

ಗೌರಿಬಿದನೂರು : ಕಾಂಗ್ರೆಸನ್ನು ನಗರಸಭೆ ಅಧಿಕಾರದಿಂದ ದೂರವಿರಿಸಬೇಕು ಎಂದು ವಿರೋಧಿಗಳು ನಡೆಸಿದ ಪ್ರಯತ್ನಗಳು ವಿಫಲವಾಗಿದ್ದು ಮತ್ತೆ ಅಧಿಕಾರ ಚುಕ್ಕಾಣಿ ಹಿಡಿಯುವಲ್ಲಿ ಕೈ ಪಡೆ ಯಶಸ್ವಿಯಾಗಿದೆ.
ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಕ್ಕೆ ಭಾನುವಾರ ನಡೆದ ಚುನಾವಣೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಕಾಂಗ್ರೆಸ್‌ನಿಂದ ಗಾಯತ್ರಿ, ಜೆಡಿಎಸ್ ಬಣದಿಂದ ವರಲಕ್ಷ್ಮೀ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಕಾಂಗ್ರೆಸ್‌ನಿಂದ ಭಾಗ್ಯಮ್ಮ, ಜೆಡಿಎಸ್ ಬಣದಿಂದ ಅಶ್ವತ್ಥಮ್ಮ ಸ್ಪರ್ಧಿಸಿದ್ದರು.
ಕಾಂಗ್ರೆಸ್ ಬೆಂಬಲಿತ ಗಾಯತ್ರಿ ಹಾಗೂ ಭಾಗ್ಯಮ್ಮ 16 ಸದಸ್ಯರ ಮತಗಳ ಜತೆಗೆ ಶಾಸಕರ ಮತ ಸೇರಿ ಒಟ್ಟು 17 ಮತ ಪಡೆದು ಅಧ್ಯಕ್ಷ ಉಪಾಧ್ಯಕ್ಷರಾಗಿ ಆಯ್ಕೆಯಾದರು. ಜೆಡಿಎಸ್ ಬಣದ ವರಲಕ್ಷ್ಮೀ ಹಾಗೂ ಅಶ್ವತ್ಥಮ್ಮ 15 ಸದಸ್ಯರ ಮತ ಹಾಗೂ ಸಂಸದರ ಮತ ಸೇರಿ 16 ಮತ ಪಡೆದು ಪರಾಭವಗೊಂಡರು. ಚುನಾವಣಾಧಿಕಾರಿ ಉಪವಿಭಾಗಾಧಿಕಾರಿ ರಘುನಂದನ್ ಫಲಿತಾಂಶ ಪ್ರಕಟಿಸಿದರು.
ಫಲ ನೀಡದ ಪ್ರಯತ್ನ : ಕಾಂಗ್ರೆಸ್‌ನ ಕೆಲ ಸದಸ್ಯರನ್ನು ಸೆಳೆದುಕೊಂಡು ನಗರಸಭೆ ಅಧಿಕಾರವನ್ನು ತೆಕ್ಕೆಗೆ ತೆಗೆದುಕೊಳ್ಳಬೇಕು ಎಂದು ಬಿಜೆಪಿ, ಜೆಡಿಎಸ್ ಹಾಗೂ ಪುಟ್ಟಸ್ವಾಮಿಗೌಡರ ಬಣದ ಗುಂಪು ಕೊನೇ ಕ್ಷಣದವರೆಗೆ ನಡೆಸಿದ ಪ್ರಯತ್ನಗಳು ಫಲ ನೀಡಲಿಲ್ಲ. ಕಾಂಗ್ರೆಸ್ ಸದಸ್ಯರು ಆಮಿಷಗಳಿಗೆ ಬಲಿಯಾಗದೆ ಪಕ್ಷ ನಿಷ್ಠೆ ಮೆರೆದಿದ್ದರಿಂದ ಕಾಂಗ್ರೆಸ್ ಮತ್ತೆ ವಿಜಯ ಪತಾಕೆ ಹಾರಿಸಿತು.
ಅಧಿಕಾರ ಹಂಚಿಕೆ ಸೂತ್ರ : ಪ್ರವಾಸಕ್ಕೆ ತೆರಳಿದ್ದ ಕಾಂಗ್ರೆಸ್ ಸದಸ್ಯರು ಭಾನುವಾರ ಬೆಳಗ್ಗೆ ಶಾಸಕರ ಮನೆಯಲ್ಲಿ ಅಂತಿಮ ಮಾತುಕತೆ ನಡೆಸಿದರು. ಅಧ್ಯಕ್ಷ ಸ್ಥಾನಕ್ಕೆ ಗಾಯತ್ರಿ, ರಾಜರಾಜೇಶ್ವರಿ ಹಾಗೂ ರಾಜೇಶ್ವರಿ ಬಾಯಿ ಮೂವರೂ ಆಕಾಂಕ್ಷಿಗಳಾಗಿದ್ದರಿಂದ ತಲಾ 12 ತಿಂಗಳ ಅವಧಿಯಂತೆ ಅಧಿಕಾರ ಹಂಚಿಕೆ ಸೂತ್ರಕ್ಕೆ ಮೊರೆ ಹೋಗಲಾಯಿತು. ಅದರಂತೆ ಮೊದಲ ಅವಧಿಗೆ ಗಾಯತ್ರಿ ಅವರನ್ನು ಅಧ್ಯಕ್ಷರನ್ನಾಗಿಸಲು ಸದಸ್ಯರು ಒಮ್ಮತ ಸೂಚಿಸಿದ್ದಾರೆ