ಚಾಮರಾಜನಗರ: ಹನೂರು ತಾಲೂಕಿನ ಮಲೆಮಹದೇಶ್ವರ ವನ್ಯಜೀವಿ ವಿಭಾಗದ ಏರನಕಲ್ಲು ಅರಣ್ಯ ಪ್ರದೇಶದಲ್ಲಿ ಗುರುವಾರ ಸಂಜೆ ಆನೆ ದಾಳಿಗೆ ವ್ಯಕ್ತಿಯೊಬ್ಬ ಬಲಿಯಾಗಿದ್ದಾರೆ.
ತಾಲೂಕಿನ ತೋಕೆರೆ ಗ್ರಾಮದ ಚಿನ್ನಮಾದಯ್ಯ (60) ಮೃತರು. ಹಲವು ವರ್ಷಗಳಿಂದ ಹಳೆ ಮಾರ್ಟಳ್ಳಿ ಗ್ರಾಮದ ತಾಂಡಮೇಡಿನಲ್ಲಿ ವಾಸಿಸುತ್ತಿದ್ದ ಅವರು, ಗುರುವಾರ ಸ್ವಗ್ರಾಮ ತೋಕೆರೆಗೆ ತೆರಳಿದ್ದರು. ಸಂಜೆ 5.30ರ ವೇಳೆಯಲ್ಲಿ ಗ್ರಾಮಕ್ಕೆ ಹಿಂತಿರುಗುತ್ತಿದ್ದಾಗ ಏರನಕಲ್ಲು ಅರಣ್ಯ ಪ್ರದೇಶದಲ್ಲಿ ಆನೆ ದಾಳಿ ನಡೆಸಿದ್ದು, ಚಿನ್ನಮಾದಯ್ಯ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಸುದ್ದಿ ತಿಳಿದು ಅರಣ್ಯ ಹಾಗೂ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದರು.
2ನೇ ಘಟನೆ: ಮೇ 10 ರಂದು ಇದೇ ಗ್ರಾಮದ ಪುಟ್ಟಸ್ವಾಮಿ ಎಂಬವರು ಕುಟುಂಬ ಸಮೇತ ತೋಕೆರೆ ಗ್ರಾಮಕ್ಕೆ ತೆರಳಿ ಮತ ಚಲಾಯಿಸಿ ಬಳಿಕ ವಾಸಿಸುತ್ತಿದ್ದ ಹಳೆ ಮಾರ್ಟಳ್ಳಿ ಗ್ರಾಮಕ್ಕೆ ಇದೇ ಮಾರ್ಗದಲ್ಲಿ ಆಗಮಿಸುತ್ತಿದ್ದರು. ಈ ವೇಳೆ ಆನೆಯೊಂದು ದಾಳಿ ನಡೆಸಿ ಪುಟ್ಟಸ್ವಾಮಿ ಮೃತಪಟ್ಟಿದ್ದರು. ಇದೀಗ ಈ ಮಾರ್ಗದಲ್ಲಿ ಆನೆ ದಾಳಿಗೆ 2ನೇ ಬಲಿಯಾಗಿದೆ.
ಈ ಬಗ್ಗೆ ಆರ್‌ಎಫ್‌ಒ ಸುಂದರ್ ವಿಜಯವಾಣಿಯೊಂದಿಗೆ ಮಾತನಾಡಿ, ಸಂಜೆ ಈ ಘಟನೆ ನಡೆದಿದೆ. ಮೃತದೇಹದ ಆಸ್ಪತ್ರೆಗೆ ಒಯ್ಯಲು ಸಿಬ್ಬಂದಿ ಕಳುಹಿಸಲಾಗಿದೆ ಎಂದು ತಿಳಿಸಿದರು.