ಕಾಂಗ್ರೆಸ್‌ನಿಂದ ಸುಳ್ಳಿನ ಕಾರ್ಡ್ ವಿತರಣೆ

SRP_06-02jpg
Published on

ಶ್ರೀರಂಗಪಟ್ಟಣ: ರಾಜ್ಯದಲ್ಲಿ ಕಾಂಗ್ರೆಸ್ ಜನರಿಗೆ ಸುಳ್ಳಿನ ಕಾರ್ಡ್ ಕೊಡುತ್ತಿದೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ವ್ಯಂಗ್ಯವಾಡಿದರು.
ಪಟ್ಟಣದಲ್ಲಿ ವಿಜಯ ಸಂಕಲ್ಪ ರಥಯಾತ್ರೆ ಸಂದರ್ಭ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಡಬಲ್ ಇಂಜಿನ್ ಸರ್ಕಾರದ ರಿಪೋರ್ಟ್ ಕಾರ್ಡನ್ನು ಜನರ ಮುಂದಿಡುತ್ತಿದ್ದೇವೆ. ನಿರ್ಧಾರ ಮತದಾರರಿಗೇ ಬಿಟ್ಟಿದ್ದು ಎಂದು ಅವರು ಹೇಳಿದರು.


ರಾಜಸ್ಥಾನದಲ್ಲಿ ಕಾಂಗ್ರೆಸ್ ಸರ್ಕಾರ ಆಡಳಿತಕ್ಕೆ ಬಂದ 24 ಗಂಟೆಯೊಳಗೆ ರೈತರ ಸಾಲಮನ್ನಾ ಮಾಡುವುದಾಗಿ ರಾಹುಲ್ ಗಾಂಧಿ ಹೇಳಿದ್ದರು. ಆದರೆ ಸರ್ಕಾರ ಬಂದು 4 ವರ್ಷವಾದರೂ ಸಾಲ ಮನ್ನಾ ಆಗಿಲ್ಲ. ಅದು ಹೋಗಲಿ, ಬಡ್ಡಿಯೂ ಮನ್ನಾ ಆಗಿಲ್ಲ ಎಂದು ಟೀಕಿಸಿದರು.


ಮಂಡ್ಯ ಜಿಲ್ಲೆಯಲ್ಲಿ ರಾಜಕೀಯ ಪರಿವರ್ತನೆ ಗಾಳಿ ಬೀಸುತ್ತಿದೆ. ಜಿಲ್ಲೆಯ 7 ಕ್ಷೇತ್ರಗಳಲ್ಲೂ ಬಿಜೆಪಿ ಪ್ರಬಲ ಪೈಪೋಟಿ ನೀಡಿ ವಿಜಯ ಸಾಧಿಸಲಿದೆ. ಮಂಡ್ಯದ ಹೆಸರು ಹೇಳಿಕೊಂಡು ರಾಜಕಾರಣ ಮಾಡಿದವರು ಯಾವ ಅಭಿವೃದ್ಧಿಯನ್ನೂ ಮಾಡಲಿಲ್ಲ ಎಂದು ಆರೋಪಿಸಿದರು.


ರೋಡ್ ಶೋ: ಪಟ್ಟಣದ ಐತಿಹಾಸಿಕ ಶ್ರೀ ರಂಗನಾಥಸ್ವಾಮಿ ದೇವಾಲಯದ ಮುಂಭಾಗದಿಂದ ಆರಂಭವಾದ ರೋಡ್ ಶೋದಲ್ಲಿ ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ, ಕೇಂದ್ರ ಸಚಿವ ಇಂದ್ರಪಾಲ್ ಗುರ್ಜಾರ್, ಮಾಜಿ ಸಚಿವ ಈಶ್ವರಪ್ಪ, ಕೆ.ಗೋಪಾಲಯ್ಯ, ಸಂಸದ ಪ್ರತಾಪ್ ಸಿಂಹ, ಭಾಗವಹಿಸಿದ್ದರು. ರಾಷ್ಟ್ರೀಯ ಹೆದ್ದಾರಿಯ ಕುವೆಂಪು ವೃತ್ತದ ವರೆಗೂ ನಡೆದ ರೋಡ್ ಶೋದಲ್ಲಿ ರಾಜ್ಯ ರೈತ ಮೋರ್ಚಾ ಉಪಾಧ್ಯಕ್ಷ ಕೆ.ಎಸ್.ನಂಜುಂಡೇಗೌಡ, ಕಾರ್ಯಕಾರಿಣಿ ಸದಸ್ಯ ಡಾ.ಸಿದ್ದರಾಮಯ್ಯ, ಜಿಲ್ಲಾಧ್ಯಕ್ಷ ಸಿ.ಪಿ.ಉಮೇಶ್, ಉಪಾಧ್ಯಕ್ಷ ಶ್ರೀಧರ್ ಹಾಗೂ ಮಂಡಲ ಅಧ್ಯಕ್ಷ ಪೀಹಳ್ಳಿ ರಮೇಶ್ ಮತ್ತು ಸಾವಿರಾರು ಕಾರ್ಯಕರ್ತರು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net