ಕಾಂಗ್ರೆಸ್‌ನಿಂದ ರೈತ ವಿರೋಧಿ ನೀತಿ, ಸೆ.8ರಂದು ಸೇಡಂನಲ್ಲಿ ಬೃಹತ್​ ಪ್ರತಿಭಟನೆ; ತೆಲ್ಕೂರ

RAJKUMAR PATIL TELKUR
Published on

ಸೇಡಂ: ರಾಜ್ಯ ಸರ್ಕಾರ ಗ್ಯಾರಂಟಿ ಯೋಜನೆ ಜಾರಿ ಮಾಡುವ ತರಾತುರಿಯಲ್ಲಿ ರೈತರಿಗೆ ಅನುಕೂಲವಾಗಿದ್ದ ಹಲವು ಯೋಜನೆಗಳನ್ನು ಹಿಂದಕ್ಕೆ ಪಡೆದಿದೆ. ಇದು ರೈತ ವಿರೋಧಿ ಸರ್ಕಾರ ಎಂದು ಬಿಜೆಪಿ ರಾಜ್ಯ ವಕ್ತಾರ, ಮಾಜಿ ಶಾಸಕ ರಾಜಕುಮಾರ ಪಾಟೀಲ್ ತೆಲ್ಕೂರ ದೂರಿದರು.

ಸರ್ಕಾರದ ವಿರುದ್ಧ ರೈತ ಮೋರ್ಚಾ ರಾಜ್ಯಾದ್ಯಂತ ಹೋರಾಟ ನಡೆಸುತ್ತಿದ್ದು, ಜಿಲ್ಲೆಯ ಪ್ರತಿ ವಿಧಾನಸಭಾ ಕ್ಷೇತ್ರಗಳಲ್ಲಿ ಬೃಹತ್ ಪ್ರತಿಭಟನೆ ನಡೆಯಲಿದೆ. ಸರ್ಕಾರದ ನೀತಿ ಖಂಡಿಸಿ ಸೆ.8ರಂದು ಬೆಳಗ್ಗೆ 10ಕ್ಕೆ ಕೊತ್ತಲ ಬಸವೇಶ್ವರ ದೇವಾಲಯದಿಂದ ಎಸಿ ಕಚೇರಿವರೆಗೆ ಬೃಹತ್ ರ‍್ಯಾಲಿ ನಡೆಸಲಾಗುತ್ತಿದೆ. ಸಾವಿರಾರು ಸಂಖ್ಯೆಯಲ್ಲಿ ಕಾರ್ಯಕರ್ತರು ಹಾಗೂ ರೈತರು ಪಾಲ್ಗೊಳ್ಳಲಿದ್ದಾರೆ ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಕೇಂದ್ರ ಸರ್ಕಾರ ಕೃಷಿ ಸಮ್ಮಾನ ನಿಧಿಯಡಿ ವಾರ್ಷಿಕ 6 ಸಾವಿರ ರೂ. ಜತೆಗೆ ರಾಜ್ಯವೂ 4 ಸಾವಿರ ರೂ. ಸೇರಿಸಿ ಒಟ್ಟು 10 ಸಾವಿರ ನೀಡಲಾಗುತ್ತಿತ್ತು. ಇದೀಗ ಕಾಂಗ್ರೆಸ್ ಸರ್ಕಾರ 4 ಸಾವಿರ ರೂ. ಕಡಿತಗೊಳಿಸಿದೆ. ಕಳೆದ ತಿಂಗಳು ಸಮಯಕ್ಕೆ ಸರಿಯಾಗಿ ಮಳೆಯಾಗದೆ ಹೆಸರು, ಉದ್ದು ಹಾಳಾಗಿದೆ. ಇದರಿಂದ ರೈತರು ಸಂಕಷ್ಟದಲ್ಲಿದ್ದಾರೆ. ಆದರೆ ಇಲ್ಲಿವರೆಗೆ ಯಾರೊಬ್ಬರೂ ಸಮಸ್ಯೆಗೆ ಸ್ಪಂದಿಸುವ ಕೆಲಸ ಮಾಡಿಲ್ಲ. ಮಳೆ ಕೊರತೆ ಇರುವ ಪ್ರದೇಶಗಳನ್ನು ಬರಪೀಡಿತ ಎಂದು ಘೋಷಣೆ ಮಾಡಿ, ಪರಿಹಾರ ವಿತರಿಸಬೇಕು ಎಂದು ಆಗ್ರಹಿಸಿದರು.

ಪ್ರಮುಖರಾದ ವೀರಾರೆಡ್ಡಿ ಬಟಗೇರಾ, ರವಿ ಭಂಟನಹಳ್ಳಿ, ಓಂಪ್ರಕಾಶ ಪಾಟೀಲ್ ತರನಳ್ಳಿ, ಬಸವರಾಜ ಕೋಸಗಿ, ರಾಘವೇಂದ್ರ ಮೆಕಾನಿಕ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net