ಕಾಂಗ್ರೆಸ್‌ನಲ್ಲಿ ಬಂಡಾಯ ಶಮನ: ಮುರುಳಿ ಮೋಹನ್

ಕಾಂಗ್ರೆಸ್‌ನಲ್ಲಿ ಬಂಡಾಯ ಶಮನ: ಮುರುಳಿ ಮೋಹನ್
Published on

ಹಾಸನ : ಸಕಲೇಶಪುರ ಕ್ಷೇತ್ರದಲ್ಲಿ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಗಳಲ್ಲಿ ಉಂಟಾಗಿದ್ದ ಬಂಡಾಯ ಶಮನವಾಗಿದ್ದು, ಎಲ್ಲರನ್ನು ಒಗ್ಗೂಡಿಸಿಕೊಂಡು ಚುನಾವಣೆ ಎದುರಿಸಲಾಗುವುದು ಎಂದು ಕಾಂಗ್ರೆಸ್ ಅಭ್ಯರ್ಥಿ ಮುರುಳಿ ಮೋಹನ್ ತಿಳಿಸಿದರು.

ಏ.19 ರಂದು ನಾಮಪತ್ರ ಸಲ್ಲಿಕೆ ಮಾಡಲಿದ್ದು, ಅಂದು ಎಲ್ಲಾ ವರ್ಗದ, ಧರ್ಮದ ಜನರು ಭಾಗಿಯಾಗಲಿದ್ದಾರೆ. ಕ್ಷೇತ್ರದಿಂದ ಯಾರೆಲ್ಲಾ ಟಿಕೆಟ್ ಆಕಾಂಕ್ಷಿಗಳಾಗಿದ್ದರೋ ಅವರಿಗೆ ಸೂಕ್ತ ಸ್ಥಾನಮಾನ ಕೊಡುವ ಭರವಸೆ ನೀಡಲಾಗಿದೆ ಸೋಮವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.

ನಾನು ಮೊದಲು ಕಾಂಗ್ರೆಸ್‌ನಲ್ಲಿದ್ದೆ. ನಂತರ ಬಿಜೆಪಿ ಸೇರಿ ಮತ್ತೆ ಮಾತೃ ಪಕ್ಷಕ್ಕೆ ಮರಳಿದ್ದೇನೆ. ಹಲವು ವರ್ಷಗಳಿಂದ ಸಕಲೇಶಪುರದಲ್ಲಿ ಸಕ್ರಿಯನಾಗಿ ಕೆಲಸ ಮಾಡಿದ್ದೇನೆ. ನನಗೆ ಯಾವುದೇ ರಾಜಕೀಯ ಹಿನ್ನಲೆ ಇಲ್ಲದಿದ್ದರೂ ಹಿರಿಯರ ಆಶೀರ್ವಾದ ಪಡೆದು ಚುನಾವಣೆ ಎದುರಿಸುತ್ತಿದ್ದೇನೆ. ನಾನು ಮೊದಲಿಂದ ಹೇಗೆ ಇದ್ದೇನೆಯೋ ಈಗಲೂ ಹಾಗೆಯೇ ಇದ್ದೇನೆ, ಮುಂದೆಯೂ ಇರುವುದಾಗಿ ಹೇಳಿದರು.

ಸುಳ್ಳು ಜಾತಿಪ್ರಮಾಣ ಪತ್ರ ಆರೋಪದ ಬಗ್ಗೆ ಪ್ರತಿಕ್ರಿಯಿಸಿ, ನಾನೂ ವಿದ್ಯಾವಂತ, ನನಗೂ ಅರಿವಿದೆ. ಕೆಲವರು ಇಲ್ಲ ಸಲ್ಲದ ಆರೋಪ ಮಾಡಿದ್ದನ್ನು ಕೇಳಿದ್ದೇನೆ, ನಾನು ಓದಿದ್ದು ಆನೆಕಲ್‌ನ ಜಿಗಣಿಯಲ್ಲಿ. ನನ್ನ ಮೇಲೆ ಆರೋಪ ಮಾಡುವವರು ಮೇಲಧಿಕಾರಿಗಳಿಗೆ ದೂರು ನೀಡಬಹುದಿತ್ತು. ನನ್ನ ಅರ್ಜಿಯನ್ನು ವಜಾಗೊಳಿಸಬಹುದಿತ್ತು. ನಾನು ಯಾವುದೇ ತಪ್ಪು ಮಾಡಿಲ್ಲ ಎಂದು ಸ್ಪಷ್ಟಪಡಿಸಿದ ಅವರು, ಪಕ್ಷಕ್ಕಾಗಿ ದುಡಿಯದೆ, ಆರೋಪ ಮಾಡುವುದು ಸರಿಯಲ್ಲ ಎಂದು ತಿರುಗೇಟು ನೀಡಿದರು.

