

ಹಾಸನ: ಹಿಂದಿನಿಂದಲೂ ಕಾಂಗ್ರೆಸ್‌ನಿಂದ ಕುರುಬ ಸಮುದಾಯಕ್ಕೆ ಅನ್ಯಾಯವಾಗಿದ್ದು, ಈ ಬಾರಿಯ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿಸದಂತೆ ಸಮುದಾಯದ ಹಿರಿಯ ಮುಖಂಡ ನವಿಲೆ ಅಣ್ಣಪ್ಪ ಮನವಿ ಮಾಡಿದರು.
ಕಾಂಗ್ರೆಸ್‌ನಿಂದ ಈವರೆಗೂ ನಮಗೆ ಸಿಕ್ಕಿರುವುದು ಶೂನ್ಯಫಲ.ಜಿಲ್ಲೆಯಲ್ಲಿ ಕುರುಬರಿಗೆ ಒಂದು ನಿಗಮ ಮಂಡಳಿ ಅಧ್ಯಕ್ಷ ಸ್ಥಾನವನ್ನೂ ಕೊಡಲಿಲ್ಲ. ಏನಾದರೂ ಮಾಡಿದ್ದರೆ ಉದಾಹರಣೆ ಕೊಡಲಿ ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ಸವಾಲು ಹಾಕಿದರು.
ಹಾಲಿ ಕಾಂಗ್ರೆಸ್ ಅಭ್ಯರ್ಥಿ ಶ್ರೇಯಸ್ ಪಟೇಲ್ ಅವರು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಲಕ್ಷ್ಮಣ್ ಅವರನ್ನು ಹುಡಾ ಅಧ್ಯಕ್ಷರನ್ನಾಗಿ ಮಾಡಿ ಎಂದು ಉಸ್ತುವಾರಿ ಸಚಿವರಿಗೆ ಶಿಫಾರಸು ಪತ್ರ ಕೊಟ್ಟಿದ್ದಾರೆ. ಕುರುಬ ಸಮುದಾಯದ ಯಾರೂ ಕಾಣಲಿಲ್ಲವೇ ಎಂದು ಪ್ರಶ್ನಿಸಿ,ಹೀಗಾಗಿ ಕಾಂಗ್ರೆಸ್ ತಿರಸ್ಕಾರ ಮಾಡಬೇಕು. ಹಾಸನ, ಮಂಡ್ಯ, ಬೆಂಗಳೂರು ಗ್ರಾಮಾಂತರದಲ್ಲಿ ಕಾಂಗ್ರೆಸ್ ಗೆದ್ದರೆ ಡಿ.ಕೆ.ಶಿವಕುಮಾರ್ ಕೈ ಮೇಲಾಗಿ, ಸಿಎಂ ಕುರ್ಚಿಗೆ ಕಂಟಕ ಬರಲಿದೆ. ಹಾಗಾಗಿ ಎನ್ ಡಿ ಎ ಅಭ್ಯರ್ಥಿಗಳನ್ನು ಗೆಲ್ಲಿಸಿ ಎಂದು ಮನವಿ ಮಾಡಿದರು.
ಹೊಳೆನರಸೀಪುರ ತಾಲೂಕು ಅಣ್ಣೇಚಾಕನಹಳ್ಳಿ ದೊಡ್ಡೇಗೌಡರನ್ನು ವಿಧಾನಪರಿಷತ್ ಸದಸ್ಯರನ್ನಾಗಿ ಮಾಡಿದ್ದು ಮಾಜಿ ಪ್ರಧಾನಿ ದೇವೇಗೌಡರು. ಅದೇ ದೊಡ್ಡಗೌಡರನ್ನು ಅಸ್ತ್ರ ಮಾಡಿಕೊಂಡು 1999 ರಲ್ಲಿ ರೇವಣ್ಣ ವಿರುದ್ಧ ನಿಲ್ಲಿಸಿದ್ದ ಪುಟ್ಟಸ್ವಾಮಿಗೌಡರು, 2004 ರಲ್ಲಿ ತಾವೇ ಸ್ಪರ್ಧೆ ಮಾಡುವ ಮೂಲಕ ದೊಡ್ಡೇಗೌಡರನ್ನು ತುಳಿದರು ಎಂದು ಆರೋಪಿಸಿದರು.
