ಕಾಂಗ್ರೆಸ್‌ನಿಂದ ಅಭಿವೃದ್ಧಿ ಕಡೆಗಣನೆ, ಕೇಂದ್ರ ಸಚಿವ ಎ. ನಾರಾಯಣಸ್ವಾಮಿ ಆರೋಪ, ನೆಲಮಂಗಲದಲ್ಲಿ ಜನಾಶೀರ್ವಾದ ಯಾತ್ರೆ

17 Nela Ph 02 Abhinandane
Published on

ನೆಲಮಂಗಲ: ಸ್ವಾತಂತ್ರ್ಯ ಮತ್ತು ದಲಿತರ ಅಭಿವೃದ್ಧಿ ಹೆಸರಿನಲ್ಲಿ ಮತ ಕೇಳಿ ಅಧಿಕಾರಕ್ಕೆ ಬಂದ ಕಾಂಗ್ರೆಸ್ ದೇಶದ ಅಭಿವೃದ್ಧಿಯನ್ನು ಕಡಗಣಿಸಿದ್ದರ ಪರಿಣಾಮ ಇಂದಿಗೂ ದೇಶದ ಸಮಗ್ರ ಅಭಿವೃದ್ಧಿ ಸಾಧ್ಯವಾಗಿಲ್ಲ ಎಂದು ಎ.ನಾರಾಯಣಸ್ವಾಮಿ ಆರೋಪಿಸಿದರು.

ಕ್ಷೇತ್ರ ಬಿಜೆಪಿ ಕಾರ್ಯಕರ್ತರು ಮಂಗಳವಾರ ಹಮ್ಮಿಕೊಂಡಿದ್ದ ಜನಾಶೀರ್ವಾದ ಯಾತ್ರೆ ಬಳಿಕ ನಗರದ ಪ್ರವಾಸಿ ಮಂದಿರದಲ್ಲಿ ಸುದ್ದಿಗಾರರ ಜತೆ ಮಾತನಾಡಿದರು.

ನರೇಂದ್ರ ಮೋದಿ ನೇತೃತ್ವದ ಸರ್ಕಾರ ಬಂದ ಮೇಲೆ ಸ್ವಚ್ಛಭಾರತ ವಿಷನ್ ಯೋಜನೆಯಡಿ 10 ಕೋಟಿ ಕುಟುಂಬಕ್ಕೆ ಶೌಚಗೃಹ, ಹೊಸ ಉದ್ದಿಮೆ ಆರಂಭಿಸುವ ಯುವಜನತೆಗಾಗಿ ಮುದ್ರಾ ಯೋಜನೆ, ರೈತರ ನೆರವಿಗಾಗಿ ಕಿಸಾನ್ ಸಮ್ಮಾನ್ ಯೋಜನೆ ಜಾರಿಗೆ ತರಲಾಗಿದೆ ಎಂದರು.

ನವೋದಯ ಶಾಲೆ ಆರಂಭ!: ದೇಶದಲ್ಲಿ ಐಎಎಸ್ ಅಧಿಕಾರಿಗಳ ಕೊರತೆ ಮನಗಂಡು ರಾಜ್ಯದ ಉನ್ನತ ವಿಶ್ವವಿದ್ಯಾಲಯಗಳಲ್ಲಿ ದಲಿತರಿಗೆ ಐಎಎಸ್ ಕೋಚಿಂಗ್ ಸೆಂಟರ್ ಸ್ಥಾಪನೆ, ಮೀಸಲು ಲೋಕಸಭಾ ಕ್ಷೇತ್ರದಲ್ಲಿ ಅಂಬೇಡ್ಕರ್ ನವೋದಯ ಶಾಲೆ ಆರಂಭಿಸುವುದಾಗಿ ಎ.ನಾರಾಯಣಸ್ವಾಮಿ ತಿಳಿಸಿದರು.

ಹೂ ಮಳೆ: ನಗರದ ಮುಖ್ಯರಸ್ತೆಯಲ್ಲಿ ತೆರದ ವಾಹನದಲ್ಲಿ ಮೆರಣಿಗೆ ನಡೆಸಲಾಯಿತು. ರಾಜ್ಯ ಅನುಸೂಚಿತ ಜಾತಿಗಳು ಮತ್ತು ಅನುಸೂಚಿತ ಬುಡಕಟ್ಟು ಆರೋಗದ ಸದಸ್ಯ ಎಚ್.ವೆಂಕಟೇಶ್ ದೊಡ್ಡೇರಿ ಸಿದ್ಧಪಡಿಸಿದ್ದ ಬೃಹತ್ ಸೇಬಿನ ಹಣ್ಣಿನ ಹಾರ ಹಾಕಿ, ಹೂವಿನ ಮಳೆ ಸುರಿಸಿ ಕೇಂದ್ರ ಸಚಿವರನ್ನು ಅಭಿನಂದಿಸಲಾಯಿತು.

