

ಹಾಸನ: ಹೇಮಾವತಿ ಜಲಾಶಯದ ನೀರು ಖಾಲಿಯಾಗಲು ಎಚ್.ಡಿ.ರೇವಣ್ಣ ಕಾರಣ ಎಂಬ ಕಾಂಗ್ರೆಸ್‌ನವರ ಆರೋಪದಲ್ಲಿ ಯಾವುದೇ ಹುರುಳಿಲ್ಲ ಎಂದು ಜೆಡಿಎಸ್ ತಾಲ್ಲೂಕು ಅಧ್ಯಕ್ಷ ಎಸ್.ದ್ಯಾವೇಗೌಡ ತಿಳಿಸಿದರು.
ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಜಿಲ್ಲಾ ವಕ್ತಾರ ದೇವರಾಜೇಗೌಡ ಅವರು, ಎಚ್.ಡಿ.ರೇವಣ್ಣ ಅ.9ರಂದು ನೀರು ಹರಿಸಿ, ಜಲಾಶಯ ಖಾಲಿಯಾಗಲು ಕಾರಣರಾಗಿದ್ದಾರೆ ಎಂದು ಮಾಡಿರುವ ಆರೋಪ ಸುಳ್ಳು. ಜನ-ಜಾನುವಾರುಗಳ ಕುಡಿಯುವ ನೀರಿಗಾಗಿ ಕೆರೆಗಳನ್ನು ತುಂಬಿಸಲು ನಾಲೆಗಳಿಗೆ ನೀರು ಹರಿಸುವುದಕ್ಕೆ ಚಾಲನೆ ನೀಡಿರುವುದಕ್ಕೆ ಈ ರೀತಿ ಆರೋಪ ಮಾಡಲಾಗುತ್ತಿದೆ ಎಂದು ಸ್ಪಷ್ಟಪಡಿಸಿದರು.
ಜೂನ್ 27 ರಂದು ಜಿಲ್ಲೆಯಲ್ಲಿ ಹಮ್ಮಿಕೊಂಡಿದ್ದ ರಾಜ್ಯಮಟ್ಟದ ಕೆಂಪೇಗೌಡರ ಜಯಂತಿ ಕಾರ್ಯಕ್ರಮಕ್ಕೆ ಆಗಮಿಸಿದ್ದ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎನ್.ರಾಜಣ್ಣ ಅವರು ಅಂದು ಜಲಾಶಯಕ್ಕೆ ಭೇಟಿ ನೀಡಿ ಹೇಮಾವತಿ ಎಡದಂಡೆ ನಾಲೆ ಮೂಲಕ ತುಮಕೂರಿಗೆ ನೀರು ಹರಿಸಿಕೊಂಡು ಹೋಗಿದ್ದಾರೆ. ಆಗ ಯಾವ ನೀರಾವರಿ ಸಲಹಾ ಸಮಿತಿಯ ಒಪ್ಪಿಗೆ ಪಡೆದುಕೊಂಡು ನೀರು ಬಿಟ್ಟುಕೊಂಡರು? ಆಗ ಏಕಾಏಕಿ ನೀರು ಬಿಟ್ಟುಕೊಂಡಾಗ ಯಾಕೆ ಪ್ರಶ್ನಿಸಲಿಲ್ಲ. ಮಳೆಯ ಕೊರತೆಯಿಂದ ಕೆರೆ-ಕಟ್ಟೆಗಳ ಭರ್ತಿ ಮಾಡಲು ನಾಲೆಗಳಿಗೆ ನೀರು ಹರಿಸಿರುವುದನ್ನೇ ತಪ್ಪು ಎಂದು ಬಿಂಬಿಸಿ ಆರೋಪ ಹೊರಿಸಲಾಗುತ್ತಿದೆ ಎಂದು ಹೇಳಿದರು.