ಜಿಲ್ಲೆಯಲ್ಲಿ ಕುರುಬ ಸಮುದಾಯ ಅಂದು ಕಳೆದು ಕೊಂಡ ಶಾಸಕ ಸ್ಥಾನವನ್ನು ಇಂದೂ ಪಡೆಯಲು ಸಾಧ್ಯವಾಗಿಲ್ಲ. ಅಂಥವರ ಮೊಮ್ಮಗ ಆಗಿರುವ ಶ್ರೇಯಸ್ ಪಟೇಲ್ ಅವರಿಗೆ ಕುರುಬ ಸಮುದಾಯ ಮತ ಹಾಕಬಾರದು. ಅಷ್ಟೇ ಅಲ್ಲ, ದೇವೇಗೌಡರು, ಈ.ದೊಡ್ಡೇಗೌಡರನ್ನು 1986ರಲ್ಲಿ ನೇರವಾಗಿ ಎಂಎಲ್‌ಸಿ ಮಾಡಿದ್ದರು. ಮಲ್ನಾಡು ಆಸ್ಪತ್ರೆಯ ಡಾ.ದೊಡ್ಡೇಗೌಡರನ್ನು 10 ವರ್ಷಗಳ ಕಾಲ ಕೆಪಿಎಸ್ಸಿ ಸದಸ್ಯರು ಹಾಗೂ ಅಧ್ಯಕ್ಷರನ್ನಾಗಿ ಮಾಡಿದ್ದರು. ಇದು ದೇವೇಗೌಡರು, ಜೆಡಿಎಸ್ ಕುರುಬ ಸಮಾಜಕ್ಕೆ ನೀಡಿರುವ ಕೊಡುಗೆ ಅಲ್ಲವೆ, ನಮ್ಮ ಸಮುದಾಯದ ಮೇಲೆ ದೇವೇಗೌಡರ ಋಣ ಇದೆ ಎಂದರು.
ಹಾಗೆಯೇ ಬೇಲೂರು ತಾಲೂಕಿನ ಹೇಮಾವತಿ ಮಂಜುನಾಥ್, ಅರಸೀಕೆರೆ ತಾಲೂಕಿನ ಹುಚ್ಚೇಗೌಡರನ್ನು ಜಿಪಂ ಅಧ್ಯಕ್ಷರನ್ನಾಗಿ, ಬಿಳಿ ಚೌಡಯ್ಯ ಅವರನ್ನು ಉಪಾಧ್ಯಕ್ಷರನ್ನಾಗಿ ಜೆಡಿಎಸ್ ಮಾಡಿತ್ತು. ಬಿಜೆಪಿ ನನ್ನನ್ನು ಹುಡಾ ಅಧ್ಯಕ್ಷ ಸ್ಥಾನಕ್ಕೆ ನೇಮಕ ಮಾಡುವ ಮೂಲಕ ಕುರುಬ ಸಮುದಾಯಕ್ಕೆ ಅಧಿಕಾರ, ಸ್ಥಾನಮಾನ ನೀಡಿದ್ದಾರೆ. ಜಿಲ್ಲೆಯ ರಾಜಕೀಯ ಇತಿಹಾಸ ನೋಡಿದರೆ ಕುರುಬ ಸಮುದಾಯಕ್ಕೆ ದೇವೇಗೌಡರ ಕೊಡುಗೆ ಅಪಾರವಾಗಿದೆ. ಹಾಗಾಗಿ ಇಂದು ವೋಟ್ ಬ್ಯಾಂಕ್‌ಗಾಗಿ ಕುರುಬ ಸಮುದಾಯವನ್ನು ಬಳಸಿಕೊಳ್ಳುತ್ತಿರುವ ಕಾಂಗ್ರೆಸ್ ನಾಯಕರಿಗೆ ನಮ್ಮ ಸಮುದಾಯದವರು ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗೆ ಮತ ಹಾಕಬಾರದು ಎಂದು ಮನವಿ ಮಾಡಿದರು.
ಪತ್ರಿಕಾಗೋಷ್ಠಿಯಲ್ಲಿ ಕರ್ನಾಟಕ ಪ್ರದೇಶ ಕುರುಬರ ಸಂಘದ ರಾಜ್ಯ ಉಪಾಧ್ಯಕ್ಷ ಕೆ.ಬಿ. ಕೇಶವಮೂರ್ತಿ, ಮುಖಂಡರಾದ ಡಿ. ಪ್ರಸನ್ನಕುಮಾರ್, ಸಿ.ಆರ್. ಸತೀಶ್, ಅಶೋಕ್, ಜಯಣ್ಣ, ಪುಟ್ಟರಾಜು ಇತರರು ಇದ್ದರು.