

ಹಾಸನ: ಸಕಲೇಶಪುರ ತಾಲೂಕು ಮಾವಿನಹಳ್ಳಿಯಲ್ಲಿ 2007ರ ಮೇ 24 ರಂದು ಕಾಡಾನೆ ದಾಳಿಯಿಂದ ಮೃತಪಟ್ಟ ಪುಟ್ಟಮ್ಮ ಅವರ ಕುಟುಂಬದ ಸದಸ್ಯರಿಗೆ ಸರ್ಕಾರಿ ಉದ್ಯೋಗ ನೀಡಬೇಕು ಎಂದು ಆಗ್ರಹಿಸಿ ಪುಟ್ಟಮ್ಮ ಅವರ ಮಗಳು ಬಿ.ಡಿ. ಶೃತಿ ಮತ್ತು ಕುಟುಂಬದ ಸದಸ್ಯರು ಬುಧವಾರ ಜಿಲ್ಲಾಧಿಕಾರಿ ಕಚೇರಿ ಮುಂದೆ ಧರಣಿ ನಡೆಸಿದರು.
ಅನುಕಂಪದ ಆಧಾರದ ಮೇರೆಗೆ ನೌಕರಿ ನೀಡುವಂತೆ 2007 ರಿಂದಲೂ ಅರ್ಜಿ ಸಲ್ಲಿಸಲಾಗುತ್ತಿದೆ. ಅರ್ಜಿ ಪರಿಗಣಿಸಿ ತೆರವಾಗಿರುವ ಮಾವಿನಹಳ್ಳಿ ಗ್ರಾಮದ ಅಂಗನವಾಡಿ ಕೇಂದ್ರದ ಕಾರ್ಯಕರ್ತೆ ಹುದ್ದೆ ನೀಡುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಮನವಿ ಮಾಡಲಾಗಿದೆ. ಆದರೂ ಯಾರೊಬ್ಬರೂ ಪರಿಗಣಿಸಿಲ್ಲ ಎಂದು ಅಳಲು ತೋಡಿಕೊಂಡರು.
ಬಿಕಾಂ ಪದವೀಧರೆಯಾಗಿರುವ ತಾವು 8 ವರ್ಷಗಳ ಹಿಂದೆ ಮಾವಿನಹಳ್ಳಿ ಗ್ರಾಮದ ಎಂ.ಆರ್. ರಂಜಿತ್ ಎಂಬುವರನ್ನು ವಿವಾಹವಾಗಿ ಅದೇ ಊರಿನಲ್ಲಿ ಕಾಯಂ ನಿವಾಸಿಯಾಗಿದ್ದೇನೆ. ಹೀಗಾಗಿ ಮಾವಿನಹಳ್ಳಿ ಅಂಗನವಾಡಿ ಕೇಂದ್ರದ ಕಾರ್ಯಕರ್ತೆ ಹುದ್ದೆಗೆ ತಮ್ಮನ್ನೇ ನೇಮಕ ಮಾಡಬೇಕು ಎಂದು ಕೋರಿ ಜಿಲ್ಲಾಧಿಕಾರಿ ಕಚೇರಿಗೆ ಮನವಿ ಸಲ್ಲಿಸಿದರು.
ಧರಣಿಯಲ್ಲಿ ಪತಿ ರಂಜಿತ್, ತಂದೆ ದೇವರಾಜ್ ಮತ್ತು ಮಕ್ಕಳು ಪಾಲ್ಗೊಂಡಿದ್ದರು.