ಕಾಡಾಕ್ಕೆ ಈ ಸಲ ಅನುದಾನ ಕಡಿಮೆ: ಜಿ.ನಿಜಗುಣರಾಜು

7eff14a0-bf7c-4f33-8174-47727333934a
Published on

ಮೈಸೂರು: ಕಳೆದ ಎರಡು ವರ್ಷದ ಕರೊನಾ ಕಾಲಕ್ಕಿಂತ ಈ ಸಲ ಕಾವೇರಿ ಜಲಾನಯನ ಯೋಜನೆ ವ್ಯಾಪ್ತಿಯ ಅಚ್ಚುಕಟ್ಟು ಅಭಿವೃದ್ಧಿ ಪ್ರಾಧಿಕಾರ (ಕಾಡಾ)ಕ್ಕೆ ಕಡಿಮೆ ಅನುದಾನ ನೀಡಲಾಗಿದೆ ಎಂದು ಕಾಡಾ ಅಧ್ಯಕ್ಷ ಜಿ.ನಿಜಗುಣರಾಜು ಹೇಳಿದರು.

ಕೋವಿಡ್ ಸಂಕಷ್ಟದ ಕಾಲವಾದ 2020 ಮತ್ತು 2021ರಲ್ಲಿ ಕ್ರಮವಾಗಿ 25 ಕೋಟಿ ರೂ. ಮತ್ತು 15 ಕೋಟಿ ರೂ. ಅನುದಾನ ಬಂದಿತ್ತು. ಪ್ರಸ್ತುತ ಕೇವಲ 10 ಕೋಟಿ ರೂ. ಅನುದಾನ ರಾಜ್ಯ ಸರ್ಕಾರದಿಂದ ಬಂದಿದೆ, ಇದು ಸಾಕಾಗಲ್ಲ. ಇನ್ನೂ 50 ರಿಂದ 60 ಕೋಟಿ ರೂ. ಬೇಕಾಗಿದೆ. ಆದ್ದರಿಂದ ಹೆಚ್ಚಿನ ಅನುದಾನ ತರುವ ಸಂಬಂಧ ಮುಂದಿನ ವಾರ ಮುಖ್ಯಮಂತ್ರಿ, ಜಲಸಂಪನ್ಮೂಲ ಸಚಿವರನ್ನು ಭೇಟಿ ಮಾಡುವುದಾಗಿ ಸೋಮವಾರ ಸಂಜೆ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಹೆಚ್ಚಿನ ಮಳೆಯಿಂದ ಕಾಡಾ ವ್ಯಾಪ್ತಿಯ ರಸ್ತೆಗಳು, ಸಣ್ಣ ಸೇತುವೆಗಳು ಹಾಳಾಗಿವೆ. ತುರ್ತಾಗಿ ಇವುಗಳ ದುರಸ್ತಿ ಕೆಲಸ ಮಾಡಬೇಕಾಗಿದೆ. ಅದಕ್ಕಾಗಿ ಹೆಚ್ಚಿನ ಅನುದಾನ ಅಗತ್ಯವಿದೆ. ಕಾವೇರಿ ಜಲಾನಯನ ವ್ಯಾಪ್ತಿಯ ರೈತರ ಕೆಲಸವನ್ನೂ ಮಾಡಿಕೊಡಬೇಕಿದೆ. ಈ ಎಲ್ಲ ಸಂಗತಿಯನ್ನು ಸಿಎಂಗೆ ವಿವರಿಸುವುದಾಗಿ ತಿಳಿಸಿದರು.
ಆತ್ಮಸಾಕ್ಷಿಗೆ ಅನುಗುಣವಾಗಿ ಕೆಲಸ ಮಾಡಿ ನ್ಯಾಯ ಕಲ್ಪಿಸಿಕೊಡಲಾಗುವುದು. ಈಗ ಚುನಾವಣಾ ವರ್ಷವಾಗಿರುವುದರಿಂದ ಜನರ ನಿರೀಕ್ಷೆಗಳು ಹೆಚ್ಚಿವೆ. ಎಷ್ಟು ಸಾಧ್ಯವೋ ಅಷ್ಟು ಕಾಯಾ ವಾಚಾ ಮನಸಾ ಕಾರ್ಯನಿರ್ವಹಿಸುವೆ ಎಂದರು.

