ಕಾಡಂಚಿನ ಗ್ರಾಮದಲ್ಲಿ ಆನೆ, ಚಿರತೆ ಕಾಟ : ಬೆಳೆ ಹಾನಿಯಿಂದ ಬೇಸತ್ತಿರುವ ರೈತರು, ಮೂಲಸೌಕರ್ಯವೂ ಅಭಿವೃದ್ಧಿಯಾಗಬೇಕಿದೆ

Kailancha-Ph-00001-Kadanakuppe- Grama Sanchara Story-Beedi Raste-17-4-2022
Published on

ಇದು ಕಾಡಂಚಿನ ಗ್ರಾಮ ಕಾಡನಕುಪ್ಪೆ. ಅಕ್ಕಪಕ್ಕದಲ್ಲಿ ಬೆಟ್ಟ&ಗುಡ್ಡಗಳಿದ್ದು ಆನೆ, ಚಿರತೆಗಳ ಉಪಟಳ ಹೆಚ್ಚಾಗಿದೆ. ಗ್ರಾಮಸ್ಥರು ಬೆಳೆ ಹಾನಿಗೊಳಗಾದರೆ, ಸಾಕು ಪ್ರಾಣಿಗಳು ಕಾಡು ಪ್ರಾಣಿಗಳಿಗೆ ಬಲಿಯಾಗುತ್ತಿವೆ. ಗ್ರಾಮದ ಹಲವು ರಸ್ತೆಗಳು ಅಭಿವೃದ್ಧಿ ಹೊಂದಿದ್ದರೂ ಮೂಲಸೌಕರ್ಯ ಹೊಂದಬೇಕಿದೆ. ಗ್ರಾಮದ ಜನಜೀವನ, ಕಾಡುತ್ತಿರುವ ಸಮಸ್ಯೆಗಳ ಬಗ್ಗೆ ನಮ್ಮ ಬಿಡಿ ವರದಿಗಾರ ವಿಭೂತಿಕೆರೆ ಶಿವಲಿಂಗಯ್ಯ "ಗ್ರಾಮ ಸಂಚಾರ'ದಲ್ಲಿ ಆಡಳಿತದ ಕಣ್ಣು ತೆರೆಸುವ ವರದಿ ಸಿದ್ಧಪಡಿಸಿದ್ದಾರೆ.

ವಿಭೂತಿಕೆರೆ ಶಿವಲಿಂಗಯ್ಯಕೈಲಾಂಚ ರಾಮನಗರ ತಾಲೂಕಿನ ಗಡಿಯಲ್ಲಿ ತೆಂಗಿನಕಲ್ಲು ಅರಣ್ಯ ಪ್ರದೇಶಕ್ಕೆ ಹೊಂದಿಕೊಂಡಂತಿರುವ, ಮೂಲಸೌಕರ್ಯ ವಂಚಿತ ಹಾಗೂ ಆನೆಗಳ ಉಪಟಳ ಎದುರಿಸುತ್ತಿರುವ ಗ್ರಾಮವೇ ಕಾಡನಕುಪ್ಪೆ. ಬನ್ನಿಕುಪ್ಪೆ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಸೇರುವ ಗ್ರಾಮದಲ್ಲಿ 200ಕ್ಕೂ ಹೆಚ್ಚು ಕುಟುಂಬಗಳಿದ್ದು, 750ಕ್ಕೂ ಹೆಚ್ಚಿನ ಜನಸಂಖ್ಯೆ ಹೊಂದಿದೆ. ಕೃಷಿ ಇಲ್ಲಿನ ಮುಖ್ಯ ಕಸುಬು. ಪ್ರಮುಖವಾಗಿ ರೇಷ್ಮೆ, ಮಾವು ಬೆಳೆ ಅವಲಂಬಿಸಿರುವ ಗ್ರಾಮಸ್ಥರು ಉಪ ಕಸುಬಾಗಿ ಹೈನುಗಾರಿಕೆ ಮಾಡುತ್ತಾರೆ. ಗ್ರಾಮದಲ್ಲಿ ಹಾಲಿನ ಡೇರಿ ಇದೆ. ಉದ್ಯೋಗಕ್ಕೆ ಬೇರೆ ಊರುಗಳತ್ತ ಮುಖ ಮಾಡದ ಇಲ್ಲಿನ ಯುವಕರು ರೇಷ್ಮೆ, ಹೈನುಗಾರಿಕೆ, ವ್ಯವಸಾಯ ಹಾಗೂ ಮಾವು ವ್ಯಾಪಾರದಲ್ಲಿ ತೊಡಗಿದ್ದಾರೆ. ಶಾಸಕರ ಅನುದಾನ, ಗ್ರಾಪಂ, ಜಿಪಂ ಅನುದಾನದಲ್ಲಿ ಗ್ರಾಮದ ಒಂದಷ್ಟು ರಸ್ತೆಗಳು ಸಿಮೆಂಟ್​ ಕಂಡಿವೆ. ಇನ್ನೂ ಮೂರ್ನಾಲ್ಕು ರಸ್ತೆಗಳು ಅಭಿವೃದ್ಧಿಯಾಗಿಲ್ಲ. ಕೆಲವು ಕಡೆ ಸಿಮೆಂಟ್​ ರಸ್ತೆ, ವೈಜ್ಞಾನಿಕ ಚರಂಡಿ ನಿಮಾರ್ಣ ಆಗಬೇಕಿದೆ. ಮಣ್ಣಿನ ರಸ್ತೆಗಳು ಮಳೆಗಾಲದಲ್ಲಿ ಕೆಸರುಮಯವಾಗುತ್ತವೆ. ಗ್ರಾಮದ ಪ್ರತಿ ಬೀದಿಗೂ ಉತ್ತಮ ಚರಂಡಿ, ಸಿಮೆಂಟ್​ ರಸ್ತೆ ನಿರ್ಮಾಣ ಆಗಬೇಕು, ಅಂಗನವಾಡಿ ಕೇಂದ್ರಕ್ಕೆ ಆದ್ಯತೆ ನೀಡಬೇಕು ಎಂಬುದು ಗ್ರಾಮಸ್ಥರ ಒತ್ತಾಯವಾಗಿದೆ.

