ಕಾಗಿಣಾ ನದಿಗೆ ಹಾರಿದ ವಿದ್ಯಾರ್ಥಿನಿ

Bhagyashree
ಭಾಗ್ಯಶ್ರೀ
Published on

ಶಹಾಬಾದ್ (ಕಲಬುರಗಿ): ಚಿತ್ತಾಪುರ ರಾಷ್ಟ್ರೀಯ ಹೆದ್ದಾರಿಯಲ್ಲಿರುವ ಶಂಕರವಾಡಿ ಬಳಿಯಲ್ಲಿರುವ ಕಾಗಿಣೆ ನದಿಗೆ ವಿದ್ಯಾರ್ಥಿನಿಯೊಬ್ಬಳು ಹಾರಿರುವ ಘಟನೆ ಬುಧವಾರ ಸಂಜೆ ಜರುಗಿದೆ. ಯುವತಿಗಾಗಿ ಶೋಧಕಾರ್ಯ ಮುಂದುವರಿದಿದೆ.

ಭಾಗ್ಯಶ್ರೀ ಹೊಸಳ್ಳಿ (20) ನದಿಗೆ ಜಿಗಿದ ಯುವತಿ. ಚಿತ್ತಾಪುರ ತಾಲೂಕಿನ ಗುಂಡಗುರ್ತಿ ತಾಲೂಕು ಪಂಚಾಯಿತಿ ಮಾಜಿ ಸದಸ್ಯ ಬಸವರಾಜ ಹೊಸಳ್ಳಿ ಅವರ ಪುತ್ರಿ. ಕಲಬುರಗಿ ಸರ್ಕಾರಿ ಪದವಿ ಕಾಲೇಜಿನಲ್ಲಿ ಬಿಎಸ್ಸಿ ಅಂತಿಮ ವರ್ಷದಲ್ಲಿ ಓದುತ್ತಿದ್ದಳು.

ಬೆಳಗ್ಗೆ ಕಲಬುರಗಿಯಿಂದ ಸ್ಕೂಟಿ ಮೇಲೆ ಅಜ್ಜಿಯ ಊರು (ತಾಯಿಯ ತವರೂರು) ಶಂಕರವಾಡಿ ಗ್ರಾಮಕ್ಕೆ ಹೋಗಿದ್ದ ಯುವತಿ, ಪುನಃ ವಾಪಸ್ ಕಾಗಿಣೆ ಸೇತುವೆ ಬಳಿ ಬಂದಿದ್ದಾಳೆ. ಸ್ಕೂಟಿಯನ್ನು ಸೇತುವೆ ಮೇಲೆ ನಿಲ್ಲಿಸಿ, ನದಿಗೆ ಜಿಗಿದಿದ್ದಾಳೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಈ ನಿರ್ಧಾರಕ್ಕೆ ಕಾರಣ ಏನೆಂಬುದು ನಿಖರವಾಗಿ ಗೊತ್ತಾಗಿಲ್ಲ.

ಚಿತ್ತಾಪುರ ಸಿಪಿಐ ಪ್ರಕಾಶ ಯಾತನೂರ, ಪಿಎಸ್ಐ ಅಶೋಕ ಸಿಬ್ಬಂದಿಯೊಂದಿಗೆ ಸ್ಥಳಕ್ಕೆ ಆಗಮಿಸಿ, ಪರಿಶೀಲಿಸಿದ್ದಾರೆ. ಎಸ್​ಡಿಆರ್​ಎಫ್​ ತಂಡ ಬಂದಿದ್ದು, ಶೋಧ ಕಾರ್ಯ ನಡೆದಿದೆ. ರಾತ್ರಿಯಾದರೂ ಯಾವುದೇ ಮಾಹಿತಿ ದೊರೆತಿಲ್ಲ, ಕತ್ತಲಿದ್ದುದ್ದರಿಂದ ಕಾರ್ಯಾಚರಣೆ ಸ್ಥಗಿತಗೊಳಿಸಲಾಗಿದೆ. ಶಹಾಬಾದ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net