ಕಾಂಗ್ರೆಸ್​ ಪ್ರತಿಜ್ಞಾ ದಿವಸ ಯಶಸ್ಸಿಗೆ ಸಿದ್ಧತೆ

26sirsi5- manjunath bhandari
Published on

ಶಿರಸಿ: ಕಾಂಗ್ರೆಸ್​ನ ಪ್ರತಿಜ್ಞಾ ದಿವಸದ ಯಶಸ್ಸಿಗೆ ಉತ್ತರ ಕನ್ನಡ ಜಿಲ್ಲೆಯ 14 ಬ್ಲಾಕ್​ಗಳಲ್ಲಿ 14 ಸಂಯೋಜಕರನ್ನು ನೇಮಿಸಿ, ತಳಮಟ್ಟದಲ್ಲಿ ಕಾರ್ಯಕರ್ತರನ್ನು ಸಂಘಟಿಸಲಾಗುತ್ತಿದೆ ಎಂದು ಕೆಪಿಸಿಸಿ ಮಾಜಿ ಉಪಾಧ್ಯಕ್ಷ ಮಂಜುನಾಥ ಭಂಡಾರಿ ಹೇಳಿದರು.

ನಗರದ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ ಹಾಗೂ ಕಾರ್ಯಾಧ್ಯಕ್ಷರ ಪದಗ್ರಹಣ ಸಮಾರಂಭ ಜುಲೈ 2ರಂದು ಬೆಂಗಳೂರಿನಲ್ಲಿ ನಡೆಯಲಿದೆ. ಅಂದು ಲಕ್ಷಾಂತರ ಕಾರ್ಯಕರ್ತರು ಪಕ್ಷವನ್ನು ಇನ್ನಷ್ಟು ಗಟ್ಟಿಯಾಗಿ ಕಟ್ಟುತ್ತೇವೆ ಎಂದು ಪ್ರತಿಜ್ಞೆ ಮಾಡಲಿದ್ದಾರೆ. ಈ ಪ್ರತಿಜ್ಞಾ ದಿವಸವನ್ನು ಜಿಲ್ಲೆ ವತಿಯಿಂದ ಬಲಪಡಿಸಲು ಈಗಾಗಲೇ ಗ್ರಾಮ ಪಂಚಾಯಿತಿ ಮಟ್ಟದ ಕಾರ್ಯಕರ್ತರನ್ನು ಸಂಘಟಿಸುವ ಕಾರ್ಯ ಆರಂಭವಾಗಿದೆ. ಪ್ರತಿ ಬ್ಲಾಕ್​ಗೆ

ಕೆಪಿಸಿಸಿ ಜವಾಬ್ದಾರಿ ಹೊತ್ತ ಪ್ರಮುಖರನ್ನು ನೇಮಿಸಿ ಕಾರ್ಯಪ್ರವೃತ್ತಗೊಳಿಸಲಾಗಿದೆ. ಎಲ್ಲ ಬ್ಲಾಕ್​ನಿಂದ ಸಾವಿರಾರು ಕಾರ್ಯಕರ್ತರು ಅಂದು ಪಕ್ಷ ಬಲವರ್ಧನೆಗೆ ಪ್ರತಿಜ್ಞೆ ಮಾಡಲಿದ್ದಾರೆ ಎಂದು ತಿಳಿಸಿದರು.

ಪ್ರತಿ ಹಳ್ಳಿ, ಬೂತ್ ಮಟ್ಟದಲ್ಲಿ ಎಲ್ಲರೂ ಕಾರ್ಯಕ್ರಮ ವೀಕ್ಷಿಸಲು ನೇರಪ್ರಸಾರದ ವ್ಯವಸ್ಥೆ ಮಾಡಲಾಗಿದೆ. ಕಾರ್ಯಕರ್ತನ ಧ್ವನಿಯೇ ರಾಜ್ಯಾಧ್ಯಕ್ಷರ ಧ್ವನಿಯಾಗಿರುತ್ತದೆ ಎಂಬ ಡಿಕೆಶಿ ಮಾತಿನಂತೆ ಕಾರ್ಯಕರ್ತರ ಸಂಪೂರ್ಣ ಬೆಂಬಲದೊಂದಿಗೆ ಮುಂದಿನ ದಿನಗಳಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರಲಿದೆ. ಈ ಕಾರ್ಯಕ್ರಮ ಯಶಸ್ವಿಯಾಗಲು ಪ್ರತಿಯೊಬ್ಬರ ಸಹಕಾರ ಅಗತ್ಯ ಎಂದರು. ಈ ಹಿಂದೆ ಜಿಲ್ಲೆಯಲ್ಲಿ ಭದ್ರವಾಗಿದ್ದ ಕಾಂಗ್ರೆಸ್​ನಲ್ಲಿ ಸಣ್ಣ ಸಣ್ಣ ಬಿರುಕಾಗಿದೆ. ಹೀಗಾಗಿ ಕಾಂಗ್ರೆಸ್ ಅಭ್ಯರ್ಥಿಗಳಿಗೆ ಗೆಲುವು ದೂರವಾಗುತ್ತಿದೆ. ಮುಂದಿನ ದಿನಗಳಲ್ಲಿ ಈ ಎಲ್ಲ ಗೊಂದಲಗಳನ್ನು ಬಗೆಹರಿಸಿ ಪಕ್ಷವನ್ನು ಅಧಿಕಾರಕ್ಕೆ ತರಲಾಗುವುದು ಎಂದು ಮಂಜುನಾಥ ಭಂಡಾರಿ ಹೇಳಿದರು.

ಕಾಂಗ್ರೆಸ್ ಜಿಲ್ಲಾಧ್ಯಕ್ಷ ಭೀಮಣ್ಣ ನಾಯ್ಕ, ಮಾಜಿ ಶಾಸಕಿ ಶಾರದಾ ಶೆಟ್ಟಿ, ಕೆಪಿಸಿಸಿ ಸಂಯೋಜಕ ರಾಜನಂದಿನಿ ಕಾಗೋಡ, ವೆರೋನಿಕಾ ಕರೋಲಿನಾ, ಶ್ಯಾಮಲಾ ಭಂಡಾರಿ, ಸುನೀತಾ ಶೆಟ್ಟಿ, ಸುಷ್ಮಾ ರೆಡ್ಡಿ, ನವೀನಚಂದ್ರ ಶೆಟ್ಟಿ, ಜಿ.ಡಿ. ಘೊರ್ಪಡೆ, ಸುರೇಶ ಸಚಣೂರ, ರಾಮಪ್ಪ ಉಳ್ಳಾಗಡ್ಡಿ, ನಿಜಾಮ್ ಪೌಜದಾರ್, ಶ್ರೀನಿವಾಸ ಹಾಲಳ್ಳಿ, ಶಿವಯೋಗಿ ಹಿರೇಮಠ, ಶೋಯೆಬ್ ಅಹಮ್ಮದ್, ವಿ.ಎಸ್. ಆರಾಧ್ಯ ಇತರರು ಇದ್ದರು. ಇದೇ ವೇಳೆ ಚೀನಾ ಗಡಿಯಲ್ಲಿ ಇತ್ತೀಚೆಗೆ ಹುತಾತ್ಮರಾದ ಯೋಧರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net