ಗ್ರಾಪಂ ಕುಡಿಯುವ ನೀರಿಗೆ ಸಮಸ್ಯೆ ಬರದಂತೆ ಎಚ್ಚರವಹಿಸಲಾಗಿದೆ. ನರೇಗಾ ಯೋಜನೆಯಲ್ಲಿ ಗ್ರಾಮದ ಮೂಲಸೌಕರ್ಯ ಅಭಿವೃದ್ಧಿಗೆ ಒತ್ತು ನೀಡಿ ಚರಂಡಿ ನಿಮಾರ್ಣಕ್ಕೆ ಕ್ರಮ ಕೈಗೊಳ್ಳಲಾಗಿದೆ. ಒಂದೆರಡು ಕಡೆ ಚರಂಡಿ ನಿಮಾರ್ಣ ಆಗುತ್ತಿದೆ. ಇನ್ನೂ ಬಹುತೇಕ ಕಡೆ ಚರಂಡಿ, ಸಿಮೆಂಟ್​ ರಸ್ತೆ ನಿಮಾರ್ಣಕ್ಕೆ ಗಮನಹರಿಸಬೇಕಿದೆ. ಶುದ್ಧ ನೀರಿನ ಘಟಕ ಇದ್ದರೂ ಆಗಾಗ ರಿಪೇರಿಗೆ ಬರುತ್ತಿದೆ. ಪ್ರಮುಖವಾಗಿ ಗ್ರಾಮದಲ್ಲಿ ರಸ್ತೆ, ಚರಂಡಿ ಅಭಿವೃದ್ಧಿ ಆಗಬೇಕು ಎಂಬುದು ಗ್ರಾಮಸ್ಥರ ಒತ್ತಾಸೆಯಾಗಿದೆ.

ಕಾಡುಪ್ರಾಣಿಗಳಿಗೆ ಕಡಿವಾಣ: ಕಾಡನಕುಪ್ಪೆ ಗ್ರಾಮದಲ್ಲಿ ಆನೆಗಳ ಕಾಟ ಹೆಚ್ಚಾಗಿದೆ. ರೈತರು ಬೆಳೆದ ಮಾವು, ಬಾಳೆ, ತೆಂಗಿನ ಮರಗಳು ಹಾಗೂ ಇತರ ಬೆಳೆಗಳು, ಬೋರ್​ವೆಲ್​ ಪರಿಕರಗಳು, ಪೈಪ್​ಗಳು ಆನೆಗಳ ದಾಳಿಗೀಡಾಗಿ ರೈತರು ನಷ್ಟಕ್ಕೀಡಾಗುತ್ತಿದ್ದಾರೆ. ಆನೆಗಳ ದಾಳಿಗೆ ಹೆದರಿ ರೈತರು ಜಮೀನಿನ ಬಳಿ ಹೋಗಲು ಭಯಪಡುವಂತಾಗಿದೆ. ಕೃಷಿಯಿಂದ ಹಿಂದೆ ಸರಿಯುವ ಸನ್ನಿವೇಶ ಸೃಷ್ಟಿಯಾಗಿದೆ. ಆನೆಗಳ ಭೀತಿಯಿಂದ ರಾತ್ರಿ ಹೊತ್ತಿನಲ್ಲಿ ಜಮೀನಿಗೆ ನೀರು ಹಾಯಿಸಲು, ಮನೆಯಿಂದ ಹೊರಬರಲು, ಗ್ರಾಮದಲ್ಲಿ ತಿರುಗಾಡಲು ಆಗುತ್ತಿಲ್ಲ. ಜತೆಗೆ ಗ್ರಾಮದ ಅಕ್ಕಪಕ್ಕದ ಬೆಟ್ಟ&ಗುಡ್ಡಗಳಲ್ಲಿ ನೆಲೆ ಕಂಡುಕೊಂಡಿರುವ ಚಿರತೆಗಳು ಆಗಿಂದಾಗ್ಗೆ ಗ್ರಾಮದಲ್ಲಿ ದಾಳಿ ನಡೆಸಿ ಮೇಕೆ, ಕುರಿ, ಕೋಳಿ ಸೇರಿ ಸಾಕುಪ್ರಾಣಿಗಳನ್ನು ತಿನ್ನುತ್ತಿವೆ.

