

ನಾಗಮಂಗಲ: ಜಿಲ್ಲೆಯಲ್ಲಿ ತೀವ್ರ ಕುತೂಹಲ ಕೆರಳಿಸಿದ್ದ ನಾಗಮಂಗಲ ವಿಧಾನಸಭಾ ಕ್ಷೇತ್ರದ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಎನ್.ಚಲುವರಾಯಸ್ವಾಮಿ ಗೆಲುವು ಸಾಧಿಸುವ ಮೂಲಕ, ತಮ್ಮ ರಾಜಕೀಯ ವಿರೋಧಿ ಜೆಡಿಎಸ್ ಅಭ್ಯರ್ಥಿ ಸುರೇಶ್‌ಗೌಡಗೆ ತೀವ್ರ ಮುಖಭಂಗ ಉಂಟುಮಾಡಿದ್ದಾರೆ.
ಕಳೆದ ಚುನಾವಣೆಯಲ್ಲಿ 47 ಸಾವಿರಕ್ಕೂ ಹೆಚ್ಚು ಮತಗಳ ಅಂತರದಿಂದ ಗೆದ್ದು ಬೀಗಿದ್ದ ಶಾಸಕ ಸುರೇಶ್‌ಗೌಡ ಅವರನ್ನು ಈ ಚುನಾವಣೆಯಲ್ಲಿ ಶತಾಯಗತಾಯ ಸೋಲಿಸಲೇಬೇಕೆಂದು ಹಠಕ್ಕೆ ಬಿದ್ದಿದ್ದ ಚಲುವರಾಯಸ್ವಾಮಿ ಮತ್ತು ಕಾಂಗ್ರೆಸ್ ಕಾರ್ಯಕರ್ತರು, ಕೊನೆಗೂ ರಾಜಕೀಯ ಸೇಡು ತೀರಿಸಿಕೊಂಡಿದ್ದಾರೆ.
ಮತ ಎಣಿಕೆ ಆರಂಭದಿಂದಲೂ ಹಾವು ಏಣಿ ಆಟದಂತೆ ತೀವ್ರ ಪೈಪೋಟಿ ಕೊಟ್ಟು ಏಳನೇ ಸುತ್ತಿನಿಂದ ಅಲ್ಪಮತಗಳ ಮುನ್ನಡೆ ಕಾಯ್ದುಕೊಂಡ ಕಾಂಗ್ರೆಸ್‌ನ ಎನ್.ಚಲುವರಾಯಸ್ವಾಮಿ, ತಮ್ಮ ಪ್ರತಿಸ್ಪರ್ಧಿ ಸುರೇಶ್‌ಗೌಡ ಅವರನ್ನು ಪರಾಭವಗೊಳಿಸುವ ಮೂಲಕ ನಾಗಮಂಗಲ ತಾಲೂಕು ಮತ್ತು ಮಂಡ್ಯ ಜಿಲ್ಲೆ ಜೆಡಿಎಸ್‌ನ ಭದ್ರಕೋಟೆಯಲ್ಲ ಎಂಬುದನ್ನು ಸಾಬೀತುಪಡಿಸಿದಂತಾಗಿದೆ.
ಕಾಂಗ್ರೆಸ್ ಅಭ್ಯರ್ಥಿ ಚಲುವರಾಯಸ್ವಾಮಿ ಗೆಲುವು ಸಾಧಿಸುತ್ತಿದ್ದಂತೆ ಪಟ್ಟಣದಲ್ಲಿ ಕೈ ಕಾರ್ಯಕರ್ತರು ಹಾಗೂ ಅಭಿಮಾನಿಗಳು ಸಂಭ್ರಮಿಸಿದರು. ತಮ್ಮ ನಾಯಕ ಗೆದ್ದರೆಂಬ ಖುಷಿಯಲ್ಲಿ ಹುಚ್ಚೆದ್ದು ಕುಣಿದು ಕುಪ್ಪಳಿಸಿ ನಿಷೇಧಾಜ್ಞೆ ನಡುವೆಯೂ ಪಟಾಕಿ ಸಿಡಿಸಿ, ಸಾರ್ವಜನಿಕರಿಗೆ ಸಹಿ ಹಂಚಿ ವಿಜಯೋತ್ಸವ ಆಚರಿಸಿದರು.
ಪಟ್ಟಣದ ಟಿ.ಮರಿಯಪ್ಪ ವೃತ್ತ, ಟಿ.ಬಿ.ಬಡಾವಣೆಯ ಬಿಜಿಎಸ್ ವೃತ್ತ, ಮೈಸೂರು ರಸ್ತೆ, ಮಂಡ್ಯ ರಸ್ತೆ, ಶ್ರೀಸೌಮ್ಯಕೇಶವಸ್ವಾಮಿ ದೇವಸ್ಥಾನದ ಮುಂಭಾಗ ಸೇರಿದಂತೆ ಹಲವು ರಸ್ತೆಗಳಲ್ಲಿ ಭಾರಿ ಪ್ರಮಾಣದಲ್ಲಿ ಪಟಾಕಿ ಸಿಡಿಸಿದ ಕಾಂಗ್ರೆಸ್ ಕಾರ್ಯಕರ್ತರು, ಪಟ್ಟಣದಾದ್ಯಂತ ಬೈಕ್ ರ‌್ಯಾಲಿ ನಡೆಸಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಮಾಜಿ ಸಿಎಂ ಸಿದ್ದರಾಮಯ್ಯ, ಚಲುವರಾಯಸ್ವಾಮಿ ಸೇರಿದಂತೆ ಪಕ್ಷದ ವರಿಷ್ಠರ ಪರ ಜಯಘೋಷ ಕೂಗಿ ಸಂಭ್ರಮ ವ್ಯಕ್ತಪಡಿಸಿದರು.
ಟ್ಟಣದ ಮಂಡ್ಯ ಹಾಗೂ ಮೈಸೂರು ರಸ್ತೆಯ ಮುಸ್ಲಿಂ ಯುವಕರು ಚಲುವರಾಯಸ್ವಾಮಿ ಪರ ಜಯಘೋಷ ಮೊಳಗಿಸಿ, ಕಾಂಗ್ರೆಸ್ ಬಾವುಟ ಹಿಡಿದು ಬೈಕ್‌ರ‌್ಯಾಲಿ ನಡೆಸಿದರು. ತಾಲೂಕಿನ ದೇವಲಾಪುರ, ಬೆಳ್ಳೂರು, ಹೊಣಕೆರೆ, ಬಿಂಡಿಗನವಿಲೆ, ಬೋಗಾದಿ ಸೇರಿದಂತೆ ವಿವಿಧ ಭಾಗಗಳಲ್ಲಿ ಕಾಂಗ್ರೆಸ್ ಕಾರ್ಯಕರ್ತರು ವಿಜಯೋತ್ಸವ ಆಚರಿಸಿದರು.