

ಹುಬ್ಬಳ್ಳಿ : ಕಾಂಗ್ರೆಸ್‌ನವರು ಭಾರತ ಜೋಡೊ ಅಭಿಯಾನ ನಡೆಸುತ್ತಿದ್ದಾರೆ. ಮತ್ತೊಂದೆಡೆ ಆ ಪಕ್ಷದ ಮುಖಂಡರು ಕಾಂಗ್ರೆಸ್ ‘ಚೋಡೊ’ದಲ್ಲಿ ಮಗ್ನರಾಗಿದ್ದಾರೆ. ಕಾಂಗ್ರೆಸ್‌ನವರು ಮೊದಲು ಪಕ್ಷ ಜೋಡಿಸುವ ಕೆಲಸ ಮಾಡಲಿ. ಇಲ್ಲದಿದ್ದರೆ ಭವಿಷ್ಯದಲ್ಲಿ ಆ ಪಕ್ಷದ ಬೋರ್ಡ್ ಹಾಕುವವರೂ ಇರುವುದಿಲ್ಲ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ವ್ಯಂಗ್ಯವಾಡಿದರು.
ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್‌ನವರು ಮೊದಲು ಕಾಂಗ್ರೆಸ್ ಜೋಡಿಸುವುದರ ಬಗ್ಗೆ ಚಿಂತಿಸಲಿ. ಇಂದಿನ ಕಾಂಗ್ರೆಸ್‌ನವರಿಗೆ ನೀತಿ, ನಿಯತ್ತು, ನೇತೃತ್ವ ಇಲ್ಲ. ರಾಜಕೀಯ ತಂತ್ರಗಾರಿಕೆಯಂತೂ ಇಲ್ಲವೇ ಇಲ್ಲ. ಆ ಪಕ್ಷ ನೇತೃತ್ವಹೀನವಾಗಿದೆ. ಪಕ್ಷಕ್ಕೆ ಸಂಬಂಧ ಇಲ್ಲದವರು ನಿರ್ಣಯಗಳನ್ನು ತೆಗೆದುಕೊಳ್ಳುತ್ತಾರೆ ಎಂದು ಟೀಕಿಸಿದರು.
ರಾಜಕೀಯ ಪಕ್ಷಗಳಿಗೆ ದೇಶದ ನಿಯತ್ತಿನ ಜತೆಗೆ ರಾಜಿಯಾಗದಂತಹ ನಿಯತ್ತಿನ ಅಗತ್ಯವಿದೆ. ಆದರೆ, ನೀತಿ, ನಿಯತ್ತು ಇಲ್ಲದಿರುವುದು ಕಾಂಗ್ರೆಸ್‌ನ ಅವನತಿಗೆ ಕಾರಣವಾಗಿದೆ ಎಂದರು.
ಕಾಂಗ್ರೆಸ್‌ನ ಅನೇಕ ನಾಯಕರು ಬಿಜೆಪಿ ಮುಖಂಡರ ಸಂಪರ್ಕದಲ್ಲಿ ಇದ್ದಾರೆ. ಡಿಸೆಂಬರ್ ಅಂತ್ಯದ ನಂತರ ದೇಶ ಹಾಗೂ ರಾಜ್ಯದಲ್ಲಿ ರಾಜಕೀಯ ಧ್ರುವೀಕರಣವಾಗಲಿದೆ. ಆ ಪಕ್ಷದ ಅನೇಕರು ಬಿಜೆಪಿ ಸೇರಲು ತುದಿಗಾಲಲ್ಲಿ ನಿಂತಿದ್ದಾರೆ ಎಂದು ಹೇಳಿದರು.
ಕಾಂಗ್ರೆಸ್ ಅನ್ನು ಅನೇಕ ಮುಖಂಡರು ತೊರೆಯುತ್ತಿದ್ದಾರೆ. ರಾಜಕೀಯವಾಗಿ ಆತ್ಮಹತ್ಯೆ ಮಾಡಿಕೊಳ್ಳಬಯಸುವವರಷ್ಟೇ ಆ ಪಕ್ಷಕ್ಕೆ ಸೇರಬೇಕು. ರಾಜಕಾರಣದಲ್ಲಿ ಇರುವವರು ಬುದ್ಧಿವಂತರು ಇರುವುದರಿಂದ ಯಾವೊಬ್ಬ ರಾಜಕಾರಣಿ ಕಾಂಗ್ರೆಸ್ ಸೇರಲು ಬಯಸುವುದಿಲ್ಲ ಎಂದರು.
