

ಮೈಸೂರು: ಬಿಜೆಪಿಯ ಕೆಲ ಮಹಾನ್ ನಾಯಕರು ಹಾಗೂ ಕಾಂಗ್ರೆಸ್‌ನ ನಡುವೆ ಹೊಂದಾಣಿಕೆ ರಾಜಕಾರಣ ನಡೆಯುತ್ತಿದೆ. ಹಾಗಾಗಿ ಹಗರಣಗಳ ತನಿಖೆ ನಡೆಸುವ ಗೋಜಿಗೆ ಯಾರೂ ಹೋಗುತ್ತಿಲ್ಲ ಎಂದು ಸಂಸದ ಪ್ರತಾಪಸಿಂಹ ವಾಗ್ದಾಳಿ ನಡೆಸಿದರು.
ನಗರದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿ, ಸಿದ್ದರಾಮಯ್ಯ ವಿರುದ್ಧ ರೀಡೂ, ಅರ್ಕಾವತಿ ಡಿನೋಟಿಫೀಕೇಷನ್, ಕೆಂಪಣ್ಣ ಆಯೋಗ ವರದಿ ಇದೆ ಎಂದು ಬಿ.ಎಸ್.ಯಡಿಯೂರಪ್ಪ, ಬಸವರಾಜ ಬೊಮ್ಮಾಯಿ ಅವರು ಮುಖ್ಯಮಂತ್ರಿ ಆಗಿದ್ದಾಗ ಅಬ್ಬರಿಸುತ್ತಿದ್ದರು. ನಮ್ಮ ಬುಟ್ಟಿಯಲ್ಲಿಯೂ ಹಾವಿದೆ ಎಂದು ಬುಸುಗುಟ್ಟಿದ್ದರು. ಆದರೆ ಯಾವತ್ತೂ ಹಾವನ್ನು ಹೊರಗೆ ಬಿಡಲೇ ಇಲ್ಲ. ವಿಧಾನಸಭೆ ಹೊರ-ಒಳಗೂ ಈ ಬಗ್ಗೆ ಸಮರ್ಥವಾಗಿ ಮಂಡನೆ ಮಾಡಲಿಲ್ಲ ಎಂದು ಸ್ವಪಕ್ಷದ ನಾಯಕರ ವಿರುದ್ಧವೇ ಅಸಮಾಧಾನ ಹೊರ ಹಾಕಿದರು.
ಪ್ರತಿಪಕ್ಷದ ನಾಯಕರಾಗಿದ್ದ ಸಿದ್ದರಾಮಯ್ಯ ಸಹ ಪಿಎಸ್‌ಐ, ಉಪನ್ಯಾಸಕರ ನೇಮಕದಲ್ಲಿ ಅಕ್ರಮ, ಬಿಟ್‌ಕಾಯನ್, ಗುತ್ತಿಗೆದಾರ ಕೆಂಪಣ್ಣ ಅವರ ಪತ್ರದ ಮೇಲೆ ಶೇ.40 ಕಮಿಷನ್ ಸರ್ಕಾರ ಎಂದು ದೂರಿದ್ದರು. ಆದರೆ ಅಧಿಕಾರಕ್ಕೆ ಬಂದು ಒಂದು ತಿಂಗಳು ಕಳೆಯುತ್ತಿದ್ದರೂ ಈ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಚಕಾರ ಎತ್ತುತ್ತಿಲ್ಲ. ಇದನ್ನು ಗಮನಿಸಿದರೆ ಎರಡು ಪಕ್ಷದಲ್ಲಿಯೂ ಹೊಂದಾಣಿಕೆ ರಾಜಕಾರಣ ನಡೆಯುತ್ತಿದೆ ಎನಿಸುತ್ತಿದೆ ಎಂದು ಆರೋಪಿಸಿದರು.
ನಿಮ್ಮ ವಿರುದ್ಧ ಅವರು, ಅವರ ವಿರುದ್ದ ನೀವು ಸಮಯ ಬಂದಾಗ ಮಾತ್ರ ಟೀಕೆ ಮಾಡಿ ಕೊಳ್ಳುತ್ತೀರಾ? ಇದೊಂದು ರೀತಿಯಲ್ಲಿ ನನಗೆ ತುರಿಕೆ ಆದಾಗ ನೀನು ನನ್ನ ಬೆನ್ನು ಕೆರಿ, ನಿನಗೆ ತುರಿಕೆ ಆದಾಗ ನಾನು ಬೆನ್ನು ಕೆರಿತೀನಿ ಅನ್ನೋ ರೀತಿ ನಿಮ್ಮ ಒಪ್ಪಂದ ನಾ ಎಂದು ಖಾರವಾಗಿ ಪ್ರಶ್ನಿಸಿದರು.
