

ಬಾಗಲಕೋಟೆ: ಹುಟ್ಟಿನಿಂದ ಕಿವುಡು ಹಾಗೂ ಮೂಗನಾಗಿದ್ದ ೨ ವರ್ಷದ ಮಗುವಿಗೆ ಬಿವಿವಿ ಸಂಘದ ಹಾನಗಲ್ಲ ಕುಮಾರೇಶ್ವರ ಆಸ್ಪತ್ರೆಯ ಇ.ಎನ್.ಟಿ ವಿಭಾಗದಲ್ಲಿ ಕಾಕ್ಲಿಯರ್ ಇಂಪ್ಲ್ಯಾಂಟ್ ಶಸ್ತ್ರಚಿಕಿತ್ಸೆಯನ್ನು ಯಶಸ್ವಿಯಾಗಿ ಮಾಡಲಾಗಿದೆ ಎಂದು ಸಂಘದ ಕಾರ್ಯಾಧ್ಯಕ್ಷ, ಮಾಜಿ ಶಾಸಕ ವೀರಣ್ಣ ಚರಂತಿಮಠ ತಿಳಿಸಿದರು.
ನಗರದ ಬಿವಿವಿ ಸಂಘದ ಮೆಡಿಕಲ್ ಕಾಲೇಜಿನಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಾಲಕನ ಶಸ್ತ್ರಚಿಕಿತ್ಸೆಗಾಗಿ ಜಿಲ್ಲಾ ಆಸ್ಪತ್ರೆಯಿಂದ ಆತನ ಹೆಸರು ನೋಂದಾಯಿಸಲಾಗಿತ್ತು. ಸುವರ್ಣಾ ಆರೋಗ್ಯ ಸುರಕ್ಷಾ ಟ್ರಸ್ಟ್ ಯೋಜನೆಯಡಿಯಲ್ಲಿ ಅಂದಾಜು ೮ ರಿಂದ ೯ ಲಕ್ಷ ರೂ. ವೆಚ್ಚದ ಈ ಶಸ್ತ್ರಚಿಕಿತ್ಸೆಯನ್ನು ನಮ್ಮ ಆಸ್ಪತ್ರೆಯಲ್ಲಿ ಉಚಿತವಾಗಿ ಮಾಡಲಾಯಿತು. ಶಸ್ತ್ರಚಿಕಿತ್ಸೆಯ ನಂತರ ಮಗು ಚೇತರಿಸಿಕೊಂಡಿದ್ದು ಆರೋಗ್ಯವಾಗಿದೆ ಎಂದರು.
ಸಂಘದ ವೈದ್ಯಕೀಯ ಆಡಳಿತ ಮಂಡಳಿ ಕಾರ್ಯಾಧ್ಯಕ್ಷ ಅಶೋಕ ಸಜ್ಜನ (ಬೇವೂರ), ಕಾಲೇಜಿನ ಪ್ರಭಾರಿ ಪ್ರಾಚಾರ್ಯ ಡಾ.ಶಿವಕುಮಾರ ಸೊಲಬನ್ನವರ, ವೈದ್ಯಕೀಯ ಅಧೀಕ್ಷಕಿ ಡಾ.ಭುವನೇಶ್ವರಿ ಯಳಮಲಿ, ಎನ್.ಇ.ಟಿ ವಿಭಾಗದ ಮುಖ್ಯಸ್ಥ ಡಾ. ಎಸ್.ಎಸ್.ದೊಡ್ಡಮನಿ, ಪ್ರಾಧ್ಯಾಪಕ ಡಾ. ಸಿ.ಎಸ್.ಹಿರೇಮಠ ಸೇರಿ ಇತರರಿದ್ದರು.