

ಹನೂರು: ತಾಲೂಕಿನ ಕೆವಿಎನ್ ದೊಡ್ಡಿ ಗ್ರಾಮದಲ್ಲಿ ಶನಿವಾರ ರಾತ್ರಿ ಕಾಡಾನೆ ಜಮೀನಿಗೆ ಲಗ್ಗೆ ಇಟ್ಟು ಮುಸುಕಿನ ಜೋಳದ ಫಸಲು ಹಾಗೂ ತಂತಿ ಬೇಲಿ ನಾಶಪಡಿಸಿದೆ.
ಮೂರು ತಿಂಗಳ ಹಿಂದೆ ಹುಲಿ ದಾಳಿಗೆ ಬಲಿಯಾದ ಗೋವಿಂದಯ್ಯ ಅವರ ಮಗ ಕದರಯ್ಯ ಎಂಬವರು ತನ್ನ 2 ಎಕರೆ ಜಮೀನಿನಲ್ಲಿ ಮುಸುಕಿನ ಜೋಳ ಬೆಳೆದಿದ್ದು, ರಕ್ಷಣೆಗಾಗಿ ಸುತ್ತಲೂ ತಂತಿ ಬೇಲಿ ಹಾಕಿದ್ದರು. ಶನಿವಾರ ತಡರಾತ್ರಿ ಕಾಡಾನೆ ತಂತಿ ಬೇಲಿ ಕಿತ್ತುಹಾಕಿ ಜಮೀನಿಗೆ ಲಗ್ಗೆ ಇಟ್ಟು ಫಸಲನ್ನು ನಾಶಪಡಿಸಿದೆ. ಸಂಬಂಧಪಟ್ಟ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ಸರ್ಕಾರದಿಂದ ಸೂಕ್ತ ಪರಿಹಾರ ದೊರಕಿಸಿಕೊಡುವಂತೆ ರೈತ ಕದರಯ್ಯ ಒತ್ತಾಯಿಸಿದ್ದಾರೆ.
ಕಡಿವಾಣಕ್ಕೆ ಒತ್ತಾಯ: ಗ್ರಾಮದ ಅರಣ್ಯದಂಚಿನಲ್ಲಿ ರೈತರು ಜಮೀನನ್ನು ಹೊಂದಿದ್ದು, ಕೃಷಿ ಮಾಡುತ್ತಿದ್ದಾರೆ. ಆದರೆ ಆಗಾಗ್ಗೆ ಕಾಡು ಪ್ರಾಣಿಗಳು ಲಗ್ಗೆ ಇಟ್ಟು ಫಸಲನ್ನು ನಾಶಪಡಿಸುತ್ತಿವೆ. ಇದರಿಂದ ಕೃಷಿಯಲ್ಲಿ ನಷ್ಟ ಉಂಟಾಗುತ್ತಿದೆ. ಜತೆಗೆ ಜೀವಭಯ ಕಾಡುತ್ತಿದೆ.
ಕಾಡು ಪ್ರಾಣಿಗಳ ಹಾವಳಿಗೆ ಕಡಿವಾಣ ಹಾಕುವಂತೆ ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಹಲವು ಬಾರಿ ಮನವಿ ಮಾಡಿದ್ದರೂ ಪ್ರಯೋಜನವಾಗಿಲ್ಲ. ಸಂಬಂಧಪಟ್ಟವರು ಇನ್ನು ಮುಂದಾದರೂ ಇತ್ತ ಗಮನಹರಿಸಬೇಕು ಎಂದು ರೈತರು ಒತ್ತಾಯಿಸಿದ್ದಾರೆ.