ಕಾಡಾನೆ ಮಾನವ ಸಂಘರ್ಷ ತಪ್ಪಿಸಿ

26 gkl 04
Published on

ಗೋಣಿಕೊಪ್ಪ: ರೈತ ವಿರೋಧಿ ಕಾನೂನುಗಳನ್ನು ಹಿಂಪಡೆಯಲು ರಾಜ್ಯ ಸರ್ಕಾರದೊಂದಿಗೆ ಪತ್ರ ವ್ಯವಹಾರ ನಡೆಸಲಾಗಿದೆ ಎಂದು ಕರ್ನಾಟಕ ರಾಜ್ಯ ರೈತ ಸಂಘದ ಅಧ್ಯಕ್ಷ ಬಡಗಲಪುರ ನಾಗೇಂದ್ರ ಹೇಳಿದರು.

ಇಲ್ಲಿನ ಪರಿಮಳ ಮಂಗಳ ವಿಹಾರ ಕಲ್ಯಾಣ ಮಂಟಪದಲ್ಲಿ ಸೋಮವಾರ ಆಯೋಜಿಸಿದ್ದ ರಾಜ್ಯ ರೈತ ಸಂಘ ಕೊಡಗು ಜಿಲ್ಲಾ ಶಾಖೆಯ ವಾರ್ಷಿಕ ಮಹಾಸಭೆಯಲ್ಲಿ ಮಾತನಾಡಿದರು.ಜಿಲ್ಲೆಯಲ್ಲಿ ಕಾಡಾನೆ ಮಾನವ ಸಂಘರ್ಷ ನಿರಂತರವಾಗಿ ನಡೆಯುತ್ತಿದೆ. ಶಾಶ್ವತ ಯೋಜನೆ ರೂಪಿಸುವ ನಿಟ್ಟಿನಲ್ಲಿ ರೈತ ಸಂಘವು ಸದ್ಯದಲ್ಲೇ ಮುಖ್ಯ ಮಂತ್ರಿಗಳನ್ನು ಭೇಟಿ ಮಾಡಲಿದೆಅಲ್ಲದೇ, ಕಾಡಾನೆ ದಾಳಿಯಿಂದ ಮೃತಪಟ್ಟ ವ್ಯಕ್ತಿಗಳ ಕುಟುಂಬಗಳಿಗೆ ನೀಡುತ್ತಿರುವ ಪರಿಹಾರ ಹಣ 15 ಲಕ್ಷ ರೂ.ಗಳಿಂದ 50 ಲಕ್ಷ ರೂ.ಗಳಿಗೆ ಏರಿಕೆ ಮಾಡುವಂತೆ ರಾಜ್ಯ ಸರ್ಕಾರವನ್ನು ಒತ್ತಾಯಿಸಲಾಗುವುದು ಎಂದು ತಿಳಿಸಿದರು.

ರಾಜ್ಯ ರೈತ ಸಂಘದ ವರಿಷ್ಠ ಅಶ್ವತ್ಥ್‌ನಾರಾಯಣ ಅರಸ್ ಮಾತನಾಡಿ, ರಾಜ್ಯದಲ್ಲಿ ರೈತ ಸಂಘವು ವಿವಿಧ ಹೋರಾಟ ಮಾಡಿಕೊಂಡು ಬಂದಿದೆ. ರೈತ ಪರವಾದ ನಿಲುವುಗಳಿಗೆ ಬದ್ಧವಾಗಿ ಕಾರ್ಯನಿರ್ವಹಿಸುತ್ತಿದೆ. ಕೊಡಗು ಜಿಲ್ಲೆಯಲ್ಲಿ ಸಂಘಟನೆ ಕೆಲವು ವರ್ಷಗಳ ಹಿಂದಷ್ಟೇ ಉದಯವಾದರೂ ಇದೀಗ ಗ್ರಾಮೀಣ ಪ್ರದೇಶದ ರೈತರ ಆಶೋತ್ತರಗಳಿಗೆ ಸ್ಪಂದಿಸಿ ಬೃಹತ್ ಸಂಘವಾಗಿ ಬೆಳೆದಿದೆ. ರೈತರ ಸಮಸ್ಯೆಗಳನ್ನು ಪರಿಹರಿಸಲು ಹೋರಾಟ ಒಂದೇ ಮಾರ್ಗ ಎಂದು ಹೇಳಿದರು.

