

ಗುಂಡ್ಲುಪೇಟೆ: ಕಳೆದ 70 ವರ್ಷಗಳಿಂದ ದಲಿತ ಹಿಂದುಳಿದ ವರ್ಗಗಳ ಮತಗಳಿಂದ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಇತಿಹಾಸವನ್ನು ತಿರುಚುವ ಮೂಲಕ ಶೋಷಿತ ವರ್ಗಗಳನ್ನು ವಂಚಿಸುತ್ತಾ ಬಂದಿದ್ದು, ಈ ಬಗ್ಗೆ ಜಾಗೃತಿ ಮೂಡಿಸಲಾಗುತ್ತಿದೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಸಿ.ಎಸ್.ನಿರಂಜನಕುಮಾರ್ ಹೇಳಿದರು.
ಗುರುವಾರ ಪಟ್ಟಣದ ಸಿಎಂಎಸ್ ಕಲಾಮಂದಿರದಲ್ಲಿ ಬಿಜೆಪಿ ವತಿಯಿಂದ ಆಯೋಜಿಸಿದ್ದ ‘ಕಾಂಗ್ರೆಸ್ ಸುಡುವ ಮನೆ ಎಚ್ಚರ’ ಎಂದು ಬಾಬಾ ಸಾಹೇಬರು ಏಕೆ ಹೇಳಿದ್ದರು ಎಂಬ ಬಗ್ಗೆ ಚರ್ಚಾಗೋಷ್ಠಿಯಲ್ಲಿ ಅವರು ಮಾತನಾಡಿದರು.
ಅಂಬೇಡ್ಕರ್ ಬದುಕಿದ್ದಾಗ ತುಂಬ ತೊಂದರೆ ನೀಡಿದ್ದ ಕಾಂಗ್ರೆಸ್ ಅವರನ್ನು ಚುನಾವಣೆಯಲ್ಲಿ ಸೋಲಿಸುವ ಮೂಲಕ ಅವಮಾನಿಸಿತ್ತು. ಅವರ ಮರಣಾನಂತರ ಶವಸಂಸ್ಕಾರಕ್ಕೂ ಸ್ಥಳ ನೀಡದೆ ಕಿರುಕುಳ ನೀಡಿತ್ತು. ಆದರೆ ಚುನಾವಣೆಯಲ್ಲಿ ದಲಿತರ ಮತ ಪಡೆಯುವ ಸಲುವಾಗಿ ಅಂಬೇಡ್ಕರ್ ಹೆಸರು ಬಳಸಿಕೊಳ್ಳುತ್ತಿದೆ.
ರಾಜ್ಯ ಸರ್ಕಾರ ದಲಿತರ ಅಭಿವೃದ್ಧಿಗೆ ಮೀಸಲಿಟ್ಟಿದ್ದ ಅನುದಾನವನ್ನು ಗ್ಯಾರಂಟಿಗಳಿಗೆ ಬಳಕೆ ಮಾಡಿಕೊಂಡು ವಂಚಿಸಿದೆ. ಸ್ಥಳೀಯ ಕಾಂಗ್ರೆಸ್ ಶಾಸಕರೂ ಸಹ ತಮ್ಮ ಕ್ರಷರಿಗೆ ಬೇಕಾದ ದಾರಿ ಮಾಡಿಕೊಳ್ಳಲು ದಲಿತರ ಉಳುಮೆ ಮಾಡುತ್ತಿದ್ದ ಜಮೀನನ್ನು ಅತಿಕ್ರಮಿಸಿಕೊಂಡಿದ್ದಾರೆ. ಬೆಂಡಗಳ್ಳಿಯಲ್ಲಿ ಅಂಬೇಡ್ಕರ್ ಭವನ ಉದ್ಘಾಟನೆ ಸಂದರ್ಭದಲ್ಲಿಯೂ ದಲಿತ ವಿರೋಧಿ ನಡೆ ಅನುಸರಿಸಿದ್ದರು. ಈ ಬಗ್ಗೆ ಬಿಜೆಪಿ ಜಾಗೃತಿ ಮೂಡಿಸುವ ಅಭಿಯಾನ ಕೈಗೊಂಡಿದೆ ಎಂದು ಹೇಳಿದರು.
ಬಿಜೆಪಿ ರಾಜ್ಯ ವಿಚಾರಗೋಷ್ಠಿಯ ಸಂಚಾಲಕ ಜಗದೀಶ್ ಹಿರೇಮನಿ, ಡಾ.ನವೀನ್ ಮೌರ್ಯ ಮಾತನಾಡಿದರು. ಈ ಸಂದರ್ಭದಲ್ಲಿ ಬಿಜೆಪಿ ಮಂಡಲಾಧ್ಯಕ್ಷ ಸಿ.ಮಹದೇವಪ್ರಸಾದ್, ಮಾಜಿ ಅಧ್ಯಕ್ಷ ಎಲ್.ಸುರೇಶ್, ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಎಸ್.ರಾಮಚಂದ್ರ, ನೂರೊಂದುಶೆಟ್ಟಿ, ಎಸ್.ಬಾಲರಾಜು, ಮೈಸೂರು ಮಾಜಿ ಮೇಯರ್ ಶಿವಕುಮಾರ್, ಪಿಕಾರ್ಡ್ ಬ್ಯಾಂಕ್ ಮಾಜಿ ಅಧ್ಯಕ್ಷ ಎಸ್.ಎಂ.ಮಲ್ಲಿಕಾರ್ಜುನ ಸೇರಿದಂತೆ ಹಲವರು ಇದ್ದರು.