ಕಾಂಗ್ರೆಸ್‌ನಿಂದ ಕ್ಷೇತ್ರದ ಸಮಗ್ರ ಅಭಿವೃದ್ಧಿ

26 HANUR 1
ಅಣಗಳ್ಳಿದೊಡ್ಡಿ ಗ್ರಾಮದಲ್ಲಿ ಜೆಡಿಎಸ್ ಮುಖಂಡರು ಶಾಸಕ ಆರ್.ನರೇಂದ್ರ ಸಮ್ಮುಖದಲ್ಲಿ ಕಾಂಗ್ರೆಸ್‌ಗೆ ಸೇರ್ಪಡೆಯಾದರು.
Published on

ಹನೂರು: ಕ್ಷೇತ್ರದಲ್ಲಿ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಹಲವು ಶಾಶ್ವತ ಯೋಜನೆಗಳು ಅನುಷ್ಠಾನಗೊಂಡಿದ್ದು, ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಾಂಗ್ರೆಸ್‌ನಿಂದ ಮಾತ್ರ ಸಾಧ್ಯ ಎಂದು ಶಾಸಕ ಆರ್.ನರೇಂದ್ರ ತಿಳಿಸಿದರು.

ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಅಣಗಳ್ಳಿದೊಡ್ಡಿ ಗ್ರಾಮದಲ್ಲಿ ಬುಧವಾರ ಆಯೋಜಿಸಿದ್ದ ಪಕ್ಷ ಸೇರ್ಪಡೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿ, ದೇಶದಲ್ಲಿ ಕಾಂಗ್ರೆಸ್ ಸರ್ಕಾರ ಉತ್ತಮ ಆಡಳಿತ ನೀಡುವುದರ ಜತೆಗೆ ಹಲವು ಜನಪರ ಯೋಜನೆಗಳನ್ನು ಜಾರಿಗೊಳಿಸಿದೆ. ಇತ್ತ ರಾಜ್ಯದಲ್ಲೂ ಇಂತಹ ಕಾರ್ಯವಾಗಿದೆ. ಆದ್ದರಿಂದ ಕಾಂಗ್ರೆಸ್ ಜನ ಮನ್ನಣೆ ಗಳಿಸಿದೆ ಎಂದರು.

ಸಿದ್ದರಾಮಯ್ಯ ಅವರ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ರಾಜ್ಯದಲ್ಲಿ ಅನ್ನಭಾಗ್ಯ, ಪಶುಭಾಗ್ಯ, ಕೃಷಿಭಾಗ್ಯ, ಆರೋಗ್ಯ ಭಾಗ್ಯ, ವಿದ್ಯಾಸಿರಿ, ಇಂದಿರಾ ಕ್ಯಾಂಟೀನ್ ಸ್ಥಾಪನೆ ಸೇರಿದಂತೆ ಇನ್ನು ಅನೇಕ ಯೋಜನೆಗಳನ್ನು ಜಾರಿಗೊಳಿಸಿದ್ದು, ಬಡವರು, ಹಿಂದುಳಿದವರು, ಕೃಷಿಕರು, ಮಹಿಳೆಯರು ಹಾಗೂ ಇನ್ನಿತರ ವರ್ಗದ ಜನರಿಗೆ ಹೆಚ್ಚಿನ ಅನುಕೂಲ ಕಲ್ಪಿಸಿ ರಾಜ್ಯದ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಲಾಗಿದೆ. ಅಲ್ಲದೇ ಇದೇ ಅವಧಿಯಲ್ಲಿ ಹನೂರು ಕ್ಷೇತ್ರಕ್ಕೆ ಮೂರೂವರೆ ಸಾವಿರ ಕೋಟಿ ರೂ.ಅನುದಾನ ದೊರಕಿದ್ದು, ಬಹುಗ್ರಾಮ ಕುಡಿಯುವ ನೀರಿನ ಯೋಜನೆ, ಕೆರೆಗಳಿಗೆ ನೀರು ತುಂಬಿಸುವ ಯೋಜನೆ, ಕೆ-ಶಿಪ್ ಯೋಜನೆಯಡಿ ರಸ್ತೆ ಅಭಿವೃದ್ಧಿ, ಶಾಲಾ ಕಾಲೇಜುಗಳ ಸ್ಥಾಪನೆ ಸೇರಿದಂತೆ ಅನೇಕ ಶಾಶ್ವತ ಯೋಜನೆಗಳು ಅನುಷ್ಠಾನಗೊಂಡಿವೆ. ಇದನ್ನು ಮನಗಂಡು ಪಕ್ಷಕ್ಕೆ ಹಲವರು ಸೇರ್ಪಡೆಯಾಗುತ್ತಿರುವುದು ಸಂತಸದ ವಿಷಯ. ಆದ್ದರಿಂದ ಪಕ್ಷದ ಸಂಘಟನೆಗೆ ಹೆಚ್ಚಿನ ಒತ್ತು ನೀಡುವುದರ ಮೂಲಕ ಈ ಬಾರಿಯೂ ಹನೂರಿನಲ್ಲಿ ಕಾಂಗ್ರೆಸ್ ಗೆಲ್ಲಿಸುವಂತೆ ಮನವಿ ಮಾಡಿದರು.

