

ಹಾಸನ; ಕಾಡಾನೆ ದಿಢೀರ್ ದಾಳಿಯಿಂದ ರೈತರೊಬ್ಬರು ಗಂಭೀರ ಗಾಯಗೊಂಡಿರುವ ಘಟನೆ ಸಕಲೇಶಪುರ ತಾಲೂಕಿನ ವಡೂರು ಗ್ರಾಮದಲ್ಲಿ ಸೋಮವಾರ ಸಂಜೆ ನಡೆದಿದೆ.
ಗ್ರಾಮದ ಮಹೇಶ್(47) ಗಾಯಾಳು ರೈತ. ಸೋಮವಾರ ಸಂಜೆ ಗದ್ದೆಯಿಂದ ಬಂದು ಮನೆಯಿಂದ ಸ್ವಲ್ಪ ದೂದರಲ್ಲಿದ್ದ ಅಂಗಡಿಯಿಂದ ಸಾಮಗ್ರಿ ತರಲು ತೆರಳುತ್ತಿದ್ದ ವೇಳೆ ಕಾಡಾನೆ ಏಕಾಏಕಿ ದಾಳಿ ನಡೆಸಿದೆ. ಮಹೇಶ್ ಅವರನ್ನು ಸೊಂಡಿಲಿನಿಂದ ಎತ್ತಿ ಎಸೆದಿದೆ. ಮಹೇಶ್ ಅವರ
ಕಿರುಚಾಟ ಕೇಳಿ ಅಕ್ಕಪಕ್ಕದವರು ಓಡಿ ಬಂದಿದ್ದರಿಂದ, ಜನರ ಕಿರುಚಾಟ ಕೇಳಿ ತಾನೂ ಘೀಳಿಡಿತ್ತಾ ಕಾಡಾನೆ ಸ್ಥಳದಿಂದ ಕಾಲ್ಕಿತ್ತಿದೆ.
ಘಟನೆಯಲ್ಲಿ ಮಹೇಶ್ ಅವರ ಸೊಂಟಕ್ಕೆ ಬಲವಾದ ಪೆಟ್ಟು ಬಿದ್ದಿದ್ದು ಕೂಡಲೇ ಅವರನ್ನು ಸಕಲೇಶಪುರ ಕ್ರಾಫರ್ಡ್ ಆಸ್ಪತ್ರೆಗೆ ಕರೆದೊಯ್ದು ಪ್ರಾಥಮಿಕ ಚಿಕಿತ್ಸೆ ಕೊಡಿಸಿದ ನಂತರ ಹೆಚ್ಚಿನ ಚಿಕಿತ್ಸೆಗಾಗಿ ಹಾಸನ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.
ಅಧಿಕಾರಿಗಳ ವಿರುದ್ಧ ಆಕ್ರೋಶ:
ಮಹೇಶ್ ಅವರ ಸೊಂಟ ಮುರಿದಿದೆ ಎನ್ನಲಾಗಿದ್ದು, ಆರ್‌ಆರ್‌ಟಿ ಸಿಬ್ಬಂದಿ ಹೊರತು ಪಡಿಸಿ ಇಲಾಖೆಯ ಯಾವುದೇ ಮೇಲಾಧಿಕಾರಿಗಳು ಆಸ್ಪತ್ರೆಗೆ ಭೇಟಿ ನೀಡಿ ಯೋಗಕ್ಷೇಮ ವಿಚಾರಿಸಿಲ್ಲ, ಬಡ ಕುಟುಂಬದ ಕಷ್ಟ ಸುಖಗಳಿಗೆ ಸ್ಪಂದಿಸಿಲ್ಲ ಎಂದು ಸ್ಥಳೀಯರು ಅಸಮಾಧಾನ ವ್ಯಕ್ತಪಡಿಸಿದರು. ಕಾಡಾನೆ ಸಮಸ್ಯೆ ನಿವಾರಿಸಲೂ ಒತ್ತು ನೀಡುತ್ತಿಲ್ಲ. ಇತ್ತ ಗಾಯಾಳುಗಳನ್ನೂ ಕಡೆಗಣಿಸಲಾಗುತ್ತಿದೆ ಎಂದು ಆಕ್ರೋಶ ಹೊರ ಹಾಕುತ್ತಿದ್ದಾರೆ.