

ಹನೂರು: ತಾಲೂಕಿನ ಒಡೆಯರಪಾಳ್ಯ ಸಮೀಪದ ಕೊರಮನಕತ್ತರಿಯ ತೋಟದ ಮನೆಯ ಜಮೀನೊಂದರಲ್ಲಿ ಮಂಗಳವಾರ ತಡರಾತ್ರಿ ಕಾಡಾನೆ ದಾಳಿ ನಡೆಸಿ ವೃದ್ಧನೊಬ್ಬನನ್ನು ಬಲಿ ಪಡೆದಿದೆ.
ಗ್ರಾಮದ ನಂಜಪ್ಪ (75) ಮೃತರು. ಮಲೆಮಹದೇಶ್ವರ ವನ್ಯಜೀವಿ ವಿಭಾಗದ ಪಿ.ಜಿ. ಪಾಳ್ಯ ವನ್ಯಜೀವಿ ವಲಯ ವ್ಯಾಪ್ತಿಗೆ ಸೇರಿದ ತೋಟದ ಮನೆಯ ಜಮೀನಿನಲ್ಲಿ ಅರಿಶಿಣ ಬೆಳೆದು ಕಟಾವು ಮಾಡಿದ್ದು, ರಾಶಿ ಹಾಕಿದ್ದರು. ವನ್ಯಪ್ರಾನಿಗಳ ಹಾವಳಿ ಕಾರಣ ರಾತ್ರಿ ಅರಿಶಿಣ ರಾಶಿಯ ಕಾವಲು ಕಾಯುತ್ತಿದ್ದರು. ಮಧ್ಯರಾತ್ರಿ 2 ಗಂಟೆಯಲ್ಲಿ ಬಿಆರ್‌ಟಿ ಹುಲಿ ಸಂರಕ್ಷಿತ ಅರಣ್ಯ ಪ್ರದೇಶದಿಂದ ಆಗಮಿಸಿದ 2 ಕಾಡಾನೆಗಳು ಸಮೀಪದ ಜಮೀನಿನಲ್ಲಿ ಮುಸುಕಿನ ಜೋಳ ತಿಂದು ಜಮೀನಿಗೆ ಲಗ್ಗೆ ಇಟ್ಟಿದ್ದವು. ಈ ವೇಳೆ ಒಂದು ಕಾಡಾನೆ ವೃದ್ಧನ ಮೇಲೆ ದಾಳಿ ನಡೆಸಿ ಎದೆ ಹಾಗೂ ಕಾಲಿನ ಭಾಗವನ್ನು ಗಾಯಗೊಳಿಸಿದೆ. ಇವರ ಚೀರಾಟದ ಶಬ್ದ ಕೇಳಿ ಮನೆಯಲ್ಲಿದ್ದ ಪತ್ನಿ ಹೊರ ಬಂದು ನೋಡುವಷ್ಟರೊಳಗೆ ಮೃತಪಟ್ಟಿದ್ದಾರೆ.
ಸುದ್ದಿ ತಿಳಿದು ಸ್ಥಳಕ್ಕಾಗಮಿಸಿದ ಕುಟುಂಬಸ್ಥರು ಈ ಬಗ್ಗೆ ಅರಣ್ಯ ಇಲಾಖೆಗೆ ಮಾಹಿತಿ ತಿಳಿಸಿದಾಗ ಆರ್‌ಎಫ್‌ಒ ಪುಟ್ಟರಾಜು, ಇನ್ಸ್‌ಪೆಕ್ಟರ್ ಆನಂದಮೂರ್ತಿ ಆಗಮಿಸಿದರು. ಸ್ಥಳಕ್ಕೆ ಹಿರಿಯ ಅಧಿಕಾರಿಗಳು ಆಗಮಿಸುವವರೆಗೂ ಶವವನ್ನು ತೆಗೆಯಲು ಬಿಡುವುದಿಲ್ಲ ಎಂದು ಜನರು ಪಟ್ಟು ಹಿಡಿದರು.
ಬುಧವಾರ ಬೆಳಗ್ಗೆ ಡಿಸಿಎಫ್ ಚಕ್ರಪಾಣಿ ಸ್ಥಳಕ್ಕೆ ಆಗಮಿಸಿ ಪರಿಶೀಲಿಸಿದರು. ಈ ವೇಳೆ ಸ್ಥಳೀಯ ರೈತರು ಮಾತನಾಡಿ, ಈ ಭಾಗದಲ್ಲಿ ಕಾಡು ಪ್ರಾಣಿಗಳ ಹಾವಳಿಯನ್ನು ತಡೆಗಟ್ಟಬೇಕು, ಮೃತ ಕುಟುಂಬಕ್ಕೆ 20 ಲಕ್ಷ ರೂ. ಪರಿಹಾರ ನೀಡಬೇಕು, ಇಲ್ಲವಾದಲ್ಲಿ ಜಮೀನಿಗೆ ಲಗ್ಗೆ ಇಡುವ ಕಾಡಾನೆಗಳ ಕಡಿವಾಣಕ್ಕೆ ರೈತರೇ ಮುಂದಾಗಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಡಿಸಿಎಫ್ ಚಕ್ರಪಾಣಿ ಮಾತನಾಡಿ, ಕೂಡಲೇ 5 ಲಕ್ಷ ರೂ. ಪರಿಹಾರವನ್ನು ನೀಡಲಾಗುವುದು. ಮರಣೋತ್ತರ ವರದಿಯ ಬಳಿಕ ಸರ್ಕಾರದಿಂದ ಉಳಿದ 10 ಲಕ್ಷ ರೂ. ನೀಡಲಾಗುವುದು. ಇನ್ನು ಬಿಆರ್‌ಟಿ ಅಧಿಕಾರಿಗಳೊಂದಿಗೆ ಜಂಟಿ ಸಭೆ ಕರೆದು ಚರ್ಚಿಸಿ ಕಾಡಾನೆಗಳು ಜಮೀನಿಗೆ ಲಗ್ಗೆ ಇಡದಂತೆ ಸೂಕ್ತ ಕ್ರಮಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದ ಬಳಿಕ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಕಳುಹಿಸಿಕೊಡಲಾಯಿತು. ಮರಣೋತ್ತರ ಪರೀಕ್ಷೆ ನಡೆಸಿದ ನಂತರ ಶವವನ್ನು ವಾರಸುದಾರರಿಗೆ ನೀಡಲಾಯಿತು. ಹನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.