

ಸಕಲೇಶಪುರ: ತಾಲೂಕಿನ ಕಿರೇಹಳ್ಳಿ ಗ್ರಾಮ ಸಮೀಪ ಭಾನುವಾರ ರಾತ್ರಿ ಕಾಡಾನೆಯೊಂದು ಬೈಕ್ ಸವಾರನ ಮೇಲೆ ದಾಳಿ ನಡೆಸಿದ್ದು, ಆತ ಕೂದಲೆಳೆ ಅಂತರದಲ್ಲಿ ಪಾರಾಗಿದ್ದು, ಬೈಕ್‌ಅನ್ನು ತುಳಿದು ಜಖಂಗೊಳಿಸಿದೆ.
ಕಾಟಳ್ಳಿ ಗ್ರಾಮದ ಚೇತನ್ ಭಾನುವಾರ ರಾತ್ರಿ ಕಿರೇಹಳ್ಳಿ ಗ್ರಾಮದ ಮಾರ್ಗವಾಗಿ ಕಾಟಳ್ಳಿ ಗ್ರಾಮಕ್ಕೆ ತೆರಳುತಿದ್ದ ವೇಳೆ ಏಕಾಏಕಿ ಎದುರಾದ ಕಾಡಾನೆಯಿಂದ ದಾಳಿ ನಡೆಸಿದೆ. ಇದರಿಂದ ಎಚ್ಚೆತ್ತ ಚೇತನ್ ಬೈಕ್ ಸ್ಥಳದಲ್ಲೇ ಬಿಟ್ಟು ಸ್ಥಳದಿಂದ ಕಾಲ್ಕಿತ್ತು ತಪ್ಪಿಸಿಕೊಂಡಿದ್ದಾರೆ. ಆನೆ ಕೋಪಕ್ಕೆ ತುತ್ತಾದ ಬೈಕ್ ಸಂಪೂರ್ಣ ಜಖಂಗೊಂಡಿದೆ. ಸ್ಥಳಕ್ಕೆ ಅರಣ್ಯ ಇಲಾಖೆ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.