

ಕುಶಾಲನಗರ: ಕಾಂಗ್ರೆಸ್ ಶಾಸಕರಿಂದ ಕೊಡಗಿನ ಸಮಗ್ರ ಅಭಿವೃದ್ಧಿಯಾಗಲಿದೆ ಎಂದು ಹೈಕೋರ್ಟ್ ಹಿರಿಯ ವಕೀಲ, ಕಾಂಗ್ರೆಸ್ ಮುಖಂಡ ಎಚ್.ಎಸ್. ಚಂದ್ರಮೌಳಿ ಹೇಳಿದರು.
ಕೊಡಗಿನಲ್ಲಿ ಹೊಸ ಮನ್ವಂತರಕ್ಕೆ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಮುನ್ನುಡಿ ಬರೆದಿದ್ದಾರೆ. 25 ವರ್ಷಗಳ ಬಿಜೆಪಿ ಆಡಳಿತಕ್ಕೆ ಬ್ರೇಕ್ ಹಾಕಿದ್ದಾರೆ ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಕೊಡಗಿನ ಮತದಾರರು ಬದಲಾವಣೆ ಬಯಸಿದ್ದಾರೆ. ಕಾಂಗ್ರೆಸ್ ಪಕ್ಷದ ಬಗ್ಗೆ ಒಲವು ತೋರಿಸುತ್ತಿದ್ದಾರೆ ಎಂಬ ಭವಿಷ್ಯ ನಿಜವಾಗಿದೆ. ಕೊಡಗಿನ ಎರಡು ಕ್ಷೇತ್ರದಲ್ಲಿ ಬಿಜೆಪಿಯ ಹಿರಿಯ ಶಾಸಕರು ಸೋತಿರುವುದು ಸಾಧಾರಣ ವಿಷಯವಲ್ಲ ಎಂದರು.
ಮಡಿಕೇರಿ ಕ್ಷೇತ್ರದಲ್ಲಿ ಗೆದ್ದಿರುವ ಮಂಥರ್ ಗೌಡರಿಂದ ಕ್ಷೇತ್ರದ ಪ್ರಗತಿ ಖಂಡಿತವಾಗಿಯೂ ಸಾಧ್ಯವಿದೆ. ಐದು ವರ್ಷಗಳಲ್ಲಿ ಪ್ರವಾಸೋದ್ಯಮ ಸೇರಿದಂತೆ ಪ್ರತಿಯೊಂದು ಗ್ರಾಮಗಳಿಗೆ ಮೂಲ ಸೌಕರ್ಯ, ಕೊಡಗಿನಲ್ಲಿ ಒಂದು ಸುಸಜ್ಜಿತ ಆಸ್ಪತ್ರೆ, ತಾಲೂಕಿನಾದ್ಯಂತ ಸರ್ಕಾರದ ಕೆಲಸಗಳಿಗೆ ಮಿನಿ ವಿಧಾನ ಸೌಧ, ಆಟದ ಮೈದಾನ, ಗ್ಯಾರಂಟಿ ಕಾರ್ಡ್ ಭರವಸೆಯನ್ನು ಕಾರ್ಯರೂಪಕ್ಕೆ ತರುವ ಬಗ್ಗೆ ಶಾಸಕರಿಗೆ ಸೂಕ್ತ ಮಾಹಿತಿ ನೀಡುವುದು ನಮ್ಮ ಕರ್ತವ್ಯವಾಗಿದೆ ಎಂದರು. ಕಾಂಗ್ರೆಸ್‌ಸರ್ಕಾರದಲ್ಲಿ ಕೊಡಗಿನ ಒಬ್ಬ ಶಾಸಕರು ಸಚಿವರಾಗುವುದು ಖಚಿತ ಎಂದರು.
ಕಾಂಗ್ರೆಸ್ ಪ್ರಮುಖ ಮಂಜುನಾಥ ಗುಂಡೂರಾವ್ ಮಾತನಾಡಿ, ಪ್ರಜ್ಞಾವಂತ ಮತದಾರರು ಈ ಬಾರಿ ನಮ್ಮ ಪಕ್ಷಕ್ಕೆ ಸಂಪೂರ್ಣ ಬಹುಮತ ನೀಡಿದ್ದಾರೆ. ಕೊಡಗಿನ ಅಭಿವೃದ್ಧಿಗೆ ಪಕ್ಷ ರೂಪುರೇಷೆಗಳನ್ನು ಸಿದ್ಧಪಡಿಸಿ ಕಾರ್ಯರೂಪಕ್ಕೆ ತರಲಿದೆ ಎಂದರು. ಗೋಷ್ಠಿಯಲ್ಲಿ ಪಕ್ಷದ ಪ್ರಮುಖರಾದ ಕಾಂತರಾಜ್, ಹರೀಶ್, ಶೇಖರ್ ಇತರರು ಇದ್ದರು.