ಆಲೂರು-ಸಕಲೇಶಪುರದಲ್ಲಿ ಆನೆ ಸಮಸ್ಯೆ ಮಿತಿ ಮೀರಿದೆ. ಪಿಹೆಚ್‌ಸಿ ಸೇರಿದಂತೆ ಅನೇಕ ಕಡೆಗಳಲ್ಲಿ ವೈದ್ಯರಿಲ್ಲ. ವಿವಿಧ ಅರ್ಜಿ ವಿಲೇವಾರಿ ಸರಿಯಾಗಿ ಆಗುತ್ತಿಲ್ಲ. ಸರಿಯಾದ ಶಾಲೆ ಇಲ್ಲ, ಕಳೆದ 15 ವರ್ಷ ದಿಂದ ಹಾಲಿ ಶಾಸಕರು ಏನೂ ಮಾಡಿಲ್ಲ ಎಂದು ದೂರಿದರು.

ಈ ಬಾರಿ ಕ್ಷೇತ್ರದಲ್ಲಿ ಈ ಬಾರಿ ಜನ ಬದಲಾವಣೆ ಬಯಸಿದ್ದಾರೆ. ಹಿಂದೆ ಸಿದ್ದರಾಮಯ್ಯ ಅವರು ನೀಡಿದ್ದ ಎಲ್ಲ ಭರವಸೆ ಈಡೇರಿಸಿದ್ದಾರೆ. ಈಗ ನಾಲ್ಕು ಗ್ಯಾರಂಟಿ ಕೊಟ್ಟಿದ್ದಾರೆ. ಈ ಎಲ್ಲಾ ಕಾರಣಗಳಿಂದ ಜನರು ಮುರುಳಿ ಮೋಹನ್ ಪರ ನಿಲ್ಲಿಲಿದ್ದಾರೆ. ನಾನು ಜಯ ಗಳಿಸುವೆ. ಜನರ ವಿಶ್ವಾಸ ಉಳಿಸಿಕೊಳ್ಳುವೆ ಎಲ್ಲರನ್ನೂ ಜೊತೆಯಲ್ಲಿ ಕರೆಕೊಂಡು ಹೋಗುವೆ ಜ್ವಲಂತ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡು ಹಿಡಿಯುವೆ ಎಂದರು.

ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಬೈರಮುಡಿ ಚಂದ್ರು ಮಾತನಾಡಿ, ಮುರುಳಿ ಮೋಹನ್ ಕೆಲಸಗಾರ, ಸಕಲೇಶಪುರ ಕಾಂಗ್ರೆಸ್‌ನಲ್ಲಿ ಸೂಕ್ತ ಅಭ್ಯರ್ಥಿ ಇಲ್ಲದಿದ್ದಾಗ, ಒಳ್ಳೆಯದಾಗಲಿದೆ ಬನ್ನಿ ಎಂದೆ, ಹಾಲಿ ಶಾಸಕರು ಏನೂ ಮಾಡಿಲ್ಲ. ಅಭಿವೃದ್ಧಿಯಲ್ಲಿ ಸಕಲೇಶಪುರ ಹಿಂದಿದೆ ಎಂದು ಆರೋಪಿಸಿದರು.

ಕಾಂಗ್ರೆಸ್ ಜಿಲ್ಲಾ ವಕ್ತಾರ ದೇವರಾಜೇಗೌಡ, ಹಿರಿಯ ಮುಖಂಡ ಹೆಮ್ಮಿಗೆ ಮೋಹನ್, ಅಬ್ದುಲ್ ಸಮದ್, ಮಲ್ಲಿಗೆವಾಳು ದ್ಯಾವಪ್ಪ, ಶಿವಮೂರ್ತಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net