

ಬಾಳೆಹೊನ್ನೂರು: ಕಾಂಗ್ರೆಸ್ ಅಲ್ಪಸಂಖ್ಯಾತರ ತುಷ್ಟೀಕರಣದ ಪಕ್ಷವಾಗಿದ್ದು, ಅನ್ಯ ಸಮುದಾಯದ ಪರವಾದ ಸರ್ಕಾರವಾಗಿದೆ ಎಂದು ವಿಶ್ವ ಹಿಂದು ಪರಿಷತ್ ರಾಷ್ಟ್ರೀಯ ಸಹ ಕಾರ್ಯದರ್ಶಿ ಗೋಪಾಲ್‌ಜೀ ಹೇಳಿದರು.
ಮಂಗಳವಾರ ಹುಯಿಗೆರೆ ಶಂಕರ ಭಾರತಿ ಗೋಸೇವಾ ಕೇಂದ್ರದ ನೂತನ ಕಟ್ಟಡಕ್ಕೆ ಗೋವು, ಕರುವನ್ನು ಒಳಗೆ ಬಿಡುವ ಮೂಲಕ ಉದ್ಘಾಟಿಸಿ ಮಾತನಾಡಿ, ಸಿಎಂ ಸಿದ್ದರಾಮಯ್ಯ ಆಡಳಿತದಲ್ಲಿ ರಾಜ್ಯಾದ್ಯಂತ ಅವ್ಯಾಹತವಾಗಿ ಗೋವು ಕಳ್ಳಸಾಗಣೆ, ಹತ್ಯೆ, ಹಿಂದುಗಳ ಮೇಲೆ ದೌರ್ಜನ್ಯ, ಲವ್ ಜಿಹಾದ್ ಮುಂದುವರಿಯುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದರು.
500 ವರ್ಷಗಳ ಸಂಘರ್ಷದ ಬಳಿಕ ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ನಿರ್ಮಾಣಗೊಂಡಿರುವುದು ನಾವು ಹೆಮ್ಮೆಪಡುವ ವಿಚಾರ. 30 ಸಾವಿರಕ್ಕೂ ಹೆಚ್ಚು ಹಿಂದು ದೇವಸ್ಥಾನಗಳನ್ನು ಆಕ್ರಮಣಕಾರಿಗಳು ಧ್ವಂಸ ಮಾಡಿದ್ದು, ಅದರಲ್ಲಿ ಅಯೋಧ್ಯೆಯನ್ನು ವ್ಯಾಪಕ ಜನಾಂದೋಲನ, ಕಾನೂನಿನ ಮೂಲಕ ಕಡೆಗೂ ನಮ್ಮದಾಗಿಸಿಕೊಳ್ಳಲಾಗಿದೆ. ವಿಹಿಂಪ ಕಾಶಿ, ಮಥುರಾ, ಅಯೋಧ್ಯೆಯ ಉಳಿವಿನ ಛಲದ ಹೋರಾಟಕ್ಕೆ ಹಂತಹಂತವಾಗಿ ಜಯ ಲಭಿಸುವ ಕಾಲ ಸನಿಹತವಾಗುತ್ತಿದ್ದು, ಮುಂದೆ ಐತಿಹಾಸಿಕ ಮಥುತಾ, ಕಾಶಿಯನ್ನು ನಮ್ಮದಾಗಿಸಿಕೊಳ್ಳುವ ನಿಟ್ಟಿನಲ್ಲಿ ಹೋರಾಟ ಚುರುಕುಗೊಳ್ಳಲಿದೆ ಎಂದರು.
