

ಮೈಸೂರು: ಅರಣ್ಯದಂಚಿನ ಪ್ರದೇಶಗಳಲ್ಲಿ ಉಳುಮೆ ಮಾಡುತ್ತಿರುವ ಭೂಮಿಗಳನ್ನು ಮೀಸಲು ಅರಣ್ಯ ಎಂದು ಅಧಿಸೂಚನೆ ಹೊರಡಿಸಿರುವ ಕ್ರಮವನ್ನು ವಿರೋಧಿಸಿ ಮತ್ತು ಅರ್ಜಿ ಸಲ್ಲಿಸಿದವರಿಗೆ ಸಾಗುವಳಿ ಪತ್ರ ನೀಡಲು ಆಗ್ರಹಿಸಿ ಕರ್ನಾಟಕ ಪ್ರಾಂತ ರೈತ ಸಂಘದ ವತಿಯಿಂದ ಅಶೋಕಪುರಂನಲ್ಲಿರುವ ಅರಣ್ಯ ಭವನದ ಬಳಿ ಪ್ರತಿಭಟನೆ ನಡೆಯಿತು.
ಪಿರಿಯಾಪಟ್ಟಣ ತಾಲೂಕಿನ ಹಾರನಹಳ್ಳಿ ಹೋಬಳಿಯ ಗರಿಗುಡ್ಡ ಕಾವಲ್ ಗ್ರಾಮದ ಸರ್ವೇ ನಂ.94ರಲ್ಲಿ 627 ಎಕರೆ ಹಾಗೂ ಚನ್ನಕಲ್ ಕಾವಲ್ ಗ್ರಾಮದ ಸರ್ವೇ ನಂ.30ರಲ್ಲಿ 4679.08 ಎಕರೆ ವಿಸ್ತಾರದ ಜಮೀನುಗಳನ್ನು ಮೀಸಲು ಅರಣ್ಯ ಎಂದು ಅಧಿಸೂಚನೆ ಹೊರಡಿಸಲಾಗಿದೆ.
ತಲೆಮಾರುಗಳಿಂದ ಬಡರೈತರು ಈ ಜಮೀನುಗಳಲ್ಲಿ ಉಳುಮೆ ಮಾಡುತ್ತಾ ಜೀವನ ನಡೆಸುತ್ತಿದ್ದಾರೆ. ಇವೆಲ್ಲವೂ 2-3 ಎಕರೆ ವಿಸ್ತೀರ್ಣದ ಭೂಮಿಗಳಾಗಿದ್ದು, ಈ ಭೂಮಿ ಬಿಟ್ಟರೆ ಬೇರೆ ಯಾವ ಆಧಾರವೂ ಇಲ್ಲ. ಈ ರೈತರಿಂದ ಅರಣ್ಯ ಪ್ರದೇಶಗಳಿಗೆ ಯಾವುದೇ ತೊಂದರೆಯೂ ಆಗುತ್ತಿಲ್ಲ. ಆದರೆ, ಸರ್ಕಾರ ರೈತರ ತುಂಡು ಭೂಮಿ ಕಿತ್ತುಕೊಂಡು ಅವರನ್ನು ಒಕ್ಕಲೆಬ್ಬಿಸಲು ಹೊರಟಿರುವುದು ಬಡರೈತರ ವಿರೋಧಿ ನೀತಿಯಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
50-60 ವರ್ಷಗಳಿಂದ ಆರಣ್ಯದಂಚಿನಲ್ಲಿ ಸಾಗುವಳಿ ಮಾಡುತ್ತಿರುವ ರೈತರ ಭೂಮಿಗೆ ಸಾಗುವಳಿ ಪತ್ರ ನೀಡಿ ಎಂದು ನಮೂನೆ ಸಂಖ್ಯೆ 50, 53 ಮತ್ತು 57ರಲ್ಲಿ ಅರ್ಜಿ ಸಲ್ಲಿಸಿದರೂ ಸಾಗುವಳಿ ಪತ್ರ ನೀಡಿಲ್ಲ. ಮತ್ತೊಂದು ಕಡೆ ಎಲ್ಲ ದಾಖಲೆಗಳನ್ನು ಹೊಂದಿರುವ, ಅಲ್ಲಿ ಮನೆ ಕಟ್ಟಿಕೊಂಡು ಜೀವನ ಸಾಗಿಸುತ್ತಿರುವ ರೈತರ ಭೂಮಿಯನ್ನೂ ಕಿತ್ತುಕೊಳ್ಳಲು ಮುಂದಾಗಿದ್ದು, ಇದು ರೈತ ಕುಲವನ್ನು ನಾಶ ಮಾಡುವ ಸರ್ಕಾರದ ಹುನ್ನಾರವಾಗಿದೆ ಎಂದು ಆರೋಪಿಸಿದರು.
ಅರಣ್ಯದಂಚಿನಲ್ಲಿ ಪ್ರಭಾವಿಗಳಿಗೆ ರೆಸಾರ್ಟ್, ಹೋಂಸ್ಟೇಗಳಿಗೆ ಅನುಮತಿ ನೀಡುವ ಸರ್ಕಾರ, ಬಡ ರೈತರಿಂದ ಬಲವಂತದಿಂದ ಭೂಮಿ ಕಿತ್ತುಕೊಳ್ಳುವುದನ್ನು ಒಪ್ಪಲು ಸಾಧ್ಯವಿಲ್ಲ. ಹೀಗಾಗಿ ಕೂಡಲೇ ಮೀಸಲು ಅರಣ್ಯವೆಂದು ಘೋಷಿಸಿರುವ ಅಧಿಸೂಚನೆ ಹಿಂಪಡೆಯಬೇಕು.
ಆ ಪ್ರದೇಶದ ಜನರನ್ನು ಯಾವುದೇ ಕಾರಣಕ್ಕೂ ಒಕ್ಕಲೆಬ್ಬಿಸಬಾರದು. 50-60 ವರ್ಷಗಳಿಂದ ಅರಣ್ಯದಂಚಿನ ಪ್ರದೇಶಗಳಲ್ಲಿ ಸಾಗುವಳಿ ಮಾಡುತ್ತಿರುವ ರೈತರಿಗೆ ಸಾಗುವಳಿ ಪತ್ರ ವಿತರಿಸಬೇಕು ಎಂದು ಆಗ್ರಹಿಸಿದರು.
ಜಿಲ್ಲಾಧ್ಯಕ್ಷ ಚಿಕ್ಕಣ್ಣೇಗೌಡ, ಪ್ರಧಾನ ಕಾರ್ಯದರ್ಶಿ ಜಗದೀಶ್ ಸೂರ್ಯ, ಖಜಾಂಚಿ ಚಂದ್ರಶೇಖರ್, ಸಂಚಾಲಕ ಕಣಗಾಲು ಲೋಕೇಶ್, ಪುಟ್ಟರಾಜು ಸೇರಿದಂತೆ ಇನ್ನಿತರರಿದ್ದರು