‘ಪರೀಕ್ಷಾರ್ಥ ಸ್ಫೋಟ’ ಷಾ ಗಮನಕ್ಕೆ:

ಕೆಆರ್‌ಎಸ್ ಅಣೆಕಟ್ಟೆಗೆ ಅಪಾಯ ಇದೆಯೇ ಎನ್ನುವುದನ್ನು ತಿಳಿದುಕೊಳ್ಳುವ ಸಲುವಾಗಿ ನಡೆಸಲು ಉದ್ದೇಶಿಸಿರುವ ಪರೀಕ್ಷಾರ್ಥ ಸ್ಫೋಟದ ಮಾಹಿತಿ ಕೇಂದ್ರ ಗೃಹ ಸಚಿವ ಅಮಿತ್ ಷಾ ಅವರ ಗಮನಕ್ಕೆ ಬಂದಿದೆ. ಕೆಲ ವರದಿಯನ್ನೂ ನೀಡಲಾಗಿದೆ. ಇನ್ನಷ್ಟು ಮಾಹಿತಿ ನೀಡುವುದು ಬಾಕಿ ಇದೆ ಎಂದು ನಿಜಗುಣರಾಜು ಹೇಳಿದರು.
ಈ ಕುರಿತು ಗಮನಿಸಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಜನಾಭಿಪ್ರಾಯಕ್ಕೆ ಮನ್ನಣೆ ನೀಡಲಿದ್ದು, ಈ ವಿಷಯದಲ್ಲಿ ರಾಜಿ ಪ್ರಶ್ನೆಯೇ ಇಲ್ಲ. ಹೀಗಾಗಿ, ಸೂಕ್ತ ನಿರ್ಧಾರವನ್ನು ಸಿಎಂ ತೆಗೆದುಕೊಳ್ಳಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.


ನೀರು ಬಿಡುವ ಕುರಿತು ಶೀಘ್ರ ನಿರ್ಧಾರ:
ವರುಣ ನಾಲೆಗೆ ನೀರು ಬಿಡುವ ಕುರಿತು ಶೀಘ್ರದಲ್ಲೇ ತೀರ್ಮಾನ ತೆಗೆದುಕೊಳ್ಳಲಾಗುವುದು. ಈ ಸಂಬಂಧ ಬಳಕೆದಾರರ ಸಭೆ ಕರೆದು, ಅಧಿಕಾರಿಗಳೊಂದಿಗೆ ಚರ್ಚಿಸಿ ದಿನಾಂಕ ಪ್ರಕಟಿಸಲಾಗುವುದು. ಈ ಸಲ ನೀರು ಬಿಡಲು ಯಾವುದೇ ಸಮಸ್ಯೆ ಇಲ್ಲ ಎಂದು ನಿಜಗುಣರಾಜು ತಿಳಿಸಿದರು.

ಮುಂಗಾರು ಮಳೆಗಾಲದಲ್ಲೇ ಕಾಡಾ ವ್ಯಾಪ್ತಿಯ 19 ಜಲಾಶಯಗಳೆಲ್ಲ ತುಂಬಿವೆ. ಈಗಲೂ ಒಳಹರಿವಿನ ಪ್ರಮಾಣ ಹೆಚ್ಚಿದೆ. ಹಿಂಗಾರು ಮಳೆಯೂ ಉತ್ತಮವಾಗಿ ಆಗಲಿದೆ ಎಂಬ ಮುನ್ಸೂಚನೆ ಇದೆ. ಹೀಗಾಗಿ, ಈಗಾಗಲೇ ಯಥೇಚ್ಚ ನೀರು ಲಭ್ಯವಿದೆ. ಪ್ರಸ್ತಕ ಸಾಲಿನಲ್ಲಿ ಒಂದು ಹಂಗಾಮು ಬೆಳೆಗಳಿಗೆ ಅಷ್ಟೇ ಅಲ್ಲದೆ, ಎರಡು ಹಂಗಾಮು ಬೆಳೆಗಳಿಗೂ ನೀರು ಕೊಡಬಹುದಾಗಿದೆ. ಈ ಕುರಿತು ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net