ಲಸಿಕಾ ಅಭಿಯಾನ ಯಶಸ್ವಿ: ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಕರೊನಾ ನಿಯಂತ್ರಣಕ್ಕೆ ಸಾಕಷ್ಟು ಶ್ರಮಿಸುತ್ತಿವೆ. ದೇಶಾದ್ಯಂತ ಉಚಿತ ಲಸಿಕಾ ಅಭಿಯಾನದ ಮೂಲಕ ಸಾಂಕ್ರಾಮಿಕವನ್ನು ಹತೋಟಿಗೆ ತರಲು ಪ್ರಾಮಾಣಿಕವಾಗಿ ಶ್ರಮಿಸುತ್ತಿವೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಂಟಿಬಿ ನಾಗರಾಜ್ ಹೇಳಿದರು.

ಜಿಲ್ಲೆಯಾದ್ಯಂತ ಕೋವಿಶೀಲ್ಡ್ ಮತ್ತು ಕೋವ್ಯಾಕ್ಸಿನ್ ಲಸಿಕೆ ವಿತರಣೆ ಮಾಡಲಾಗುತ್ತಿದೆ. 18 ವರ್ಷ ಮೇಲ್ಪಟ್ಟವರು ಸ್ಥಳೀಯ ಸಾರ್ವಜನಿಕ ಆಸ್ಪತ್ರೆಯಲ್ಲಿ ಕಡ್ಡಾಯವಾಗಿ ಲಸಿಕೆ ಹಾಕಿಸಿಕೊಳ್ಳಬೇಕು. ಜಿಲ್ಲೆಯ 65 ಕೇಂದ್ರದಲ್ಲಿ ಲಸಿಕೆ ವಿತರಣೆ ಮಾಡಲಾಗುತ್ತಿದೆ. ನಿತ್ಯ 7 ಸಾವಿರ ವಾಕ್ಸಿನ್ ಪೂರೈಕೆಯಾಗುತ್ತಿದೆ. ಜಿಲ್ಲೆಯಾದ್ಯಂತ ಶೇ.60 ವಾಕ್ಸಿನ್ ನೀಡಲಾಗಿದೆ ಎಂದು ತಿಳಿಸಿದರು.

ಸಸಿ ನೆಟ್ಟ ಸಚಿವ: ನಗರದ ಸರ್ಕಾರಿ ಪದವಿ ಪೂರ್ವ ಕಾಲೇಜು ಆವರಣದಲ್ಲಿ ನಾರಾಯಣಸ್ವಾಮಿ ಸಸಿ ನೆಟ್ಟರು. ಬಳಿಕ ನಗರದ ಪವಾಡ ಬಸವಣ್ಣ ದೇವರ ಮಠದಲ್ಲಿ ರಾಜ್ಯ ಮಾದಿಗ ದಂಡೋರ ಸಮಿತಿಯಿಂದ ಸನ್ಮಾನ ಸ್ವೀಕರಿಸಿದರು.

ಎಲ್ಲರ ಅಭಿಪ್ರಾಯ ಪಡೆದು ಶಾಲೆ ಆರಂಭ: ಶಾಲಾ ಕಾಲೇಜು ಆರಂಭಿಸುವ ಸಂಬಂಧ ಎಲ್ಲ ಶಿಕ್ಷಕರಿಗೆ ಆಯಾ ಬಿಇಒ ಕಚೇರಿಯಲ್ಲಿ ವಾಕ್ಸಿನ್ ಹಾಕಿಸಿಕೊಳ್ಳಲು ವ್ಯವಸ್ಥೆ ಮಾಡಲಾಗಿದೆ. ಆ.23ರ ಒಳಗಾಗಿ ಎಲ್ಲ ಶಿಕ್ಷಕರು ಕಡ್ಡಾಯವಾಗಿ ಲಸಿಕೆ ಪಡೆದುಕೊಳ್ಳಬೇಕು. ಎಲ್ಲರ ಅಭಿಪ್ರಾಯ ಪಡೆದು ಶಾಲೆ ಆರಂಭ ಮಾಡಲಾಗುತ್ತಿದೆ ಎಂದು ಶಿಕ್ಷಣ ಸಚಿವ ನಾಗೇಶ್ ಸ್ಪಷ್ಟಪಡಿಸಿದರು.

