ಕಾಡಂಚಿನ ಗ್ರಾಮಗಳಲ್ಲಿ ಕಾಡಾನೆ ಹಿಂಡು

15KLG- elephent 1
Published on

ಕಲಘಟಗಿ: ತಾಲೂಕಿನ ತಂಬೂರ, ದೇವಿಕೊಪ್ಪ ಮತ್ತು ಸುತ್ತಮುತ್ತಲಿನ ಪ್ರದೇಶದಲ್ಲಿ ಕಾಡಾನೆ ಹಿಂಡು ಕಾಣಿಸಿಕೊಂಡಿದ್ದು, ಗ್ರಾಮಸ್ಥರು ಆತಂಕಗೊಂಡಿದ್ದಾರೆ. ಈ ಹಿಂದೆಯೂ ಆನೆಗಳು ಕಾಣಿಸಿಕೊಂಡಿದ್ದವು. ಐದು ಆನೆಗಳ ಗುಂಪು ಭಾನುವಾರ ಮತ್ತೆ ಕಂಡುಬಂದಿದೆ. ತಂಬೂರ, ದೇವಿಕೊಪ್ಪ ಭಾಗದಲ್ಲಿ ಅರಣ್ಯಕ್ಕೆ ಹೊಂದಿಕೊಂಡಿರುವ ಕೆರೆಗಳಲ್ಲಿ ಆನೆಗಳು ನೀರು ಕುಡಿದು ಆಟವಾಡಿವೆ. ಹೊಲಕ್ಕೆ ನುಗ್ಗಿ ಕಟಾವಿಗೆ ಬಂದಿದ್ದ ಗೋವಿನಜೋಳ, ಕಬ್ಬು, ಭತ್ತ ಮತ್ತಿತರ ಬೆಳೆಗಳನ್ನು ತಿಂದು, ತುಳಿದು ಹಾನಿ ಮಾಡಿವೆ.

ಗ್ರಾಮಸ್ಥರ ಮಾಹಿತಿ ಮೇರೆಗೆ ಅರಣ್ಯ ಇಲಾಖೆಯವರು ತೆರಳಿ, ಆನೆಗಳನ್ನು ಕಾಡಿಗೆ ಅಟ್ಟುವ ಕಾರ್ಯಾಚರಣೆ ನಡೆಸಿದರೂ ಫಲ ನೀಡಿಲ್ಲ. ಹೆಚ್ಚು ಜನರು ಕಾಣಿಸಿಕೊಂಡಾಗ ಆನೆಗಳು ಅರಣ್ಯಕ್ಕೆ ಹಿಂದಿರುಗಿದರೂ ಬಹಳ ದೂರ ಹೋಗದೆ ಅಲ್ಲೇ ಬಚ್ಚಿಟ್ಟುಕೊಳ್ಳುತ್ತಿವೆ ಅಥವಾ ಒಂದು ಗುಡ್ಡ ದಾಟಿ ಮತ್ತೊಂದು ಹಳ್ಳಿಯ ಬಳಿ ಎಲ್ಲೋ ತಾತ್ಕಾಲಿಕವಾಗಿ ವಸತಿ ಮಾಡುತ್ತವೆ. ಎಷ್ಟು ಹೊತ್ತಿಗಾದರೂ ಹೊಲಕ್ಕೆ ನುಗ್ಗುತ್ತವೆ ಎಂದು ಗ್ರಾಮಸ್ಥರು ಆತಂಕ ವ್ಯಕ್ತಪಡಿಸಿದ್ದಾರೆ. ಅರಣ್ಯ ಇಲಾಖೆಯವರು ಸ್ಥಳೀಯರ ನೆರವಿನಿಂದ ಆನೆಗಳ ಚಟುವಟಿಕೆ ಮೇಲೆ ಕಣ್ಣಿಟ್ಟಿದ್ದಾರೆ.

ಪ್ರತಿವರ್ಷದ ಅತಿಥಿಗಳು: ಬೇಸಿಗೆಯಲ್ಲಿ ಮೈಸೂರು ಭಾಗದಿಂದ ಆನೆಗಳು ಉತ್ತರ ಕನ್ನಡ ಜಿಲ್ಲೆಯ ದಾಂಡೇಲಿ, ಜೊಯಿಡಾ ತಾಲೂಕಿನ ಕಾಡಿನತ್ತ ಬರುತ್ತವೆ. ಅಲ್ಲಿಂದ ಬರುವ ಆನೆಗಳು ಯಲ್ಲಾಪುರ ತಾಲೂಕಿನ ಅರಣ್ಯದ ಮೂಲಕ ಪಕ್ಕದ ಕಲಘಟಗಿ ತಾಲೂಕಿಗೆ ನುಗ್ಗುವುದು ಪ್ರತಿವರ್ಷವೂ ಸಾಮಾನ್ಯವಾಗಿದೆ. ಕೆಲವೊಮ್ಮೆ ಆನೆ ಹಿಂಡು ಹುಬ್ಬಳ್ಳಿ-ಅಂಕೋಲಾ ಹೆದ್ದಾರಿ ದಾಟಿ ಮುಂಡಗೋಡ ತಾಲೂಕಿನತ್ತಲೂ ತೆರಳುತ್ತವೆ.

ಕಾಡಂಚಿನ ಗ್ರಾಮಗಳಲ್ಲಿ ಹೆಚ್ಚಿನ ಕಟ್ಟೆಚ್ಚರ ವಹಿಸಲಾಗಿದ್ದು, ಅಲ್ಲಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ನೇಮಿಸಲಾಗಿದೆ. ಅರಣ್ಯದತ್ತ ಕಾಡಾನೆಗಳನ್ನು ಓಡಿಸಲು ಕ್ರಮ ಕೈಗೊಂಡಿದ್ದೇವೆ. | ಶ್ರೀಕಾಂತ ಪಾಟೀಲ ವಲಯ ಅರಣ್ಯಾಧಿಕಾರಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net