

ಯಳಂದೂರು: ತಾಲೂಕು ಆಡಳಿತದ ವತಿಯಿಂದ ಪಟ್ಟಣದ ತಹಸೀಲ್ದಾರ್ ಕಚೇರಿಯಲ್ಲಿರುವ ಚುನಾವಣಾ ಶಾಖೆಯಲ್ಲಿ ಬುಧವಾರ ನಡೆದ ದೇವರ ದಾಸಿಮಯ್ಯ ಜಯಂತಿಯನ್ನು ಕೇವಲ ಕಾಟಾಚಾರಕ್ಕೆ ಮಾಡಲಾಗಿದೆ ಎಂದು ಪಟ್ಟಣ ಪಂಚಾಯಿತಿ ಅಧ್ಯಕ್ಷೆ ಲಕ್ಷ್ಮೀ ಮಲ್ಲು, ನಾಮನಿರ್ದೇಶನ ಸದಸ್ಯ ಲಿಂಗರಾಜ ಮೂರ್ತಿ, ತಾಲೂಕು ಕಸಾಪ ಅಧ್ಯಕ್ಷ ಯರಿಯೂರು ನಾಗೇಂದ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬುಧವಾರ ಜಯಂತಿ ಆಚರಣೆಗೆ ಪಪಂ ಅಧ್ಯಕ್ಷರಿಗಾಗಲಿ, ಸದಸ್ಯರಿಗಾಗಲಿ ಆಹ್ವಾನ ನೀಡಿಲ್ಲ. ಯಾವುದೇ ಸಂಘ, ಸಂಸ್ಥೆಗಳಿಗೂ ಮಾಹಿತಿ ನೀಡಿಲ್ಲ. ಕೇವಲ ಕಂದಾಯ ಇಲಾಖೆಯ ಕೆಲವು ಸಿಬ್ಬಂದಿಗೆ ಮಾತ್ರ ಕಾರ್ಯಕ್ರಮ ಸೀಮಿತಗೊಂಡಿದೆ. ಯಾವುದೇ ಜಯಂತಿ ಮಾಡಬೇಕಾದರೂ ಪೂರ್ವಭಾವಿ ಸಭೆ ಕರೆಯಬೇಕು. ಸಭೆಯನ್ನೂ ಕರೆದಿಲ್ಲ. ಇತರೆ ಇಲಾಖೆ ಅಧಿಕಾರಿಗಳು, ಸಂಘ ಸಂಸ್ಥೆಗಳ ಪದಾಧಿಕಾರಿಗಳು, ಸ್ಥಳೀಯ ಚುನಾಯಿತ ಜನಪ್ರತಿನಿಧಿಗಳು ಸೇರಿದಂತೆ ಯಾರಿಗೂ ಆಹ್ವಾನ ನೀಡಿಲ್ಲ. ಇಲ್ಲಿ ಕೇವಲ ಕಾಟಾಚಾರಕ್ಕೆ ಜಯಂತಿ ಆಚರಿಸಿ ಇಂತಹ ಮಹಾನ್ ವ್ಯಕ್ತಿಗಳಿಗೆ ಅಗೌರವ ತೋರಲಾಗುತ್ತಿದೆ ಎಂದು ಆರೋಪಿಸಿದರು.
ಕಚೇರಿಯಲ್ಲಿ ಸಭಾಂಗಣವಿದ್ದರೂ ಬಳಸಿಕೊಂಡಿಲ್ಲ. ಗೌಪ್ಯವಾಗಿ ಜಯಂತಿ ಆಚರಿಸುವ ಜರೂರತ್ತು ಏನಿತ್ತು. ಕೇವಲ ಕಂದಾಯ ಇಲಾಖೆ ಅಧಿಕಾರಿಗಳು ಮಾತ್ರ ಭಾಗವಹಿಸುತ್ತಿದ್ದಾರೆ. ಕಾರ್ಯಕ್ರಮಕ್ಕೆ ಸರ್ಕಾರದ ವತಿಯಿಂದ 20 ಸಾವಿರ ರೂ.ಹಣ ಬರುತ್ತದೆ. ಆದರೆ, ಇಲ್ಲಿ 500 ರೂ.ಖರ್ಚಾಗಿಲ್ಲ. ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳನ್ನು ಹೊಣೆಗಾರರನ್ನಾಗಿ ಮಾಡಿ, ಉನ್ನತ ಅಧಿಕಾರಿಗಳು ಇವರ ವಿರುದ್ಧ ಶಿಸ್ತು ಕ್ರಮ ವಹಿಸಬೇಕು ಎಂದು ಒತ್ತಾಯಿಸಿದರು.
ಗುಂಬಳ್ಳಿ ಬಸವರಾಜು, ಬಸವರಾಜಪ್ಪ, ಪರಶಿವಪ್ಪ, ರಾಜಸ್ವ ನಿರೀಕ್ಷಕ ಯದುಗಿರಿ, ಕಂದಾಯ ಇಲಾಖೆ ಸಿಬ್ಬಂದಿ ಹಾಜರಿದ್ದರು.