ಮುಂಬರುವ ಚುನಾವಣೆಯನ್ನು ಕೇಂದ್ರ ಸಂಸದೀಯ ಮಂಡಳಿ ಹಾಗೂ ಚುನಾವಣೆ ಸಮಿತಿ ಸದಸ್ಯ ಬಿ.ಎಸ್. ಯಡಿಯೂರಪ್ಪ ಅವರ ಮಾರ್ಗದರ್ಶನ ಹಾಗೂ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ನೇತೃತ್ವದಲ್ಲಿ ಎದುರಿಸುತ್ತೇವೆ. ಕಳೆದ ಬಾರಿಗಿಂತ ಹೆಚ್ಚಿನ ಸ್ಥಾನಗಳನ್ನು ಈ ಬಾರಿ ಗೆಲ್ಲುತ್ತೇವೆ ಎಂದು ಹೇಳಿದರು.
ಸಚಿವ ಅರವಿಂದ ಲಿಂಬಾವಳಿ ಬೆಂಗಳೂರಿನಲ್ಲಿ ಮಹಿಳೆಯೊಂದಿಗೆ ವರ್ತಿಸಿದ ಅಸಭ್ಯ ಘಟನೆ ಬಗ್ಗೆ ಮಾಹಿತಿ ಇಲ್ಲ. ಹೀಗಾಗಿ ಪ್ರತಿಕ್ರೀಯೆ ನೀಡುವುದಿಲ್ಲ ಎಂದ ಸಿ.ಟಿ. ರವಿ, ಸಾರ್ವಜನಿಕ ಜೀವನದಲ್ಲಿ ಇರುವವವರು ಅಸಭ್ಯವಾಗಿ ವರ್ತಿಸಿದರೆ ಅವರಿಗೆ ವೈಯಕ್ತಿಕವಾಗಿ ಹಾಗೂ ಪಕ್ಷಕ್ಕೆ ಹಾನಿಯಾಗುತ್ತದೆ ಎಂದರು.
ಭ್ರಷ್ಟಾಚಾರದ ವಿರುದ್ಧ ಧ್ವನಿ ಎತ್ತಿ ಹುಟ್ಟಿದ್ದ ಆಮ್ ಆದ್ಮಿ ಪಾರ್ಟಿ, ಇದೀಗ ಭ್ರಷ್ಟಾಚಾರ ಸಮರ್ಥನೆ ಮಾಡಿಕೊಳ್ಳುತ್ತಿದೆ. ಆ ಪಕ್ಷ ಅಣಬೆಯಂತೆ. ಅಣಬೆ ರಾತ್ರಿ ಹುಟ್ಟಿ, ಒಂದೆರೆಡು ದಿನಗಳ ಬಳಿಕ ಅವನತಿ ಹೊಂದುತ್ತದೆ. ಇದೀಗ ಆಮ್ ಆದ್ಮಿ ಪಾರ್ಟಿಗೂ ಅವನತಿ ಸಮೀಪಿಸಿದೆ ಎಂದು ಹೇಳಿದರು.
ಚಿತ್ರದುರ್ಗದ ಮುರುಘಾ ಶರಣರ ಪ್ರಕರಣಕ್ಕೆ ಸಂಬಂಧಿಸಿದಂತೆ ನಿಷ್ಪಕ್ಷಪಾತ ತನಿಖೆ ನಡೆಯುತ್ತಿದೆ. ಸತ್ಯಾಂಶ ಹೊರಬರುತ್ತದೆ ಎಂದರು.
ಟಿಪ್ಪುವಿನ ಹೊಗಳಿಕೆ ಹಿನ್ನೆಲೆಯಲ್ಲಿ ಚಿತ್ರದುರ್ಗ ಸ್ವಾಮೀಜಿ ಅವರಿಗೆ ಈ ಸ್ಥಿತಿ ಎದುರಾಗಿದೆ ಎಂಬ ಶಾಸಕ ಬಸವರಾಜ ಪಾಟೀಲ ಯತ್ನಾಳ ಹೇಳಿಕೆಗೆ ಪ್ರತಿಕ್ರಿಯಿಸಿದ ಸಿ.ಟಿ. ರವಿ, ಏನೇ ಹೇಳಿದರೂ ಯತ್ನಾಳ ಅವರಿಗೆ ಅರಗಿಸಿಕೊಳ್ಳುವ ಶಕ್ತಿ ಇದೆ. ಆದರೆ, ನನಗೆ ಆ ಶಕ್ತಿ ಇಲ್ಲ ಎಂದರು.