ಬಸ್​ ಸೌಕರ್ಯ: ರಾಮನಗರ-, ಚನ್ನಪಟ್ಟಣ ಎರಡೂ ನಗರಗಳಿಂದ ಉತ್ತಮ ಸಾರಿಗೆ ಬಸ್​ಗಳ ಸಂಪರ್ಕವಿದೆ. ಎರಡೂ ನಗರಕ್ಕೂ ಸಮಾನ ಅಂತರವಿರುವ ಕಾರಣ ವ್ಯಾಪಾರ ವಹಿವಾಟಿಗೆ ರೈತರು ಮಾರುಕಟ್ಟೆಗಳಿಗೆ, ವಿದ್ಯಾರ್ಥಿಗಳು ಶಾಲಾ ಕಾಲೇಜಿಗೆ ಎರಡೂ ನಗರಗಳನ್ನು ಆಶ್ರಯಿಸಿದ್ದಾರೆ.

ಅಂಗನವಾಡಿ ಕಟ್ಟಡ ಇಲ್ಲ: ಗ್ರಾಮದಲ್ಲಿ 1ರಿಂದ 5ನೇ ತರಗತಿವರೆಗೆ ಸರ್ಕಾರಿ ಪ್ರಾಥಮಿಕ ಶಾಲೆ ಇದೆ. 255 ಮಕ್ಕಳಿದ್ದು ಒಬ್ಬ ಶಿಕ್ಷಕರಿದ್ದಾರೆ. ಪ್ರೌಢಶಾಲೆಗೆ 5 ಕಿ.ಮೀ. ದೂರದ ಲಕ್ಕೋಜನಹಳ್ಳಿ, 7 ಕಿ.ಮೀ ದೂರದ ಬನ್ನಿಕುಪ್ಪೆಗೆ ಹೋಗಿ ಬರಬೇಕು. ಗ್ರಾಮದಲ್ಲಿ ಅಂಗನವಾಡಿ ಇದ್ದು, 18 ಮಕ್ಕಳು ಇದ್ದಾರೆ. ಆದರೆ, ಸ್ವಂತ ಕಟ್ಟಡವಿಲ್ಲ. ಈಗಲೂ ಕಿರಿದಾದ ಸ್ಥಳದಲ್ಲಿ ಬಾಡಿಗೆ ಕಟ್ಟಡದಲ್ಲಿ ಅಂಗನವಾಡಿ ನಡೆಯುತ್ತಿದೆ. ಇಕ್ಕಟ್ಟಾದ ಜಾಗದಲ್ಲೇ ಮಕ್ಕಳಿಗೆ ಅಡುಗೆ ಮಾಡಿ, ಬಡಿಸಬೇಕು. ಚಿಕ್ಕ ಮಕ್ಕಳು ಇಕ್ಕಟ್ಟಾದ ಸ್ಥಳದಲ್ಲಿಯೇ ಕಲಿಯಬೇಕು ಹಾಗೂ ದಿನಪೂರ್ತಿ ಕಳೆಯಬೇಕು. ಸುಸಜ್ಜಿತ ಅಂಗನವಾಡಿ ನಿರ್ಮಾಣ ಮಾಡಿಕೊಡುವಂತೆ ಮನವಿ ಮಾಡಿದ್ದರೂ ಅಧಿಕಾರಿಗಳು ಸ್ಪಂದಿಸಿಲ್ಲ ಎಂಬುದು ಗ್ರಾಮಸ್ಥರ ದೂರಾಗಿದೆ.