ಕಾಂಟ್ರಾೃಕ್ಟೃ್ ಮಾಡದ ಕೆಂಪಣ್ಣನ ಬರೆದ ಪತ್ರ ಇಟ್ಟುಕೊಂಡು ಕಾಂಗ್ರೆಸ್ ನಾಯಕರು ಊರಿಗೆಲ್ಲ ತಮಟೆ ಹೊಡೆದರು. ಬಿಜೆಪಿ ಅಧಿಕಾರದಲ್ಲಿ ಇದ್ದಾಗ ಆರೋಪಗಳ ಸುರಿಮಳೆಗರೆದಿದ್ದ ಸಿದ್ದರಾಮಯ್ಯ ಅವರು, ಬಿಜೆಪಿಯ ಕೆಲ ನಾಯಕರ ಜತೆ ಹೊಂದಾಣಿಕೆ ಇಲ್ಲ ಎಂದಾದರೆ ನೀವು ಮಾಡಿರುವ ಆರೋಪಗಳ ಕುರಿತು ಸೂಕ್ತ ತನಿಖೆ ನಡೆಸಲು ಆದೇಶ ಮಾಡಿ ಎಂದು ಸವಾಲು ಹಾಕಿದರು.
ಬಿಜೆಪಿಯ ಕೆಲ ಅತಿರಥ, ಮಹಾರಥರು ಸಿದ್ದರಾಮಯ್ಯ ವಿರುದ್ಧ ಮಾತಾಡದೆ ಇರಬಹುದು. ಇನ್ನೂ ಕೆಲವರು ಶಾಮೀಲು ಆಗಿರಬಹುದು. ಆದರೆ ಬಿಜೆಪಿ ಕಾರ್ಯಕರ್ತರು ಸೋತಿಲ್ಲ, ನಿಮ್ಮ ಜತೆ ಯಾವುತ್ತೂ ಅವರು ಶಾಮೀಲಾಗಿಲ್ಲ. ನಿಮ್ಮ ವಿರುದ್ಧ ಗ್ಯಾರಂಟಿಗಳು, ವಿದ್ಯುತ್ ದರ ಏರಿಕೆ ಸೇರಿದಂತೆ ಇನ್ನಿತರ ಜನವಿರೋಧಿ ವಿಷಯಗಳ ಕುರಿತು ಹೋರಾಟ ನಡೆಸಿ ಜನಾಂದೋಲನಾ ರೂಪಿಸಲಾಗುವುದು ಎಂದು ಕಾಂಗ್ರೆಸ್ ವಿರುದ್ಧ ಹರಿಹಾಯ್ದರು.
ಎಷ್ಟೆ ಕಷ್ಟವಾದರೂ ಗ್ಯಾರಂಟಿ ಜಾರಿ ಮಾಡಲಾಗುವುದು ಎಂದು ಸಿದ್ದರಾಮಯ್ಯ ಹೇಳುತ್ತಾರೆ. ಆದರೆ ಅದಕ್ಕೆ ಬೇಕಾದ ಹಣದ ಕುರಿತು ಹೇಳುವುದಿಲ್ಲ. ಗೃಹಜ್ಯೋತಿ ಹೆಸರಿನಲ್ಲಿ ಉಚಿತ ವಿದ್ಯುತ್ ಎಂದು ಹೇಳಿ ಮತ್ತೊಂದೆಡೆ ಯದ್ವಾತದ್ವಾ ವಿದ್ಯುತ್ ದರ ಏರಿಕೆ ಮಾಡಿ ಜನರ ಸುಲಿಗೆ ಮಾಡಿ ಉಚಿತ ಯೋಜನೆ ಜಾರಿ ಮಾಡುವುದು ಕಾಂಗ್ರೆಸ್ ಸಂಸ್ಕೃತಿನಾ ಎಂದು ಕಿಡಿಕಾರಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಸಚಿವ ಎಂ.ಬಿ. ಪಾಟೀಲ್ ತಮ್ಮ ಸ್ವಂತ ಆಸ್ತಿ ಮಾರಿ ಉಚಿತ ಗ್ಯಾರಂಟಿ ನೀಡುತ್ತಾರಾ?. ಉಚಿತ ಗ್ಯಾರಂಟಿ ಯೋಜನೆಗೆ ಸಂಪನ್ಮೂಲ ಕ್ರೋಡೀಕರಣ ಹೇಗೆ ಅಂತಾ ಕೇಳಿದರೆ ಪ್ರಶ್ನೆ ಕೇಳಿದವರನ್ನೇ ಮನುವಾದಿಗಳು ಅಂದರೆ ಏನರ್ಥ?. ಐದು ವರ್ಷದ ನಂತರ ನಿಮಗೆ ರಾಜಕೀಯ ಭವಿಷ್ಯ ಇಲ್ಲ. ಆದರೆ ಕರ್ನಾಟಕಕ್ಕೆ ಭವಿಷ್ಯ ಇರುತ್ತದೆ. ಅದಕ್ಕೆ ಕಲ್ಲು ಹಾಕಬೇಡಿ ಎಂದರು.
