ಕಾಂಗ್ರೆಸ್‌ನ ಪ್ರಸ್ತಾವಗಳನ್ನು ತಿರಸ್ಕರಿಸಲು ಆಗ್ರಹ -ರಾಜ್ಯಪಾಲರಿಗೆ ಶ್ರೀರಾಮಸೇನಾ ಮನವಿ

IMG-20230626-WA0016.jpg
Published on

ದಾವಣಗೆರೆ: ಗೋ ಹತ್ಯೆ ನಿಷೇಧ, ಮತಾಂತರ ನಿಷೇಧ ಕಾಯ್ದೆಗಳನ್ನು ಹಿಂಪಡೆಯುವ ಕಾಂಗ್ರೆಸ್ ಸರ್ಕಾರದ ಧೋರಣೆ ಖಂಡಿಸಿ ಶ್ರೀರಾಮಸೇನಾ ಕರ್ನಾಟಕದ ಜಿಲ್ಲಾ ಘಟಕದ ಪದಾಧಿಕಾರಿಗಳು ಸೋಮವಾರ ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ಮನವಿ ಸಲ್ಲಿಸಿದರು.

ಕಾಂಗ್ರೆಸ್ ಸರ್ಕಾರದ ಮೂರೂ ಪ್ರಸ್ತಾಪಗಳ ಹಿನ್ನೆಲೆಯಲ್ಲಿ ರಾಜ್ಯಪಾಲರು ಮಧ್ಯಪ್ರವೇಶಿಸಿ ಇವನ್ನು ತಿರಸ್ಕರಿಸಬೇಕು ಎಂದು ಆಗ್ರಹಿಸಿ ಅಪರ ಜಿಲ್ಲಾಧಿಕಾರಿ ಪಿ.ಎನ್.ಲೋಕೇಶ್ ಅವರ ಮೂಲಕ ರಾಜ್ಯಪಾಲರಿಗೆ ಮನವಿಪತ್ರ ಅರ್ಪಿಸಿದರು.

ರೈತರ ಬೆನ್ನಲುಬು, ದೇಶದ ಆರ್ಥಿಕ, ಸಾಮಾಜಿಕ, ಧಾರ್ಮಿಕ,ಆರೋಗ್ಯ, ಕೃಷಿ ಮುಂತಾದವುಗಳಿಗೆ ಆಧಾರಸ್ತಂಭವಾದ ಗೋವುಗಳನ್ನು ರಕ್ಷಣೆ, ಪಾಲನೆ ಮಾಡುವುದು ಸರ್ಕಾರದ ಆದ್ಯ ಕರ್ತವ್ಯ ಎಂಬುದನ್ನು ಅರಿತಿದ್ದ ಹಿಂದಿನ ಬಿಜೆಪಿ ಸರ್ಕಾರ ಗೋ ಹತ್ಯಾ ನಿಷೇಧ ಕಾನೂನು ಜಾರಿಗೆ ತಂದಿತ್ತು. ಇದು ಮಠಾಧೀಶರು, ಸಂಘಟನೆಗಳ ಹೋರಾಟದ ಫಲವಾಗಿತ್ತು. ಈಗಿನ ಸರ್ಕಾರ ಕಾಯ್ದೆಯನ್ನೇ ಹಿಂಪಡೆಯಲು ಹೊರಟಿರುವುದು ಸರಿಯಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಆಮಿಷ, ಒತ್ತಾಯದ, ಮೋಸದ ಮತಾಂತರ ವಿರುದ್ಧವೂ ಬಿಜೆಪಿ ಸರ್ಕಾರ ನಿಷೇಧ ಕಾಯ್ದೆ ಜಾರಿ ಮಾಡಿತ್ತು. ಮತಾಂತರ ಮಹಾ ಪಿಡುಗು ದೇಶದ ಸಾಂಸ್ಕೃತಿಕ,ಭೌಗೋಳಿಕ, ಜನಸಂಖ್ಯೆ ಮುಂತಾದ ಅಸಮತೋಲನ ಜತೆಗೆ ಸಂಘರ್ಷಕ್ಕೂ ಕಾರಣವಾಗಿದೆ. ಸಂವಿಧಾನದ ಆಶಯದಂತೆ ಅನುಷ್ಠಾನವಾಗಿದ್ದ ಕಾಯ್ದೆಯ ವಾಪಾಸಿಗೆ ಈಗಿನ ಸರ್ಕಾರ ಮುಂದಾಗಿರುವುದು ಕ್ಷೇಮವಲ್ಲ ಎಂದರು.

ಪಠ್ಯಪುಸ್ತಕದಲ್ಲಿ ದೇಶಭಕ್ತರು, ಸ್ವಾತಂತ್ರೃ ಹೋರಾಟಗಾರರು, ಸಮಾಜ ಸುಧಾರಕರ ಪಠ್ಯ ಕೈಬಿಡುವ ನಿರ್ಧಾರ ದೇಶಕ್ಕಾಗಿ ಪ್ರಾಣಾರ್ಪಣೆ ಮಾಡಿದವರಿಗೆ ಮಾಡುವ ಅವಮಾನವಾಗಿದೆ. ಈ ವಿಚಾರಗಳಲ್ಲಿ ರಾಜ್ಯಪಾಲರು ಮಧ್ಯ ಪ್ರವೇಶಿಸಬೇಕೆಂದು ಆಗ್ರಹಿಸಿದರು.

ಈ ಸಂದರ್ಭದಲ್ಲಿ ಸಂಘಟನೆಯ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪಿ.ಸಾಗರ, ಖಜಾಂಚಿ ಎಂ.ಶ್ರೀಧರ, ಮಾಧ್ಯಮ ಪ್ರಮುಖ ವಿನೋದ್‌ರಾಜ್, ನಗರಾಧ್ಯಕ್ಷ ಬಿ.ಜಿ.ರಾಹುಲ್, ರಮೇಶ್ ಶಿಬಾರ, ರಾಜು ದೊಡ್ಡಮನಿ ಆರ್.ಎ.ವಿನಯ ಇತರರಿದ್ದರು.

-

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net