

ಧಾರವಾಡ: ಮಹದಾಯಿ ವಿಚಾರದಲ್ಲಿ ಕಾಂಗ್ರೆಸ್ ನಿಲುವು ಕರ್ನಾಟಕಕ್ಕೆ ಮಾರಕವಾಗಿದೆ. ಕಾಂಗ್ರೆಸ್ ಪಕ್ಷ ನಾಟಕ ಮಾಡುತ್ತಿದ್ದು, ಇಬ್ಬಗೆ ನೀತಿ ಅನುಸರಿಸುತ್ತಿದೆ ಎಂಬುದು ಕೆಪಿಸಿಸಿ ಮಾಜಿ ಅಧ್ಯಕ್ಷ ದಿನೇಶ ಗುಂಡೂರವ್ ಹೇಳಿಕೆಯಿಂದ ಸ್ಪಷ್ಟವಾಗಿದೆ ಎಂದು ಸಚಿವ ಜಗದೀಶ ಶೆಟ್ಟರ್ ಕೋಪದಿಂದ ಹೇಳಿದರು.
ನಗರದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕರ್ನಾಟಕದಲ್ಲಿ ನಮ್ಮ ಪರ, ಗೋವಾದಲ್ಲಿ ಅವರ ಪರ ಮಾತನಾಡುವ ಮೂಲಕ ಹೋರಾಟ ಮಾಡಲು ರಾಜ್ಯದ ಕಾಂಗ್ರೆಸ್ ಗೋವಾಕ್ಕೆ ಕುಮ್ಮಕ್ಕು ನೀಡುತ್ತಿದೆ. ಈ ಯೋಜನೆ ಅನುಷ್ಠಾನ ಆಗದಂತೆ ಗೋವಾದವರನ್ನು ರಾಜ್ಯದ ಕಾಂಗ್ರೆಸ್ಸಿಗರು ಛೂ ಬಿಡುತ್ತಿದ್ದಾರೆ. ಬಿಜೆಪಿ, ಕಾಂಗ್ರೆಸ್ ಒಂದಾದರೆ ಕೆಲ ಗಂಟೆಗಳಲ್ಲೇ ಈ ಯೋಜನೆ ಅನುಷ್ಠಾನಕ್ಕೆ ಬರುವಂತೆ ಮಾಡಬಹುದು ಎಂದರು.
ಮಹದಾಯಿ ಕುರಿತು ನ್ಯಾಯಾಲಯದಲ್ಲಿ ವಿವಾದ ಬಗೆಹರಿದಿದೆ. ಆದಾಗ್ಯೂ ಕೊನೇ ಹಂತದಲ್ಲಿ ಈ ರೀತಿ ಅಡ್ಡಗಾಲು ಹಾಕುವ ಪ್ರವೃತ್ತಿ ತೋರುತ್ತಿರುವ ಕಾಂಗ್ರೆಸ್ ಕೀಳುಮಟ್ಟದ ರಾಜಕಾರಣ ಮಾಡುತ್ತಿದೆ. ರಾಜ್ಯದ ವಿರುದ್ಧ ದಿನೇಶ ಗುಂಡೂರಾವ್ ನೀಡಿರುವ ಹೇಳಿಕೆಗೆ ಕಾಂಗ್ರೆಸ್ ಮುಖಂಡರಾದ ಸಿದ್ದರಾಮಯ್ಯ, ಡಿ.ಕೆ. ಶಿವಕುಮಾರ ಹಾಗೂ ಮಹದಾಯಿ ಬಗ್ಗೆ ಮಾತನಾಡುವ ಎಚ್.ಕೆ. ಪಾಟೀಲ ಸ್ಪಷ್ಟೀಕರಣ ನೀಡಿ ತಮ್ಮ ನಿಲುವು ತಿಳಿಸಬೇಕು. ಇದಲ್ಲದೆ ದಿನೇಶ ಗುಂಡೂರಾವ್ ರಾಜ್ಯದ ಜನತೆಯ ಕ್ಷಮೆ ಕೇಳಬೇಕು ಎಂದು ಆಗ್ರಹಿಸಿದರು.
ಬೆಳಗಾವಿ ಲೋಕಸಭಾ ಉಪಚುನಾವಣೆ ಕುರಿತ ಪ್ರಶ್ನೆಗೆ ಉತ್ತರಿಸಿದ ಶೆಟ್ಟರ್, ಇನ್ನೂ ಉಪಚುನಾವಣೆ ದಿನಾಂಕವೇ ನಿಗದಿಯಾಗಿಲ್ಲ. ಹೀಗಾಗಿ ಅಭ್ಯರ್ಥಿ ಆಯ್ಕೆ ಕುರಿತು ಪಕ್ಷದಲ್ಲಿ ಯಾವುದೇ ಚರ್ಚೆ ನಡೆದಿಲ್ಲ. ನನ್ನ ಕುಟುಂಬದ ಸದಸ್ಯರಿಗೆ ಅವಕಾಶ ನೀಡುವಂತೆ ಒತ್ತಡ ಹಾಕುತ್ತಿದ್ದೇನೆ ಎಂಬ ಮಾತಿನಲ್ಲಿ ಅರ್ಥವಿಲ್ಲ. ಇದು ಕೇವಲ ಊಹಾಪೋಹ. ಈ ಬಗ್ಗೆ ನಾನು ಯಾರ ಬಳಿಯೂ ಪ್ರಭಾವ ಬೀರಿಲ್ಲ ಎಂದು ಸ್ಪಷ್ಟಪಡಿಸಿದರು.
ಅತಿವೃಷ್ಟಿಯಿಂದ ಜಿಲ್ಲೆಯಲ್ಲಿ ಆಗಿರುವ ಬೆಳೆ ಹಾನಿ ಕುರಿತು ಪೂರ್ಣ ಸಮೀಕ್ಷೆ ನಡೆಸಿ ಪರಿಹಾರ ಒದಗಿಸಲು ಸೂಚಿಸಲಾಗಿದೆ. ನಗರ ಹಾಗೂ ಗ್ರಾಮೀಣದಲ್ಲಿ ರಸ್ತೆಗಳು ಹಾಳಾಗಿದ್ದು, ಈ ಕುರಿತು ಸದ್ಯದಲ್ಲೇ ಅಧಿಕಾರಿಗಳ ಸಭೆ ನಡೆಸಿ ರ್ಚಚಿಸಲಾಗುವುದು. ರಾಜ್ಯದಲ್ಲಿ ಕರೊನಾ ಹಾವಳಿ ತೀವ್ರ ಇಳಿಮುಖವಾಗಿದ್ದು, ಜಿಲ್ಲೆಯಲ್ಲೂ ನಿತ್ಯ 50ಕ್ಕಿಂತ ಕಡಿಮೆ ಪ್ರಕರಣಗಳು ಪತ್ತೆಯಾಗುತ್ತಿವೆ. ಆದರೆ ಜನರು ಮಾತ್ರ ಕಡ್ಡಾಯವಾಗಿ ಮಾಸ್ಕ್ ಹಾಕುವುದು, ಸ್ಯಾನಿಟೈಸರ್ ಬಳಕೆ ಹಾಗೂ ಪರಸ್ಪರ ಅಂತರ ಕಾಪಾಡಿಕೊಳ್ಳುವ ಮೂಲಕ ಸಂಪೂರ್ಣ ಕಡಿಮೆಯಾಗಲು ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.