

ಗದಗ: ಸ್ವಾತಂತ್ರ್ಯ ಹೋರಾಟಗಾರ ವೀರ ಸಾವರ್ಕರ್ ವಿರುದ್ಧ ಕಾಂಗ್ರೆಸ್ ಕೀಳು ಮಟ್ಟದ ರಾಜಕೀಯ ಮಾಡುತ್ತಿರುವುದು ಸರಿಯಲ್ಲ ಎಂದು ಲೋಕೋಪಯೋಗಿ ಸಚಿವ ಸಿ.ಸಿ. ಪಾಟೀಲ ಹೇಳಿದರು.
ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ನಾಯಕರು ಹಾಗೂ ಪ್ರಮುಖರು ಸಾವರ್ಕರ್ ವಿರುದ್ಧ ನಿತ್ಯ ಕೀಳು ಮಟ್ಟದ ಭಾಷೆಯಲ್ಲಿ ಮಾತನಾಡುತ್ತಾರೆ. ದೇಶಕ್ಕಾಗಿ ಹೋರಾಟ ಮಾಡಿದ, ತ್ಯಾಗ ಬಲಿದಾನ ಮಾಡಿದ ಕುಟುಂಬಗಳು ಅವರಿಗೆ ನೆನಪಿಗೆ ಬರುತ್ತಿಲ್ಲ, ದೇಶಪ್ರೇಮಿ ಎಂದು ಕರೆಯದಿದ್ದರೂ ತೊಂದರೆ ಇಲ್ಲ, ದೇಶ ದೊ್ರೕಹಿ ಎಂದು ಕರೆದರೆ ಸ್ವಾತಂತ್ರ್ಯ ಹೋರಾಟಗಾರರಿಗೆ ಕಾಂಗ್ರೆಸ್ ಅನ್ಯಾಯ ಮಾಡಿದಂತಾಗುತ್ತದೆ ಎಂದರು.
ಸಾವಿರಾರು ಕೋಟಿ ರೂಪಾಯಿ ಹಗರಣದಲ್ಲಿ ಜೖಲು ಸೇರಿದವರನ್ನ ಮಹಾನ್ ನಾಯಕರು ಅಂತೀರಿ. 28 ವರ್ಷ ಜೈಲಿನಲ್ಲಿ ಕಳೆದ ಮಹಾನ್ ನಾಯಕನ ಬಗ್ಗೆ ಕಾಂಗ್ರೆಸ್ ಅಭಿಪ್ರಾಯ ಏನೆಂಬುದನ್ನು ಕಾಂಗ್ರೆಸ್ ಸ್ಪಷ್ಟ ಪಡಿಸಲಿ ಎಂದು ಸವಾಲು ಹಾಕಿದರು.
ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರು ಸಾವರ್ಕರ್ ಅಂಚೆ ಚೀಟಿ ಬಿಡುಗಡೆ ಮಾಡಿದ್ದಾರೆ, ಸಾಕ್ಷ್ಯ ಚಿತ್ರ ಬಿಡುಗಡೆ ಮಾಡಿದ್ದಾರೆ. ಈ ಬಗ್ಗೆ ಕಾಂಗ್ರೆಸ್ ಮುಖಂಡರ ಏನು ಹೇಳುತ್ತಾರೆ ಎಂದರು.