

ಹನೂರು: ತಾಲೂಕಿನ ಕಾಡಂಚಿನ ಗ್ರಾಮ ಗಾಣಿಗಮಂಗಲದ ಜಮೀನೊಂದಕ್ಕೆ ಸೋಮವಾರ ತಡರಾತ್ರಿ ಕಾಡಾನೆ ಲಗ್ಗೆ ಇಟ್ಟು ಕಟಾವಿಗೆ ಬಂದಿದ್ದ ಬಾಳೆ ಫಸಲನ್ನು ನಾಶಗೊಳಿಸಿದೆ.
ಸಿದ್ದಮ್ಮ ಎಂಬುವವರು ಗ್ರಾಮ ಸಮೀಪದಲ್ಲಿ ಜಮೀನನ್ನು ಹೊಂದಿದ್ದು, 1.5 ಎಕರೆಯಲ್ಲಿ ಬಾಳೆ ಬೆಳೆದಿದ್ದರು. ಫಸಲು ಕಟಾವಿಗೆ ಬಂದಿದ್ದು, ತಡರಾತ್ರಿ ಸುಮಾರು 1 ಗಂಟೆಯಲ್ಲಿ ಸಮೀಪದ ಕಾವೇರಿ ವನ್ಯಜೀವಿ ವಲಯದ ಅರಣ್ಯ ಪ್ರದೇಶದಿಂದ ಜಮೀನಿಗೆ ಲಗ್ಗೆ ಇಟ್ಟ ಕಾಡಾನೆ ಫಸಲನ್ನು ನಾಶಗೊಳಿಸಿದೆ.
ಈ ವೇಳೆ ಸ್ಥಳೀಯರು ಆನೆಯನ್ನು ಕಾಡಿಗೆ ಓಡಿಸಿದ್ದಾರೆ. ಈ ಬಗ್ಗೆ ಸಿದ್ದಮ್ಮ ಕುಟುಂಬಸ್ಥರು ಮಂಗಳವಾರ ಅರಣ್ಯ ಇಲಾಖೆಗೆ ಮಾಹಿತಿ ತಿಳಿಸಲಾಗಿ ಸ್ಥಳಕ್ಕಾಗಮಿಸಿದ ಅಧಿಕಾರಿಗಳು ಪರಿಶೀಲನೆ ನಡೆಸಿದರು.