ಕಾಂಗ್ರೆಸ್ಸಿನಿಂದ ರಾಜ್ಯದ ಬೊಕ್ಕಸ ಲೂಟಿ

DSCN9142--0001
Published on

ಚಿತ್ರದುರ್ಗ: ರಾಜ್ಯದ ಬೊಕ್ಕಸ ಲೂಟಿಯಾಗಿದ್ದರೂ ಮುಖ್ಯಮಂತ್ರಿ, ಸಚಿವರು ಬಾಯಿ ಬಿಡುತ್ತಿಲ್ಲ ಎಂದು ಮಾಜಿ ಡಿಸಿಎಂ ಗೋವಿಂದ ಎಂ.ಕಾರಜೋಳ ದೂರಿದರು.
ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕಾಂಗ್ರೆಸ್ ರಾಜ್ಯದಲ್ಲಿ ಅಧಿಕಾರಕ್ಕೆ ಬಂದ ಬಳಿಕ ನಿರಂತರವಾಗಿ ಖಜಾನೆ ಲೂಟಿ ನಡೆಯುತ್ತಿದೆ ಎಂದು ಆರೋಪಿಸಿದರು.
ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ ಹಣದ ಹಗಲು ದರೋಡೆಯಾಗಿದೆ. ಚುನಾವಣೆ ವೆಚ್ಚಕ್ಕೆಂದು ಆಂಧ್ರಪ್ರದೇಶ ಮತ್ತು ತೆಲಂಗಾಣಕ್ಕೆ 187 ಕೋಟಿ ರೂ. ಹೋಗಿದೆ. ಆತ್ಮಹತ್ಯೆ ಮಾಡಿಕೊಂಡಿರುವ ನಿಗಮದ ಅಧಿಕಾರಿ ಚಂದ್ರಶೇಖರ್ ಅವರು ತಮ್ಮ ಡೆತ್‌ನೋಟ್‌ನಲ್ಲಿ ಉಪಖಾತೆ ತೆರೆಯಲು ಸಚಿವರು ಹಾಗೂ ಎಂಡಿ ಅವರು ಮೌಖಿಕವಾಗಿ ಆದೇಶಿಸಿದ್ದರೆಂದು ಸ್ಪಷ್ಟವಾಗಿ ಉಲ್ಲೇಖಿಸಿದ್ದಾರೆ ಎಂದರು.
ರಾಜ್ಯ ಹುಜೂರ್ ಖಜಾನೆಯಿಂದಲೂ ಹಣ ವರ್ಗಾವಣೆಯಾಗಿದ್ದು, ಈ ಖಜಾನೆ ಮುಖ್ಯಮಂತ್ರಿ ನಿಬಾಯಿಸುತ್ತಿರುವ ಹಣಕಾಸು ಇಲಾಖೆಗೆ ಸೇರಿದೆ. ಆದ್ದರಿಂದ ಈ ಸರ್ಕಾರಕ್ಕೆ ಅಧಿಕಾರದಲ್ಲಿ ಮುಂದುವರಿಯುವ ಯಾವುದೇ ಹಕ್ಕಿಲ್ಲ. ಆದರೆ, ಎಸ್‌ಐಟಿ, ಸಿಒಡಿ ತನಿಖೆಗಳ ಹೆಸರಲ್ಲಿ ಹಗರಣವನ್ನು ಮುಚ್ಚಿಹಾಕಲು ಪ್ರಯತ್ನಿಸುತ್ತಿದೆ ಎಂದರು.
ದಾವಣಗೆರೆಯಲ್ಲಿ ಗುತ್ತಿಗೆದಾರ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. 80 ಲಕ್ಷ ರೂ. ಬಿಲ್ ಪಾವತಿಗೆ ಕಮಿಷನ್ ಕೊಡುವಂತೆ ಒತ್ತಾಯಿಸಲಾಗಿದೆ. ಈ ಹಿಂದೆ ಗುತ್ತಿಗೆದಾರ ಆತ್ಮಹತ್ಯೆ ಪ್ರಕರಣದಲ್ಲಿ ಅಂದಿನ ಸಚಿವ ಕೆ.ಎಸ್.ಈಶ್ವರಪ್ಪ ವಿರುದ್ಧ ಕೊಲೆ ಮೊಕದ್ದಮೆ ದಾಖಲಿಸಬೇಕೆಂದು ತಾವು ಸದನದಲ್ಲಿ ಹೇಳಿದ್ದೀರಿ ಎಂದು ಸಿದ್ದರಾಮಯ್ಯ ಅವರಿಗೆ ನೆನಪಿಸಿದ ಕಾರಜೋಳ, ನಿಮ್ಮ ಮೌಲ್ಯಾಧಾರೀತ ರಾಜಕಾರಣ ಎಲ್ಲಿ ಹೋಯಿತೆಂದು ಎಂದು ಪ್ರಶ್ನಿಸಿದರು.
ವಿಧಾನ ಪರಿಷತ್ ಸದಸ್ಯ ಕೆ.ಎಸ್.ನವೀನ್ ಮಾತನಾಡಿ, ಸಿದ್ದರಾಮಯ್ಯ ಸದಾ ಶೋಷಿತರ ಪರವಾಗಿದ್ದೇನೆ ಎಂದು ಹೇಳುತ್ತಾರೆ. ಆದರೆ ಪರಿಶಿಷ್ಟ ಸಮುದಾಯದ ಅಭಿವೃದ್ಧಿಗೆ ಬಳಕೆ ಆಗಬೇಕಿದ್ದ ಈ ಹಣದ ದುರ್ಬಳಕೆ ಆಗಿದೆ ಎಂದರು.
ಪಕ್ಷದ ಜಿಲ್ಲಾಧ್ಯಕ್ಷ ಎ.ಮುರಳಿ, ಎಸ್‌ಟಿ ಮೋರ್ಚಾದ ಜಿಲ್ಲಾಧ್ಯಕ್ಷ ತಿಪ್ಪೇಸ್ವಾಮಿ, ಸುರೇಶ್ ಸಿದ್ದಾಪುರ, ಸಂಪತ್‌ಕುಮಾರ್, ಮಾಧುರಿ ಗಿರೀಶ್, ಕಲ್ಲೇಶಯ್ಯ, ನವೀನ್ ಚಾಲುಕ್ಯ, ನಾಗರಾಜ್ ಬೇದ್ರೆ, ತಿಪ್ಪೇಸ್ವಾಮಿ ಛಲವಾದಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net