ರೈತ ಸಂಘದ ಜಿಲ್ಲಾ ಘಟಕದ ಕಾನೂನು ಸಲಹೆಗಾರ ಕೆ.ಬಿ.ಹೇಮಚಂದ್ರ ಪ್ರಾಸ್ತಾವಿಕವಾಗಿ ಮಾತನಾಡಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಚೆಟ್ರುಮಾಡ ಸುಜಯ್ ಬೋಪಯ್ಯ ವಾರ್ಷಿಕ ವರದಿ ವಾಚಿಸಿದರು. ಜಿಲ್ಲಾ ಕಾರ್ಯದರ್ಶಿ ಅಜ್ಜಮಾಡ ಚಂಗಪ್ಪ ಲೆಕ್ಕಪತ್ರ ಮಂಡಿಸಿದರು.
ಜಿಲ್ಲಾ ಸಂಚಾಲಕ ಪುಚ್ಚಿಮಾಡ ಸುಭಾಷ್ ಸುಬ್ಬಯ್ಯ, ಕೋಶಾಧಿಕಾರಿ ಇಟ್ಟೀರ ಸಭೀತಾ ಭೀಮಯ್ಯ, ಉಪಾಧ್ಯಕ್ಷ ಶಂಕ್ರಪ್ಪ , ರೈತ ಮುಖಂಡ ಚೆಪ್ಪುಡೀರ ಕಾರ್ಯಪ್ಪ, ರೈತ ಸಂಘದ ಜಿಲ್ಲಾ ಹಾಗೂ ಹೋಬಳಿ ಘಟಕದ ಪದಾಧಿಕಾರಿಗಳು, ಸದಸ್ಯರು ಹಾಜರಿದ್ದರು.

10ರಂದು ಸೆಸ್ಕ್ ಕಚೇರಿ ಎದುರು ಧರಣಿ

ಅಧ್ಯಕ್ಷತೆ ವಹಿಸಿದ್ದ ರೈತ ಸಂಘದ ಕೊಡಗು ಜಿಲ್ಲಾಧ್ಯಕ್ಷ ಕಾಡ್ಯಾಮಾಡ ಮನು ಸೋಮಯ್ಯ ಮಾತನಾಡಿ, ಗುಣಮಟ್ಟದ ವಿದ್ಯುತ್ ಪೂರೈಕೆ ಮಾಡುವಂತೆ ಮತ್ತು ವಿದ್ಯುತ್ ದರ ಏರಿಕೆ ಖಂಡಿಸಿ ಜುಲೈ 10 ರಂದು ಜಿಲ್ಲೆಯ ವಿದ್ಯುತ್ ನಿಗಮ ಕಚೇರಿ ಎದುರು ರೈತ ಸಂಘದ ವತಿಯಿಂದ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ತಿಳಿಸಿದರು.ಇತ್ತೀಚೆಗೆ ದಕ್ಷಿಣ ಕೊಡಗಿನ ಬೆಳೆಗಾರರೊಬ್ಬರ ವಿರುದ್ಧ ಸುಳ್ಳು ಪ್ರಕರಣ ದಾಖಲಿಸಿದ ಮಹಿಳಾ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ವರ್ಗಾವಣೆಗೆ ಆಗ್ರಹಿಸಿ ಅಹೋರಾತ್ರಿ ಹೋರಾಟ ಮಾಡಲು ರೈತ ಸಂಘ ತೀರ್ಮಾನಿಸಿದೆ ಎಂದರು.

ಕಾಡಾನೆ ದಾಳಿಯಿಂದ ಬೆಳೆಗಾರರು ಸಂಕಷ್ಟದಲ್ಲಿದ್ದಾರೆ. ಕೃಷಿ ಫಸಲು ನಾಶವಾಗಿದೆ. ಪರಿಣಾಮ ಕಾರ್ಮಿಕರಿಗೆ ವೇತನ ನೀಡಲು ಕಷ್ಟ ಸಾಧ್ಯವಾಗಿದ್ದು, ರಾಜ್ಯ ಸರ್ಕಾರ ಮಧ್ಯೆ ಪ್ರವೇಶಿಸಿ ಕಾರ್ಮಿಕರಿಗೆ ಶೇ.50ರಷ್ಟು ವೇತನ ನೀಡಲು ಕ್ರಮವಹಿಸಬೇಕು ಎಂದು ಆಗ್ರಹಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net