

ಹಾಸನ: ಜಿಲ್ಲಾ ವೀರಶೈವ ಲಿಂಗಾಯತ ಸಂಘದ ಸರ್ವ ಸದಸ್ಯರ ಸಭೆ ಡಿ.23ರಂದು ನಗರದ ಬಸವೇಶ್ವರ ಕಲ್ಯಾಣ ಮಂಟಪದಲ್ಲಿ ನಡೆಯಿತು. ಈ ಸಭೆಯಲ್ಲಿ ಜಾತಿ ಜನಗಣತಿ ಸಮೀಕ್ಷೆಯ ಕಾಂತರಾಜ್ ವರದಿಯನ್ನು ಸರ್ಕಾರ ಸ್ವೀಕರಿಸಬಾರದು ಎಂದು ನಿರ್ಣಯ ಕೈಗೊಳ್ಳಲಾಗಿದೆ ಎಂದು ಸಂಘದ ಜಿಲ್ಲಾಧ್ಯಕ್ಷ ಬಿ.ಪಿ. ಐಸಾಮಿಗೌಡ ತಿಳಿಸಿದರು.
ಕಾಂತರಾಜು ಅವರ ಜಾತಿ ಜನಗಣತಿ ಸಮೀಕ್ಷಾ ವರದಿ ಅವೈಜ್ಞಾನಿಕವಾಗಿದ್ದು, ಹಲವು ಲೋಪ-ದೋಷಗಳಿಂದ ಕೂಡಿದೆ. ಅಲ್ಲದೆ ವರದಿ ಬಿಡುಗಡೆಗೂ ಮುನ್ನವೇ ಬಹಿರಂಗಗೊಂಡಿರುವುದರಿಂದ ಈ ವರದಿಯನ್ನು ಸರ್ಕಾರ ಯಾವುದೇ ಕಾರಣಕ್ಕೂ ಜಾರಿಗೊಳಿಸಬಾರದು ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಒತ್ತಾಯಿಸಿದರು.
ಸರ್ಕಾರ ಮತ್ತೆ ಹೊಸದಾಗಿ ತಂತ್ರಜ್ಞಾನ ಬಳಸಿಕೊಂಡು ದೋಷಗಳನ್ನು ಸರಿಪಡಿಸಿ ಮತ್ತೊಮ್ಮೆ ಸಾಮಾಜಿಕ- ಶೈಕ್ಷಣಿಕ- ಆರ್ಥಿಕ ಸಮೀಕ್ಷೆಯನ್ನು ನಡೆಸುವುದಾದರೆ ಅದಕ್ಕೆ ನಮ್ಮ ಸಮಾಜದ ಸಂಪೂರ್ಣ ಸಹಕಾರ ನೀಡುವುದಾಗಿ ಸಭೆಯಲ್ಲಿ ಸರ್ವಾನುಮತದಿಂದ ತೀರ್ಮಾನಿಸಲಾಯಿತು ಎಂದು ಹೇಳಿದರು.
ವೀರಶೈವ ಲಿಂಗಾಯತ ಸಮುದಾಯವನ್ನು ಕೇಂದ್ರ ಸರ್ಕಾರದ ಹಿಂದುಳಿದ ವರ್ಗಗಳ ಪಟ್ಟಿಗೆ ಸೇರಿಸುವಂತೆ ಸರ್ಕಾರಕ್ಕೆ ಶಿಫಾರಸು ಮಾಡುವ ವಿಚಾರದಲ್ಲಿ ಕೂಡ ಸಭೆಯಲ್ಲಿ ಒಪ್ಪಿಗೆ ಪಡೆಯಲಾಗಿದೆ ಎಂದು ಮಾಹಿತಿ ನೀಡಿದರು.
ಸುದ್ದಿಗೋಷ್ಠಿಯಲ್ಲಿ ವೀರಶೈವ ಲಿಂಗಾಯಿತ ಸಂಘದ ಉಪಾಧ್ಯಕ್ಷ ಬಿ.ಎಂ. ಭುವನಾಕ್ಷ, ನಂಜುಂಡಪ್ಪ, ಕಾರ್ಯದರ್ಶಿ ಈ.ಎಂ.ರುದ್ರ ಕುಮಾರ್, ಸಹಕಾರ್ಯದರ್ಶಿ ಎಚ್.ಮಲ್ಲಿಕಾರ್ಜುನ್, ಖಜಾಂಚಿ ಎಂ.ಪಿ. ಕಾಂತರಾಜ್ ಇದ್ದರು.