ಏನಾಗಬೇಕು?

1. ಅಂಗನವಾಡಿ ಕಟ್ಟಡ, ವೈಜ್ಞಾನಿಕ ಚರಂಡಿ.

2. ಸಿಮೆಂಟ್​ ರಸ್ತೆ , ಅರಣ್ಯಕ್ಕೆ ಹೋಗುವ ರಸ್ತೆ, ಕೆರೆ ರಸ್ತೆ ಅಭಿವೃದ್ಧಿ.

3. ಶುದ್ಧ ಕುಡಿಯುವ ನೀರಿನ ಟಕದ ನಿರ್ವಹಣೆ

4. ಗ್ರಾಮದ ಪ್ರಮುಖ ವೃತ್ತಗಳಲ್ಲಿ ಸೋಲಾರ್​ ಲೈಟ್

5. ಆನೆ, ಚಿರತೆ ಉಪಟಳ ತಪ್ಪಿಸುವುದು

ಗ್ರಾಮದಲ್ಲಿ ಹಲವಾರು ವರ್ಷಗಳಿಂದ ಅಂಗನವಾಡಿಗೆ ಸ್ವಂತ ಕಟ್ಟಡವಿಲ್ಲದೆ ಬಾಡಿಗೆ ಕಟ್ಟಡದಲ್ಲಿ ನಡೆಯುತ್ತಿದೆ. ಕಿರಿದಾದ ಸ್ಥಳದಲ್ಲಿ ಮಕ್ಕಳು ಕಲಿಯಬೇಕಿದೆ. ಅಂಗನವಾಡಿ ಕಟ್ಟಡ ನಿರ್ಮಾಣಕ್ಕೆ ಮಹಿಳೆ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಕ್ರಮ ಕೈಗೊಳ್ಳಬೇಕು. ಶಿವರಾಜು (ಪುಟ್ಟಣ್ಣ), ಕಾಡನಕುಪ್ಪೆ ಗ್ರಾಮದ ಬೀದಿಗಳೂ ಅಭಿವೃದ್ಧಿ ಕಂಡಿಲ್ಲ. ಜಿಲ್ಲೆಯ ಹಲವಾರು ಗ್ರಾಮಗಳು ಸಿಮೆಂಟ್​ ರಸ್ತೆ, ಉತ್ತಮ ಚರಂಡಿ ವ್ಯವಸ್ಥೆ ಕಂಡಿವೆ. ಆದರೆ, ನಮ್ಮ ಗ್ರಾಮ ಈಗಲೂ ಈ ವಿಷಯದಲ್ಲಿ ಹಿಂದೆ ಬಿದ್ದಿದೆ. ಸಂಬಂಧಪಟ್ಟ ಇಲಾಖೆಗಳು ಉದಾಸೀನ ತೋರದೆ ಅಭಿವೃದ್ಧಿಗೆ ಕ್ರಮ ಕೈಗೊಳ್ಳಬೇಕು. ಗ್ರಾಮದಲ್ಲಿ ರೈತರು ಎದುರಿಸುತ್ತಿರುವ ಆನೆಗಳ ಉಪಟಳಕ್ಕೆ ಕಡಿವಾಣ ಹಾಕಬೇಕು. ರಾಘವೇಂದ್ರ, ಕಾಡನಕುಪ್ಪೆ ನರೇಗಾ ಸೇರಿ ಸರ್ಕಾರದ ಅನುದಾನದಲ್ಲಿ ಗ್ರಾಮದ ಅಭಿವೃದ್ಧಿ ಕೈಗೊಳ್ಳಲಾಗಿದೆ. ಕೆಲವು ಬೀದಿಗಳಲ್ಲಿ ಸರ್ವೇ ನಂಬರಿನಲ್ಲಿ ಮನೆ ಕಟ್ಟಿರುವ ಕಾರಣ ಸರ್ಕಾರಿ ಬೀದಿ, ರಸ್ತೆ ಅಭಿವೃದ್ಧಿ, ಚರಂಡಿ ನಿಮಾರ್ಣಕ್ಕೆ ಗೊಂದಲ ಉಂಟಾಗಿ ಅಭಿವೃದ್ಧಿಗೆ ತೊಡಕಾಗಿದೆ. ಉಳಿದಂತೆ ಮೂಲಸೌಕರ್ಯ ಕಲ್ಪಿಸಲು ಆದ್ಯತೆ ನೀಡಲಾಗಿದೆ. ಜೈಶಂಕರ್​, ಪಿಡಿಒ, ಬನ್ನಿಕುಪ್ಪೆ ಗ್ರಾಪಂ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net