ಕಾಂಗ್ರೆಸ್‌ನವರು ಮೊದಲು ತಮ್ಮ ತಟ್ಟೆಯಲ್ಲಿ ಏನಿದೆ ಎಂದು ನೋಡಿಕೊಳ್ಳಲಿ

Basavaraj-Bommai
Published on

ಮೈಸೂರು: ಕಾಂಗ್ರೆಸ್ ಪಕ್ಷದಲ್ಲಿ ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ಇಬ್ಬರು ನಾನೊಂದು ತೀರ-ನೀನೊಂದು ತೀರ ಆಗಿದ್ದಾರೆ. ಮೊದಲು ಅವರ ತಟ್ಟೆಯಲ್ಲಿ ಏನಿದೆ ಎಂದು ನೋಡಿಕೊಳ್ಳಬೇಕು. ಬಳಿಕ ಬೇರೆಯವರ ತಟ್ಟೆಯ ಬಗ್ಗೆ ಮಾತನಾಡಬೇಕು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಟಾಂಗ್ ನೀಡಿದರು.

ಕಬಿನಿ ಮತ್ತು ಕೆಆರ್‌ಎಸ್ ಜಲಾಶಯಗಳಿಗೆ ಬಾಗಿನ ಅರ್ಪಿಸುವ ಸಂಬಂಧ ಬುಧವಾರ ಮೈಸೂರಿಗೆ ಆಗಮಿಸಿದ ಅವರು, ಮಂಡಕಳ್ಳಿ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದರು.

‘ಬಸವರಾಜ ಬೊಮ್ಮಾಯಿ ರಿಮೋಟ್ ಕಂಟ್ರೋಲ್ ಸಿಎಂ’ ಎಂಬ ಡಿ.ಕೆ.ಶಿವಕುಮಾರ್ ಹೇಳಿಕೆಗೆ ತಿರುಗೇಟು ನೀಡಿದರು. ಡಿ.ಕೆ.ಶಿವಕುಮಾರ್ ಕಂಡರೆ ಪಾಪ ಅನಿಸುತ್ತದೆ. ಬಹಳ ವರ್ಷಗಳಿಂದ ಮುಖ್ಯಮಂತ್ರಿ ಆಗಬೇಕು ಎಂದು ಕನಸು ಕಾಣುತ್ತಿದ್ದಾರೆ. ಆದರೆ, ಅವರಿಗೆ ಕೆಪಿಸಿಸಿ ಅಧ್ಯಕ್ಷರಾಗಿ ಸಮರ್ಪಕವಾಗಿ ಕೆಲಸ ಮಾಡಲು ಬೇರೆಯವರು ಬಿಡುತ್ತಿಲ್ಲ ಎಂದರು.

ಕೇಂದ್ರದಿಂದ ರಾಜ್ಯಕ್ಕೆ ಸಿಗಬೇಕಾದ ಜಿಎಸ್‌ಟಿ ಪಾಲು ಸಿಗುತ್ತಿದೆ. ಜಿಎಸ್‌ಟಿಯನ್ನು ಸಂವಿಧಾನ ಬದ್ಧವಾಗಿ ಮಾಡಲಾಗಿದೆ. ಎಲ್ಲ ರಾಜ್ಯ ಸರ್ಕಾರ ಮತ್ತು ಕೇಂದ್ರ ಸರ್ಕಾರ ಪಾಸ್ ಮಾಡಿರುವ ಆಕ್ಟ್ ಅದು. ರಾಜ್ಯದ ಪಾಲನ್ನು ನೀಡಲು ಐದು ವರ್ಷ ನಿಗದಿ ಮಾಡಿದ್ದಾರೆ. ಆದರೆ ಕೋವಿಡ್ ಕಾರಣದಿಂದ ತೆರಿಗೆ ಸಂಗ್ರಹ ಆಗಿರಲಿಲ್ಲ. ಆದರೂ ಕೇಂದ್ರದಿಂದ 8,800 ಕೋಟಿ ರೂ. ಹಣ ಕೊಟ್ಟಿದ್ದಾರೆ. ಬಾಕಿ ಹಣವನ್ನು ನೀಡುತ್ತಾರೆ. ಹಾಗಾಗಿ ಕೇಂದ್ರದ ವಿರುದ್ಧ ಆರೋಪ ಮಾಡುವುದು ಸರಿಯಲ್ಲ ಎಂದರು.

ಜಿ.ಪಂ., ತಾ.ಪಂ. ಮತ್ತು ಬಿಬಿಎಂಪಿ ಚುನಾವಣೆ ಸಂಬಂಧ ಪ್ರತಿಕ್ರಿಯಿಸಿದ ಅವರು, ಈ ಸಂಬಂಧ ಕ್ಷೇತ್ರ ಪುನರ್ ವಿಂಗಡಣೆ ವರದಿ ಸಿಗಲಿದ್ದು, ಆ ವರದಿಯನ್ನು ಜು.22ಕ್ಕೆ ಸುಪ್ರೀಂ ಕೋರ್ಟ್‌ಗೆ ಸಲ್ಲಿಸುತ್ತೇವೆ. ಬಳಿಕ ಸುಪ್ರೀಂ ಕೋರ್ಟ್ ನಿರ್ದೇಶನದಂತೆ ತೀರ್ಮಾನ ಕೈಗೊಳ್ಳುತ್ತೇವೆ. ಜೊತೆಗೆ ಮೈಸೂರು ಮೇಯರ್ ಚುನಾವಣೆಗೂ ಮೀಸಲಾತಿ ಪ್ರಕಟ ಮಾಡಲಾಗುವುದು ಎಂದರು.

ಚಾಮುಂಡೇಶ್ವರಿ ಆಶೀರ್ವಾದ ಪಡೆದು, ಕಬಿನಿ ಕೆಆರ್‌ಎಸ್ ಜಲಾಶಯಗಳಿಗೆ ಬಾಗಿನ ಅರ್ಪಣೆ ಮಾಡುತ್ತೇವೆ. ಆಶಾಢ ಮಾಸದಲ್ಲಿಯೇ ಎಲ್ಲ ಜಲಾಶಯಗಳು ತುಂಬಿರುವುದು ಖುಷಿಯ ವಿಚಾರ. ಈ ಬಾರಿ ಮಳೆ ಚೆನ್ನಾಗಿ ಆಗಿದೆ. ರೈತರು ನೆಮ್ಮದಿಯಿಂದ ತಮ್ಮ ಹೊಲ ಗದ್ದೆಯಲ್ಲಿ ಕೆಲಸ ಮಾಡುತ್ತಿದ್ದಾರೆ ಎಂದರು. ಸಚಿವರಾದ ಗೋವಿಂದ ಕಾರಜೋಳ, ಎಸ್.ಟಿ.ಸೋಮಶೇಖರ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net