ಚಾಮರಾಜನಗರ : ಯಳಂದೂರು ತಾಲೂಕಿನ ಯರಗಂಬಳ್ಳಿ ಗ್ರಾಮದಲ್ಲಿ ಕಾಡಾನೆ ದಾಳಿ ನಡೆಸಿ ಬಾಳೆ ಫಸಲನ್ನು ನಾಶಗೊಳಿಸಿದ ಹಿನ್ನೆಲೆಯಲ್ಲಿ ಸ್ಥಳ ಪರಿಶೀಲನೆಗಾಗಿ ಬಂದಿದ್ದ ಆರ್‌ಎಫ್‌ಒ ಹಾಗೂ ಅರಣ್ಯ ಇಲಾಖೆಯ ಸಿಬ್ಬಂದಿಯನ್ನು ರೈತರು ದಿಗ್ಬಂಧನ ಹಾಕಿ ಘಟನೆ ಶುಕ್ರವಾರ ಆಕ್ರೋಶವ್ಯಕ್ತಪಡಿಸಿದರು.
ಬಿಆರ್‌ಟಿ ಹುಲಿ ರಕ್ಷಿತ ಅರಣ್ಯ ಪ್ರದೇಶದ ತಪ್ಪಲಿನಲ್ಲೇ ಇರುವ ಯರಗಂಬಳ್ಳಿ ಗ್ರಾಮದ ಜಮೀನುಗಳಿಗೆ ಪ್ರತಿನಿತ್ಯ ಕಾಡಾನೆ, ಕಾಡುಹಂದಿ, ಜಿಂಕೆ, ಕಡವೆ, ಕಾಡುಕುರಿಗಳು ದಾಳಿ ನಡೆಸಿ ಫಸಲನ್ನು ನಾಶಗೊಳಿಸುವ ಕಾರ್ಯ ದಿನನಿತ್ಯ ನಡೆಯುತ್ತಿದೆ. ಇಲ್ಲಿನ ಮಹದೇವಸ್ವಾಮಿ ಒಂದೂವರೆ ಎಕರೆ ಜಮೀನಿನಲ್ಲಿ ಬೆಳೆದಿದ್ದ 6 ತಿಂಗಳ 500 ರಿಂದ 600 ನೇಂದ್ರ ತಳಿಯ ಬಾಳೆಯ ಗಿಡಗಳನ್ನು ಐದಾರು ಕಾಡಾನೆಗಳ ಹಿಂಡು ಮೇಯ್ದಿದೆ. ಮಾರ್ಚ್‌ನಲ್ಲಿ 2 ತಿಂಗಳ ಗಿಡಗಳಿದ್ದಾಗಲೂ ಕಾಡಾನೆಗಳು ದಾಳಿ ನಡೆಸಿ 400 ಕ್ಕೂ ಹೆಚ್ಚು ಗಿಡಗಳನ್ನು ನಾಶಪಡಿಸಿದ್ದವು. ಈ ಬಗ್ಗೆ ದೂರು ನೀಡಿದ್ದರೂ ಇನ್ನೂ ಪರಿಹಾರ ಸಿಕ್ಕಿಲ್ಲ. ಈಗ ಮತ್ತೆ ಆನೆಗಳ ಹಿಂಡು ಫಸಲನ್ನು ನಾಶ ಮಾಡಿವೆ. ಇದಕ್ಕೆ ಅರಣ್ಯ ಇಲಾಖೆಯ ನಿರ್ಲಕ್ಷ್ಯವೇ ಕಾರಣ ಎಂದು ದೂರಿದರು.
