

ಚಿತ್ರದುರ್ಗ: ರಾಜ್ಯದಲ್ಲಿ ಬಿಜೆಪಿಗರ ಆಟ ನಡೆಯುತ್ತಿದೆ. ಆ ಪಕ್ಷದಲ್ಲಿನ ಗಲಾಟೆಗಳನ್ನು ಮುಚ್ಚಿಹಾಕಲು ಸರ್ಕಾರದ ವಿರುದ್ಧ ಆರೋಪಿಸುತ್ತಿದ್ದಾರೆ. ಕಾಂಗ್ರೆಸ್‌ನಲ್ಲಿ ಯಾವ ಬಣಗಳಿಲ್ಲ. ಎಲ್ಲರೂ ಒಗ್ಗಟ್ಟಿನಿಂದ ಇದ್ದೇವೆ ಎಂದು ಇಂಧನ ಸಚಿವ ಕೆ.ಜೆ. ಜಾರ್ಜ್ ಹೇಳಿದರು.
ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿ, ಚುನಾವಣೆ ಗೆಲುವಿಗಾಗಿ ಸುತ್ತಾಡುವ ಪ್ರಧಾನಿ ನರೇಂದ್ರ ಮೋದಿ ಅವರು ಯಾವ ಗ್ಯಾರಂಟಿ ಕೊಟ್ಟಿದ್ದಾರೆ ಎಂದು ಪ್ರಶ್ನಿಸಿದರು.
ಆಡಳಿತ ನಡೆಸುವಲ್ಲಿ ಸಿಎಂ ಸಿದ್ದರಾಮಯ್ಯ ಸಮರ್ಥರಿದ್ದಾರೆ. ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಯಾವುದಕ್ಕೆ ಲಾಯಕ್ ಎಂಬುದು ಎಲ್ಲರಿಗೂ ಗೊತ್ತಿರುವ ವಿಚಾರ. ಪ್ರಸ್ತುತ ಎಂಎಲ್‌ಎ ಆಗಿದ್ದಾರಾ?. ಅಧಿಕಾರದಲ್ಲಿದ್ದಾಗ ಸಚಿವ ಸ್ಥಾನಕ್ಕೆ ಏಕೆ ರಾಜೀನಾಮೆ ಕೊಟ್ಟರು. ರಾಜ್ಯದ ಜನರಿಗೆ ಗ್ಯಾರಂಟಿ ಯೋಜನೆ ನೀಡಲು ಅವರಿಂದ ಸಾಧ್ಯವಾಗಿದೆಯೇ ಎಂದು ವಾಗ್ದಾಳಿ ನಡೆಸಿದರು.
ಗೃಹಜ್ಯೋತಿ ಯೋಜನೆಯಡಿ ಪ್ರತಿ ತಿಂಗಳು ಫಲಾನುಭವಿಗಳಿಗೆ ಶೂನ್ಯ ಬಿಲ್ ರವಾನೆಯಾಗುತ್ತಿದೆ. ಈವರೆಗೂ ಯಾವ ದೂರು ಕೇಳಿಬಂದಿಲ್ಲ. ಇನ್ನಿತರೆ ಗ್ಯಾರಂಟಿ ಯೋಜನೆಗಳು ಅರ್ಹರಿಗೆ ತಲುಪಲು ವಿಳಂಬವಾಗಿದ್ದರೆ, ಸಂಬಂಧಿಸಿದ ಸಚಿವರೇ ಕ್ರಮವಹಿಸಲಿದ್ದಾರೆ ಎಂದರು.