

ಮೈಸೂರು; ಕಾಂಗ್ರೆಸ್‌ನಲ್ಲಿ ಬಣ ರಾಜಕೀಯ ಇಲ್ಲ. ಯಾರಿಗೆ ಅರ್ಹತೆ ಇದೆಯೋ ಅವರಿಗೆ ಮುಂದಿನ ವಿಧಾನಸಭಾ ಚುನಾವಣೆಯ ಟಿಕೆಟ್ ದೊರೆಯಲಿದೆ ಎಂದು ಮಾಜಿ ಮುಖ್ಯಮಂತ್ರಿ, ಹಿರಿಯ ಕಾಂಗ್ರೆಸ್ ಮುಖಂಡ ವೀರಪ್ಪ ಮೊಯ್ಲಿ ಹೇಳಿದರು.
ನಗರದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಮ್ಮಲ್ಲಿ ಸಾವಿರಾರು ಬಣಗಳು ಇವೆ. ಸಣ್ಣ, ಸಣ್ಣ ನದಿಗಳು ಸಮುದ್ರ ಸೇರುತ್ತವೆ. ಸಮುದ್ರ ಸೇರಿದ ಕೂಡಲೇ ಯಾವ ಬಣವೂ ಇರುವುದಿಲ್ಲ. ಕೆಲವು ಸಣ್ಣ, ಸಣ್ಣ ನದಿಗಳು ಹಾರಿ ಹೋಗುತ್ತೆ. ಕಾಂಗ್ರೆಸ್ ಮಹಾಸಾಗರ ಇದ್ದ ಹಾಗೆ ಎಂದು ಸೂಚ್ಯವಾಗಿ ಹೇಳಿದರು.
ನನಗೆ ಯಾವುದೇ ಅಸಮಾಧಾನ ಇಲ್ಲ. ಪಕ್ಷದ ಕೇಂದ್ರಿಯ ಚುನಾವಣೆ ಸಮಿತಿಯಲ್ಲಿ ರಾಜ್ಯದಿಂದ ನಾನೊಬ್ಬನೇ ಸದಸ್ಯ. ಸಕ್ರಿಯವಾಗಿ ಚಟುವಟಿಕೆಯಲ್ಲಿ ಭಾಗಿಯಾಗಿದ್ದೇನೆ ಎಂದರು.
ಸಿ.ಡಿ. ವಿಚಾರದಲ್ಲಿ ಡಿ.ಕೆ ಶಿವಕುಮಾರ್ ಹೆಸರು ಪ್ರಸ್ತಾಪ ವಿಚಾರದ ಕುರಿತು ಪ್ರತಿಕ್ರಿಯಿಸಿದ ಅವರು, ಡಿ.ಕೆ.ಶಿವಕುಮಾರ್ ಸಮರ್ಥವಾಗಿ ಉತ್ತರ ಕೊಟ್ಟಿದ್ದಾರೆ. ಚುನಾವಣೆ ಸಂದರ್ಭದಲ್ಲಿ ಇಂತಹ ಸಿ.ಡಿ.ಗಳು ಸಾಕಷ್ಟು ಬರುತ್ತವೆ. ಸಿ.ಡಿ. ವಿಚಾರ ಇಟ್ಟುಕೊಂಡು ಡಿಕೆಶಿ ಬ್ಲಾೃಕ್‌ಮೇಲ್ ಮಾಡಲ್ಲ. ಬಿಜೆಪಿ ಬ್ಲ್ಯಾಕ್‌ಮೇಲ್ ಮಾಡಬಹುದು. ವೈಯಕ್ತಿಕ ವಿಚಾರವನ್ನು ಸಿಬಿಐಗೆ ಕೊಡಲು ಬರುವುದಿಲ್ಲ ಎಂದರು.
ಟಿಕೆಟ್ ಘೋಷಣೆಯಾಗುವರೆಗೂ ಸಿದ್ದರಾಮಯ್ಯ ಕೂಡ ಆಕಾಂಕ್ಷಿ. ಎಐಸಿಸಿ ಟಿಕೆಟ್ ಘೋಷಣೆ ಮಾಡುವುದಕ್ಕಿಂತ ಮುನ್ನ ಎಲ್ಲರೂ ಆಕಾಂಕ್ಷಿಗಳೇ. ಎರಡು ಕ್ಷೇತ್ರಗಳಿಗೆ ಯಾರೂ ಟಿಕೆಟ್ ಆಕಾಂಕ್ಷಿಗಳಿಲ್ಲ. ಎರಡು ಕ್ಷೇತ್ರಗಳ ಸ್ಪರ್ಧೆ ಬಗ್ಗೆ ಯಾರು ಕೂಡ ಯೋಚನೆ ಮಾಡಿಲ್ಲ ಎಂದು ಮಾಹಿತಿ ನೀಡಿದರು.
ಚುನಾವಣೆ ಪ್ರಣಾಳಿಕೆ ಪ್ರದೇಶವಾರು ಸಿದ್ಧವಾಗುತ್ತಿದೆ. ಡಾ.ಜಿ.ಪರಮೇಶ್ವರ್ ಅವರ ಅಧ್ಯಕ್ಷತೆಯಲ್ಲಿ ಎಲ್ಲವೂ ಚೆನ್ನಾಗಿ ನಡೆಯುತ್ತಿದೆ. ಅವರು ರಾಜೀನಾಮೆ ಕೊಟ್ಟಿಲ್ಲ. ನಾನು ಅವರ ಜತೆಗೆ ಮಾತನಾಡಿದ್ದೇನೆ ಎಂದು ತಿಳಿಸಿದರು.