್ಲ. ಕೇಂದ್ರದ ಕ್ಯಾಂಪ್ಕೋ ನಿಧಿಯಲ್ಲಿ 600 ಕೋಟಿ ಹಣ ಇದ್ದು ಅದನ್ನು ಬಿಡುಗಡೆ ಮಾಡಿದರೆ ಶಾಶ್ವತ ಪರಿಹಾರ ರೂಪಿಸಬಹುದು. ಈ ಸಂಬಂಧ ಕೇಂದ್ರ ಸಚಿವರನ್ನು ನಾನೇ ಭೇಟಿ ಮಾಡಿ ಮಾತುಕತೆ ನಡೆಸಿದ್ದೇನೆ. ಕಳೆದ ಬಾರಿ ಕ್ರಿಯಾ ಯೋಜನೆ ಸಲ್ಲಿಸಲಾಗಿತ್ತು, ಅದನ್ನು ರದ್ದುಪಡಿಸಿದ್ದರು ಎಂದರು.
ಜಿಲ್ಲೆಯಲ್ಲಿ ಆನೆ ಕಾರಿಡಾರ್ ಯೋಜನೆಗೆ ಸಂಬಂಧಿಸಿದಂತೆ ನನ್ನ ಹತ್ತಿರ ಯಾವುದೇ ಪ್ರಸ್ತಾವನೆ ಸಲ್ಲಿಕೆಯಾಗಿಲ್ಲ. ಜಿಲ್ಲೆಯಲ್ಲಿ ಹಲವು ಹೋಂ ಸ್ಟೇಗಳು ಅರಣ್ಯ ಜಾಗ ಒತ್ತುವರಿ ಮಾಡಿ ಕಾನೂನು ಉಲ್ಲಂಘಿಸಿದರೆ ಅಂತಹವರ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳಲಾಗುವುದು. ಈಗಾಗಲೇ ದೊಡ್ಡ ದೊಡ್ಡವರು ಅತಿಕ್ರಮಣ ಮಾಡಿಕೊಂಡು ಅವರ ಮೇಲೆ ಕ್ರಿಮಿನಲ್ ಪ್ರಕರಣ ದಾಖಲಿಸಲಾಗಿದೆ ಎಂದು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಅರಸೀಕೆರೆ ಕ್ಷೇತ್ರದ ಶಾಸಕ ಕೆ.ಎಂ. ಶಿವಲಿಂಗೇಗೌಡ, ಸಕಲೇಶಪುರ ಕ್ಷೇತ್ರದ ಶಾಸಕ ಸಿಮೆಂಟ್ ಮಂಜು, ಜಿಲ್ಲಾಧಿಕಾರಿ ಸಿ. ಸತ್ಯಭಾಮಾ ಮತ್ತು ಇನ್ನಿತರೆ ಅಧಿಕಾರಿಗಳು ಹಾಜರಿದ್ದರು.