

ಹುಬ್ಬಳ್ಳಿ: ಹಿಂದು ಎಂದರೆ ಅಶ್ಲೀಲ ಎಂದು ಅರ್ಥ ಕಲ್ಪಿಸಿರುವ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಹೇಳಿಕೆಯು ಅವರ ಅಜ್ಞಾನವನ್ನು ತೋರಿಸುತ್ತದೆ. ಕಾಂಗ್ರೆಸ್ಗೆ ಹಿಂದು ಶಬ್ದದ ಬಗ್ಗೆ ಅಲರ್ಜಿ ಇದೆಯಿದೆ ಎಂಬುದು ಇದು ದೃಢಪಡಿಸುತ್ತದೆ ಎಂದು ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಹೇಳಿದರು.
ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸತೀಶ ಜಾರಕಿಹೊಳಿ ಸಾಮಾನ್ಯ ಕಾರ್ಯ ಕರ್ತರಲ್ಲ. ಪಕ್ಷ ಕಾರ್ಯಾಧ್ಯಕ್ಷ ಸ್ಥಾನದಲ್ಲಿದ್ದಾರೆ. ಪಕ್ಷದಲ್ಲಿ ಯಾರಾದರೂ ಹಿಂದು ಧರ್ಮ ಹಾಗೂ ಹಿಂದುಗಳನ್ನು ಟೀಕಿಸಿ ಬಳಿಕ ವೈಯಕ್ತಿಕ ಹೇಳಿಕೆ ಎಂದು ಪಕ್ಷದ ಮುಖಂಡರು ನುಣುಚಿಕೊಳ್ಳುತ್ತಾರೆ. ಹೀಗೆ ಮಾಡುವ ಮೂಲಕ ಅಲ್ಪ ಅಸಂಖ್ಯಾತರನ್ನು ಓಲೈಸಿಕೊಳ್ಳುವುದು ಕಾಂಗ್ರೆಸ್ ಮುಖಂಡರ ಕಾರ್ಯತಂತ್ರವಾಗಿದೆ ಎಂದರು.
ಒಂದು ಕಡೆ ರಾಹುಲ ಗಾಂಧಿ ತಾನು ಹಿಂದೂ ಬ್ರಾಹ್ಮಣ ಎಂದು ಜನಿವಾರ ತೋರಿಸುತ್ತಾರೆ. ಸಿದ್ದರಾಮಯ್ಯ, ಡಿ.ಕೆ. ಶಿವಕುಮಾರ ತಾವು ಸಹ ಹಿಂದು ಎಂದು ಹೇಳುತ್ತಾರೆ. ಇನ್ನೊಂದು ಕಡೆ ಪಕ್ಷದ ಮುಖಂಡರು ಹಿಂದು ಧರ್ಮ ಹಾಗೂ ಆರ್ಎಸ್ಎಸ್ ವಿರುದ್ಧ ಹೇಳಿಕೆ ನೀಡುತ್ತಾರೆ. ಜಾರಕಿಹೊಳಿ ಹೇಳಿಕೆಯಿಂದ ಹಿಂದುಗಳ ಭಾವನೆಗೆ ಧಕ್ಕೆಯಾಗಿದೆ. ಹೀಗಾಗಿ ಅವರ ಮೇಲೆ ಕಾಂಗ್ರೆಸ್ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಕಾಂಗ್ರೆಸ್ನಿಂದ ಅಲ್ಪಸಂಖ್ಯಾತರಿಗೆ ಯಾವುದೇ ಪ್ರಯೋಜನವಾಗಿಲ್ಲ. ತಮ್ಮನ್ನು ವೋಟ್ ಬ್ಯಾಂಕ್ ಆಗಿ ಉಪಯೋಗಿಸಿಕೊಳ್ಳುತ್ತಿದ್ದಾರೆ ಎಂಬುದು ಅಲ್ಪಸಂಖ್ಯಾತರಿಗೆ ಈಗಾಗಲೇ ಗೊತ್ತಾಗಿದೆ. ದಿನದಿಂದ ದಿನಕ್ಕೆ ಕಾಂಗ್ರೆಸ್ ಶೂನ್ಯ ಆಗುತ್ತಿದೆ ಎಂದು ಟೀಕಿಸಿದರು.