ಬೆಳಗ್ಗೆ ಸ್ಥಳಕ್ಕೆ ಆಗಮಿಸಿದ ಆರ್‌ಎಫ್‌ಒ ಲೋಕೇಶ್‌ಮೂರ್ತಿ ಹಾಗೂ ಸಿಬ್ಬಂದಿಗೆ ಸ್ಥಳದಲ್ಲಿದ್ದ ರೈತರು ದಿಗ್ಬಂಧನ ಹಾಕಿದರು. ಈ ಪ್ರದೇಶದಲ್ಲಿ ಪ್ರತಿ ರೈತರ ಜಮೀನುಗಳಿಗೂ ಪ್ರತಿನಿತ್ಯ ಕಾಡುಪ್ರಾಣಿಗಳು ಬಂದು ಬಾಳೆ, ಮುಸುಕಿನ ಜೋಳ, ತೆಂಗು, ಮಾವು, ಟೊಮ್ಯಾಟೋ ಸೇರಿದಂತೆ ಎಲ್ಲ ಬೆಳೆಗಳನ್ನು ನಾಶ ಮಾಡುತ್ತಿವೆ. ಈ ಪ್ರದೇಶಗಳ ಸುತ್ತ ಅರಣ್ಯ ಇಲಾಖೆ ಹಾಕಿರುವ ಸೋಲಾರ್ ತಂತಿ ಬೇಲಿ ಕಿತ್ತು ಬಂದಿದೆ. ಕಂದಕಗಳು ಮುಚ್ಚಿವೆ. ಇಲಾಖೆಯ ಸಿಬ್ಬಂದಿ ರಾತ್ರಿ ಗಸ್ತಿನ ಪಾಳಿಯನ್ನು ಸರಿಯಾಗಿ ನಿರ್ವಹಿಸುತ್ತಿಲ್ಲ. ಇದನ್ನು ಸರಿಪಡಿಸಬೇಕು. ಕೂಡಲೇ ಸ್ಥಳದಲ್ಲಿ ಪರಿಹಾರದ ಹಣ ನೀಡಬೇಕು. ಇಲ್ಲವೆ ಲಿಖಿತ ರೂಪದ ಭರವಸೆ ನೀಡಬೇಕು. ಇಲ್ಲವಾದಲ್ಲಿ ಮೇಲಧಿಕಾರಿ ಸ್ಥಳಕ್ಕೆ ಕರೆಸುವಂತೆ ಆಗ್ರಹಿಸಿ ಅರಣ್ಯ ಇಲಾಖೆಯ ಜೀಪ್ ತಡೆದು ಸಂಜೆವರೆವಿಗೂ ದಿಗ್ಬಂಧನ ಹಾಕಿದರು.
ಸೂಕ್ತ ಪರಿಹಾರಕ್ಕೆ ಕ್ರಮ: ಆರ್‌ಎಫ್‌ಒ ಲೊಕೇಶ್‌ಮೂರ್ತಿ ಮಾತನಾಡಿ, ನಮ್ಮಲ್ಲಿ ಸಿಬ್ಬಂದಿ ಕೊರತೆ ಇದೆ. ಸೋಲಾರ್ ತಂತಿ ಕಿತ್ತಿದೆ. ಇಲ್ಲಿ 3 ಕಿ.ಮೀ. ವರೆಗೆ ರೈಲುಕಂಬಿಯ ಬ್ಯಾರಿಕೇಡ್ ಹಾಕಲು ಈಗಾಗಲೇ ಪ್ರಕ್ರಿಯೆ ಆರಂಭಗೊಂಡಿದೆ. ಯಳಂದೂರು ವಲಯದಲ್ಲಿ 34 ಕಿ.ಮೀ. ಅರಣ್ಯ ಗಡಿ ಇದೆ. ಹಾಗಾಗಿ ಸಿಬ್ಬಂದಿ ಕೊರತೆ ಇದೆ. ಮೇಲಧಿಕಾರಿಗಳ ಗಮನಕ್ಕೆ ಈ ವಿಷಯ ತರಲಾಗುವುದು. ಪರಿಹಾರ ಆದಷ್ಟು ಶೀಘ್ರವಾಗಿ ಕ್ರಮ ವಹಿಸಲಾಗುವುದು ಎಂದು ಭರವಸೆ ನೀಡಿದರು. ನಂತರ ಸಂಜೆ ರೈತರು ದಿಗ್ಬಂಧನ ಕೈಬಿಟ್ಟರು.
ರೈತರಾದ ಸಿದ್ದು, ನಾಗೇಗೌಡ, ಸಿದ್ದರಾಜು, ಕುಮಾರ, ಮಹೇಶಪ್ಪ, ತ್ಯಾಗರಾಜು, ರವಿ, ಮಹೇಶ್, ವಿರೂಪಾಕ್ಷ ಸೇರಿದಂತೆ ಅನೇಕರು ಇದ್ದರು.