

ಚಾಮರಾಜನಗರ: ರೈತ ಸಂಘದ ಮುಖಂಡ ಹೊನ್ನೂರು ಪ್ರಕಾಶ್ ವಿರುದ್ಧ ದೂರು ನೀಡುವ ಮೂಲಕ ಕಾಂಗ್ರೆಸ್ ಮುಖಂಡರು ರೈತರ ಹೋರಾಟವನ್ನು ಹತ್ತಿಕ್ಕಲು ಮುಂದಾಗಿದ್ದಾರೆ ಎಂದು ರೈತ ಸಂಘ ಹಾಗೂ ಹಸಿರು ಸೇನೆ ಸದಸ್ಯರು ಕಿಡಿಕಾರಿದರು.
ನಗರದ ತಾಲೂಕು ಕಚೇರಿಯಲ್ಲಿ ರೈತ ಸಂಘದ ಹೊನ್ನೂರು ಪ್ರಕಾಶ್ ವಿರುದ್ಧ ದೂರು ದಾಖಲಿಸಿರುವುದನ್ನು ಖಂಡಿಸಿ ತಹಸೀಲ್ದಾರ್ ಗಿರಿಜಾ ಅವರ ಮೂಲಕ ಸಿಎಂಗೆ ಮನವಿ ಸಲ್ಲಿಸಿ ಮಾತನಾಡಿದರು.
ಚಾಮುಲ್‌ನಲ್ಲಿ ಐಸ್‌ಕ್ರೀಂ ಘಟಕ ನಿರ್ಮಾಣ ಖಂಡಿಸಿ ಇತ್ತೀಚೆಗೆ ರೈತ ಸಂಘಟನೆಗಳು ಹಾಗೂ ಹಾಲು ಉತ್ಪಾದಕ ಸಹಕಾರ ಸಂಘಗಳ ವತಿಯಿಂದ ನಡೆದ ಪ್ರತಿಭಟನೆ ನಡೆಸಲಾಗಿತ್ತು. ಈ ವೇಳೆ ಸಿಎಂ ಸಿದ್ದರಾಮಯ್ಯ ವಿರುದ್ಧ ಹೊನ್ನೂರು ಪ್ರಕಾಶ್ ಅವರು ಅವಹೇಳನಕಾರಿಯಾಗಿ ಮಾತನಾಡಿದ್ದಾರೆ ಎಂದು ಆರೋಪಿಸಿ ಕಾಂಗ್ರೆಸ್ ಕಾರ್ಯಕರ್ತರು ದೂರು ನೀಡಿರುವುದು ಖಂಡನೀಯ ಎಂದರು.
ಹೊನ್ನೂರು ಪ್ರಕಾಶ್ ಅವರು ಮುಖ್ಯಮಂತ್ರಿಗಳ ವಿರುದ್ಧ ಯಾವುದೇ ಅವಹೇಳನಕಾರಿಯಾಗಿ ಮಾತನಾಡಿಲ್ಲ. ಆದರೆ, ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಚಾಮುಲ್ಅನ್ನು ರಕ್ಷಣೆ ಮಾಡಿಕೊಳ್ಳಲು ಹಾಗೂ ರೈತಸಂಘದ ಚಳವಳಿಯನ್ನು ಹತ್ತಿಕ್ಕಲು ಸುಳ್ಳು ದೂರನ್ನು ದಾಖಲಿಸಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ರೈತ ಸಂಘದ ಮಹದೇವಸ್ವಾಮಿ, ನಟರಾಜು, ಚಿಕ್ಕಬಸಪ್ಪ, ಮಹೇಶ್‌ಕುಮಾರ್, ದೊರೆಸ್ವಾಮಿ, ಅಖಿಲ ಭಾರತ ವೀರಶೈವ ಲಿಂಗಾಯಿತ ಮಹಾಸಭಾದ ಜಿಲ್ಲಾಧ್ಯಕ್ಷ ಮೂಡ್ಲುಪುರ ನಂದೀಶ್ ಹಾಗೂ ಇತರರು ಹಾಜರಿದ್ದರು.