

ಚಿತ್ರದುರ್ಗ: ಎಲ್ಲಾ ಜಾತಿಗಳಲ್ಲಿನ ಉಪ ಪಂಗಡಗಳಿಗೆ ಸೌಲಭ್ಯ ಒದಗಿಸಲು ಆಳುವ ಸರ್ಕಾರಕ್ಕೆ ಕಾಂತರಾಜ್ ಆಯೋಗದ ವರದಿ ಸಹಕಾರಿಯಾಗಿದ್ದು, ಇದನ್ನು ಯಾರು ವಿರೋಧಿಸಬಾರದು. ಸಿಎಂ ಸಿದ್ದರಾಮಯ್ಯ ಇಟ್ಟ ಹೆಜ್ಜೆಯಿಂದ ಹಿಂದಕ್ಕೆ ಸರಿಯಬಾರದು ಎಂದು ಚಿಂತಕ ಜೆ.ಯಾದವರೆಡ್ಡಿ ಒತ್ತಾಯಿಸಿದರು.
ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಈ ಆಯೋಗದ ವರದಿಯನ್ವಯ ಆಳವಾಗಿ ಅಧ್ಯಯನ ನಡೆಸಿದರೆ ಜಾತಿವಾರು ಆರ್ಥಿಕ, ಸಾಮಾಜಿಕ, ಶೈಕ್ಷಣಿಕ ಸ್ಥಿತಿಗತಿ ತಿಳಿಯಬಹುದು. ಮೀಸಲಾತಿಯಲ್ಲಿ ದುರುಪಯೋಗ ಆಗಬಾರದೆಂದರೆ ಇದು ಜಾರಿಯಾಗಬೇಕು ಎಂದು ಆಗ್ರಹಿಸಿದರು.
ಮೀಸಲಾತಿ ಭಾರತಕ್ಕೆ ಸೀಮಿತವಲ್ಲ, ಇಡೀ ವಿಶ್ವದಲ್ಲಿದೆ. ಸರ್ವರಿಗೂ ಸಾಮಾಜಿಕ ನ್ಯಾಯ ನೀಡುವ ಜಾತಿ ಗಣತಿ ಬಹಿರಂಗಪಡಿಸಬೇಕು. ಚಿನ್ನಪ್ಪರೆಡ್ಡಿ, ವೆಂಕಟಸ್ವಾಮಿ, ನಂಜುಂಡಪ್ಪ ಆಯೋಗದ ವರದಿ ಜಾರಿಗೂ ಮುಂದಾಗಬೇಕು. ಆಗ ಮಾತ್ರ ಅಹಿಂದ ವರ್ಗ ಸಮಾಜದ ಮುಖ್ಯವಾಹಿಗೆ ಬರಲು ಸಾಧ್ಯ ಎಂದು ಹೇಳಿದರು.
ಕರ್ನಾಟಕ ಜನಶಕ್ತಿ ರಾಜ್ಯ ಸಮಿತಿ ಸದಸ್ಯ ಟಿ.ಶಫಿವುಲ್ಲಾ ಮಾತನಾಡಿ, ಕಾಂತರಾಜು ಆಯೋಗದ ವರದಿಗೆ ಕೆಲವರು ವಿರೋಧ ಮಾಡುತ್ತಿರುವುದೇಕೆ, ಹಿಂದುಳಿದ ವರ್ಗಗಳ ಕಲ್ಯಾಣಕ್ಕೆ ಅಡ್ಡಿಪಡಿಸುವುದೇಕೆ ಎಂದು ಪ್ರಶ್ನಿಸಿದರು.
ಪಪೂ ಶಿಕ್ಷಣ ಇಲಾಖೆ ನಿವೃತ್ತ ಉಪನಿರ್ದೇಶಕ ಶಿವಕುಮಾರ್ ಮಾತನಾಡಿ, ಮೀಸಲಾತಿ ಸರಿಯಾಗಿ ಹಂಚಿಕೆಯಾಗಲು ಈ ಆಯೋಗದ ವರದಿ ಜಾರಿಯಿಂದ ಮಾತ್ರ ಸಾಧ್ಯ. ಒಕ್ಕಲಿಗ, ಲಿಂಗಾಯತ ಸಮಾಜ ಇದನ್ನು ವಿರೋಧಿಸುತ್ತಿರುವುದು ಸರಿಯಲ್ಲ. ಜಾರಿಯಾಗದಂತೆ ತಡೆಯುವುದು ಅಹಿಂದ ವರ್ಗದವರ ಮೇಲೆ ನಡೆಯುತ್ತಿರುವ ದೌರ್ಜನ್ಯ ಎಂದು ಬೇಸರಿಸಿದರು.
ಸೊಲೋಮನ್ ರಾಜ್‌ಕುಮಾರ್, ಮಹಮದ್ ಸಿರಾಜ್ ಇದ್ದರು.