ಮಲೆನಾಡಿನ ಗ್ರಾಮೀಣ ಪ್ರದೇಶಗಳಲ್ಲಿ ಗೋಶಾಲೆಗಳು ಹೆಚ್ಚಿನ ಪ್ರಮಾಣದಲ್ಲಿ ನಿರ್ಮಾಣಗೊಳ್ಳುವ ಮೂಲಕ ಗೋವು ಸಂರಕ್ಷಣೆಯ ಆಂದೋಲನದಲ್ಲಿ ಹೊಸ ಆತ್ಮವಿಶ್ವಾಸ, ಚೈತನ್ಯ ಹೆಚ್ಚಿಸಿದೆ. ಪ್ರವೀಣ್ ಖಾಂಡ್ಯ ಮತ್ತು ತಂಡ ನಿರ್ವಹಣೆ ಮಾಡುತ್ತಿರುವ ಗೋಸೇವಾ ಕೈಂಕರ್ಯಕ್ಕೆ ಶೃಂಗೇರಿ ಶಾರದಾ ಪೀಠದ ಅನುಗ್ರಹ, ಸಹಕಾರ ದೊರೆತಿದ್ದು, ಅನೇಕ ಕಾರ್ಯಕರ್ತರು ಈ ಸೇವೆಯಲ್ಲಿ ತೊಡಗಿಕೊಂಡಿರುವುದು ಹೆಮ್ಮೆಯ ವಿಚಾರ ಎಂದು ಹೇಳಿದರು.
ಸಾಕಲು ಅಸಹಾಯಕರಾದ ರೈತರು, ಕಸಾಯಿಖಾನೆಗೆ ಸಾಗಿಸುತ್ತಿದ್ದಾಗ ಹಿಡಿದು ರಕ್ಷಿಸಿದ ಗೋವುಗಳಿಗೆ ಆಶ್ರಯ ನೀಡಿ ಪುನರ್ಜನ್ಮ ಕಲ್ಪಿಸುವಲ್ಲಿ ಗೋಸೇವಾ ಕೇಂದ್ರಗಳು ಸಹಕಾರಿಯಾಗಿವೆ. ಸಮಾಜ, ಮಠ, ಮಾನ್ಯಗಳ ಬೆಂಬಲ ಸಿಗದೆ ಇದ್ದಲ್ಲಿ ಇವುಗಳು ಉಳಿಯಲಾರವು. ಪ್ರತಿಯೊಬ್ಬರೂ ಆರ್ಥಿಕ ನೆರವು, ಆಹಾರ, ಮೇವಿನ ರೂಪದಲ್ಲಿ ಧರ್ಮಾಭಿಮಾನಿಗಳು ಗೋಗ್ರಾಸದ ರೂಪದಲ್ಲಿ ದಾನ ನೀಡಬೇಕು ಎಂದು ಮನವಿ ಮಾಡಿದರು.
ದತ್ತಪೀಠದ ವಿವಾದ ಸಂಬಂಧ ಪ್ರತಿಕ್ರಿಯಿಸಿದ ಅವರು, ರಾಮ ಮಂದಿರಕ್ಕೆ ಅಯೋಧ್ಯೆ ಮೀಸಲಿಟ್ಟು, ಮುಸ್ಲಿಮರಿಗೆ ಪ್ರತ್ಯೇಕ ಜಾಗ ನೀಡಿದ ಕ್ರಮವನ್ನೇ ದತ್ತಪೀಠಕ್ಕೂ ಅನ್ವಯಿಸುವಂತೆ ಮಾಡುವ ತೀರ್ಪು ಬಂದಾಗ ಸಮಸ್ಯೆ ಬಗೆಹರಿಯಬಲ್ಲದು ಎಂದರು.
ನೂತನ ಕಟ್ಟಡದ ಉದ್ಘಾಟನೆ ಅಂಗವಾಗಿ ರುದ್ರ, ಶತರುದ್ರ ಹೋಮ ಮುಂತಾದ ಧಾರ್ಮಿಕ ಕಾರ್ಯಗಳು ನಡೆದವು. ಬೆಂಗಳೂರಿನ ಐಎಎಸ್ ಅಧಿಕಾರಿ ವಿಶ್ವನಾಥ್ ಹಿರೇಮಠ್, ವಿಹಿಂಪ ಮುಖಂಡ ದಾವಣಗೆರೆಯ ಮುರಳಿ, ಶಂಕರ ಭಾರತಿ ಗೋಶಾಲೆ ಟ್ರಸ್ಟ್ ಅಧ್ಯಕ್ಷೆ ಶ್ರುತಿ ಪ್ರವೀಣ್, ಉಪಾಧ್ಯಕ್ಷ ಮುರಳೀಧರ್, ಖಜಾಂಚಿ ಪ್ರವೀಣ್ ಖಾಂಡ್ಯ, ಸಾವಿತ್ರಮ್ಮ ಕೇಶವಮೂರ್ತಿ ಇತರರಿದ್ದರು.