ಜನರಿಗೆ ಅಸಮಾಧಾನ ಇದ್ದ ಕಾರಣ ಜನ ಬಿಜೆಪಿ ತಿರಸ್ಕರಿಸಿದ್ದಾರೆ. ನಿಮ್ಮ ಗ್ಯಾರಂಟಿ ನೋಡಿ ಜನ ನಿಮಗೆ ಮತ ಹಾಕಿದ್ದಾರೆ. ಕೆಲ ಮುಖಂಡರಿಂದ ಬಿಜೆಪಿ ಮಣ್ಣು ತಿಂದಿದ್ದೂ ಆಗಿದೆ. ನೀವು ಈಗ ಮಣ್ಣು ತಿನ್ನುತ್ತಿರಾ? ಸುಮ್ಮನೆ ಬಿಜೆಪಿ, ಮನುವಾದ, ಆರ್‌ಎಸ್‌ಎಸ್ ಅಂತಾ ವಿಷಯಾಂತರ ಮಾಡಬೇಡಿ. ರಾಜ್ಯದ ಹಣಕಾಸು ಸ್ಥಿತಿ ಬಗ್ಗೆ ಶ್ವೇತಪತ್ರ ಹೊರಡಿಸಿ. ರಾಜ್ಯದ ಯಾವ ಸಿಎಂ ಎಷ್ಟು ಸಾಲ ಮಾಡಿದ್ದಾರೆ ಎಂಬುದನ್ನು ಅಧಿಕೃತವಾಗಿ ಹೇಳಿ ಎಂದು ಆಗ್ರಹಿಸಿದರು.
ವಿದ್ಯುತ್ ಬಿಲ್ ಏರಿಕೆ ಮಾಡಿದ್ದು ಬಿಜೆಪಿ ಸರ್ಕಾರ ಎಂಬ ಹೇಳಿಕೆ ನೀಡುವ ಕಾಂಗ್ರೆಸ್, ಕೆಇಆರ್‌ಸಿ ದರ ಏರಿಕೆಗೆ ಶಿಫಾರಸು ಮಾಡಿದೆ. ಅದನ್ನು ತಡೆಯೋ, ತಿರಸ್ಕರಿಸೋ ಹಕ್ಕು ರಾಜ್ಯ ಸರ್ಕಾರಕ್ಕೆ ಇದೆ ಎನ್ನುವುದನ್ನು ಮರೆತಿದ್ದಾರೆ. ಹಿಂದಿನ ಸರ್ಕಾರ ಮಾಡಿದ್ದ ಗುತ್ತಿಗೆದಾರರ ಹಣ ಬಿಡುಗಡೆ ಆದೇಶಕ್ಕೆ ತಡೆ ಹಾಕುತ್ತೀರಿ. ಆದರೆ ವಿದ್ಯುತ್ ಬಿಲ್ ಆದೇಶಕ್ಕೆ ಯಾಕೆ ತಡೆ ಹಾಕಲ್ಲ?. ಎಲ್ಲಿಂದ ನಿಮಗೆ ಕಮಾಯಿ ಆಗುತ್ತದೆ? ಎಲ್ಲಿಂದ ನಿಮಗೆ ವ್ಯಾಪಾರ ಆಗುತ್ತದೆ? ಆ ವಿಚಾರದ ಬಗ್ಗೆ ಮಾತ್ರ ನಿಮ್ಮ ಆಸಕ್ತಿನಾ?. ಗೋ ಹತ್ಯೆ ನಿಷೇಧ, ಮತಾಂತರ ನಿಷೇಧ ಕಾಯ್ದೆ ಜಾರಿ ಸೇರಿದಂತೆ ಇನ್ನಿತರ ಕಾಯ್ದೆ ಕುರಿತು ಮಾತನಾಡಿ, ರಾಜ್ಯದ ಜನರ ದಾರಿ ತಪ್ಪಿಸಬೇಡಿ ಎಂದು ಕಿಡಿಕಾರಿದರು.
ಆರಂಭದಲ್ಲಿದ್ದ ಬೆಂಗಳೂರು-ಮೈಸೂರು ಹೆದ್ದಾರಿ ಟೋಲ್ನಲ್ಲಿ ಫಾಸ್ಟ್‌ಟ್ಯಾಗ್ ಸಮಸ್ಯೆ ಈಗಿಲ್ಲ. ಫಾಸ್ಟ್ಟ್ಯಾಗ್ ಇರದೆ ಇದ್ದರೆ ಡಬಲ್ ಚಾರ್ಜ್ ಕಟ್ಟುವುದು ಕಡ್ಡಾಯ. ಇಡೀ ದೇಶದಲ್ಲಿ ಆರ್ಥಿಕ ವರ್ಷ ಶುರುವಾದಾಗ ಟೋಲ್ ಹೆಚ್ಚಳ ಸಹಜ. ಈ ಹೆದ್ದಾರಿಗೆ ಏಪ್ರಿಲ್ನಲ್ಲಿ ಟೋಲ್ ಹೆಚ್ಚಳ ಆಗಬೇಕಿತ್ತು. ಈಗ ಶೇ. 22ರಷ್ಟು ಏರಿಕೆ ಮಾಡಲಾಗಿದೆ ಎಂದು ಟೋಲ್‌ದರ ಏರಿಕೆ ಸಮರ್ಥಿಸಿಕೊಂಡರು.