ಕರೊನಾ ನಡುವೆಯೇ ಜೀವನ ನಡೆಸುವ ಸ್ಥಿತಿ ನಿರ್ಮಾಣವಾಗಿದೆ. ಒಂದೂವರೆ ವರ್ಷದಿಂದ ಮಕ್ಕಳು ಶಿಕ್ಷಣದಿಂದ ದೂರ ಉಳಿದಿದ್ದಾರೆ. ಈ ಹಿನ್ನೆಲೆಯಲ್ಲಿ ತಜ್ಞರ ಅಭಿಪ್ರಾಯದಂತೆ 9ರಿಂದ 10ನೇ ತರಗತಿ ಹಾಗೂ 11 ಮತ್ತು 12ನೇ ತರಗತಿ ಆರಂಭ ಮಾಡಲಾಗುವುದು. ಜತೆಗೆ ಖಾಸಗಿ ಶಾಲೆಗಳ ಹಣ ವಸೂಲಿ ಬಗ್ಗೆ ಕೋರ್ಟ್ ತಡೆಯಾಜ್ಞೆ ನೀಡಿದ್ದು ವೈಯಕ್ತಿಕ ದೂರು ಬಂದಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದರು.

ಬಿಜೆಪಿ ರಾಜ್ಯ ಉಪಾಧ್ಯಕ್ಷ ಶಂಕರಪ್ಪ, ಶಾಸಕ ಎಂ.ವಿ. ನಾಗರಾಜು, ಗ್ರಾಮಾಂತರ ಜಿಲ್ಲಾಧ್ಯಕ್ಷ ವಿ. ನಾರಾಯಣ್‌ಸ್ವಾಮಿ, ಉಪಾಧ್ಯಕ್ಷ ಬಿ. ಹೊಂಬಯ್ಯ, ತಾಲೂಕು ಅಧ್ಯಕ್ಷ ಹೇಮಂತ್‌ಕುಮಾರ್, ಪ್ರಧಾನ ಕಾರ್ಯದರ್ಶಿ ರವಿ, ಮಂಜುನಾಥ್, ಎಸ್‌ಸಿ ಮೋರ್ಚಾ ಜಿಲ್ಲಾಧ್ಯಕ್ಷ ಎಂ.ಎನ್. ರಾಮ್, ನೆ.ಯೋ. ಪ್ರಾಧಿಕಾರದ ಅಧ್ಯಕ್ಷ ಎಸ್. ಮಲ್ಲಯ್ಯ, ನಗರಸಭೆ ಸದಸ್ಯ ಎನ್. ಗಣೇಶ್ ಮತ್ತಿತರರು ಇದ್ದರು.

ವಿಶೇಷ ಪೂಜೆ: ಕೇಂದ್ರ ಸಚಿವ ಎ. ನಾರಾಯಣಸ್ವಾಮಿ ನೆಲಮಂಗಲಕ್ಕೆ ಬರುತ್ತಲೇ ನಗರದ ಚನ್ನಪ್ಪ ಬಡಾವಣೆಯ ಶ್ರೀ ರಾಮಾಂಜನೇಯಸ್ವಾಮಿ ದೇಗುಲಕ್ಕೆ ಭೇಟಿ ನೀಡಿದರು. ದೇವರ ದರ್ಶನ ಪಡೆದು, ವಿಶೇಷ ಪೂಜೆ ಸಲ್ಲಿಸಿದರು.

ದಿನಸಿ ಕಿಟ್ ವಿತರಣೆ: ನಗರದಿಂದ ತಾಲೂಕಿನ ಸೋಂಪುರ ಹೋಬಳಿಗೆ ತೆರಳುವ ಮಾರ್ಗ ಮಧ್ಯೆ ಟಿ. ಬೇಗೂರು ಗ್ರಾಮದ ಸರ್ಕಾರಿ ನ್ಯಾಯಬೆಲೆ ಅಂಗಡಿಯ ಬಳಿ ಬಂದ ಅವರು, ಕೇಂದ್ರ ಸರ್ಕಾರ ತಲಾ 5 ಕೆಜಿ ಅಕ್ಕಿ ವಿತರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡರು. 50ಕ್ಕೂ ಹೆಚ್ಚು ಕುಟುಂಬಗಳಿಗೆ ಪಡಿತರವನ್ನು ವಿತರಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net