ಜೆಡಿಎಸ್ ಮುಖಂಡರಾದ ಗ್ರಾಮದ ಮಾರಿಮುತ್ತು, ಕುಮಾರ್, ರಾಜೇಂದ್ರ, ಗೋಪಾಲ್, ಮುರುಗೇಶ್, ಮಾದೇಶ್, ಷಣ್ಮುಖ, ತಂಬಿ ಇತರರು ಕಾಂಗ್ರೆಸ್‌ಗೆ ಸೇರ್ಪಡೆಯಾದರು.

ಹನೂರಿನಲ್ಲೂ ಸೇರ್ಪಡೆ: ಪಟ್ಟಣದ ಕಾಂಗ್ರೆಸ್ ಕಚೇರಿಯಲ್ಲೂ ಬುಧವಾರ ಪಟ್ಟಣದ ಜೆಡಿಎಸ್ ಹಾಗೂ ಬಿಜೆಪಿ ಮುಖಂಡರಾದ ಪ್ರಸನ್ನಕುಮಾರ್, ಲಿಂಗರಾಜು, ಸಿದ್ದರಾಜು, ಕುಮಾರ್, ಪ್ರದೀಪ್‌ಕುಮಾರ್, ಗಣೇಶ್‌ಕುಮಾರ್, ಸಿದ್ದಯ್ಯ ಇನ್ನಿತರರು ಶಾಸಕ ಆರ್.ನರೇಂದ್ರ ಸಮ್ಮುಖದಲ್ಲಿ ಕಾಂಗ್ರೆಸ್‌ಗೆ ಸೇರ್ಪಡೆಯಾದರು.

ಚಾಮುಲ್ ನಿರ್ದೇಶಕ ಸಾಹುಲ್ ಆಹಮದ್, ತಾಪಂ ಮಾಜಿ ಸದಸ್ಯ ಜವಾದ್ ಆಹಮದ್, ಜಿಪಂ ಮಾಜಿ ಸದಸ್ಯ ಕೊಪ್ಪಾಳಿ ಮಹದೇವನಾಯ್ಕ, ಪಪಂ ಉಪಾಧ್ಯಕ್ಷ ಗಿರೀಶ್, ಸದಸ್ಯರಾದ ಸಂಪತ್‌ಕುಮಾರ್, ಹರೀಶ್‌ಕುಮಾರ್, ಮುಖಂಡರಾದ ಬಾಬು, ಚೆಲುವರಾಜು, ಶಿವರಾಜು, ಪುಟ್ಟರಾಜು ಮತ್ತಿತರರು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net